ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರಣಜಿ ಕ್ರಿಕೆಟ್ ಟ್ರೋಫಿ (Ranji Trophy) ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ (Karnataka Ranji Team) ಉತ್ತರಾಖಂಡ(Uttarakhand) ವಿರುದ್ಧ ಇನ್ನಿಂಗ್ಸ್ ಮತ್ತು 281 ರನ್‌ಗಳ ಭರ್ಜರಿ ಜಯಗಳಿಸಿದೆ. ಈ ಮೂಲಕ ಪಂದ್ಯ ಇನ್ನೂ ಒಂದು ದಿನ ಬಾಕಿ ಇರುವಾಗಲೇ ಸೆಮಿಫೈನಲ್ ಲಗ್ಗೆ ಇಟ್ಟಿದೆ.
ಮೊದಲು ಬ್ಯಾಟಿಂಗ್ ಮಾಡಿದ ಉತ್ತರಾಖಂಡ ತಂದ ಫಸ್ಟ್ ಇನ್ನಿಂಗ್ಸ್‌ನಲ್ಲಿ ಕೇವಲ 116 ರನ್‌ಗಳಿಗೆ ಆಲೌಟ್ ಆಗಿತ್ತು. ಬಳಿಕ ಬ್ಯಾಟಿಂಗ್ ಆರಂಬಿಸಿದ್ದ ಕರ್ನಾಟಕ ಆಲ್ರೌಂಡರ್ ಶ್ರೇಯಸ್ ಗೋಪಾಲ್ 161 ರನ್‌ಗಳ ಅಮೋಘ ಆಟದ ನೆರವಿನಿಂದ ಉತ್ತರಾಖಂಡ ವಿರುದ್ಧ ಮೊದಲ ಇನ್ನಿಂಗ್ಸ್ನ ಲ್ಲಿ 606 ರನ್ ಕಲೆಹಾಕಿತ್ತು. ಇದರೊಂದಿಗೆ ಕರ್ನಾಟಕ 490 ರನ್ ಮುನ್ನಡೆ ಸಾಧಿಸಿತ್ತು. 4ನೇ ದಿನವಾದ ಇಂದು (ಶುಕ್ರವಾರ) ಎದುರಾಳಿಯನ್ನು 281 ರನ್ಗೆ ಆಲೌಟ್ ಮಾಡಿ ಇನ್ನಿಂಗ್ಸ್ ಜಯದೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ.
ಕರ್ನಾಟಕ ರಣಜಿ ತಂಡದಲ್ಲಿ ಪದಾರ್ಪಣ ಪಂದ್ಯವನ್ನಾಡಿದ ಮೈಸೂರಿನ ವೇಗಿ ಮುರಳೀಧರ ವೆಂಕಟೇಶ್ 5 ವಿಕೆಟ್ ಪಡೆಯುವ ಮೂಲಕ ಉತ್ತರಾಖಂಡಕ್ಕೆ ಮಾರಕವಾದರು. ಕೃಷ್ಣಪ್ಪ ಗೌತಮ್ ಮತ್ತು ವಿಧ್ವತ್ ಕಾವೇರಪ್ಪ ತಲಾ ಎರಡು ವಿಕೆಟ್ ಪಡೆದರೆ, ವಿಜಯ್ ಕುಮಾರ್ ವೈಶಾಕ್ 1 ವಿಕೆಟ್ ಪಡೆದಿದ್ದರು. ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಕರ್ನಾಟಕ ಉತ್ತರಾಖಂಡದ ಬೌಲರ್ ಗಳ ಬೆವರಿಳಿಸಿದರು. ಶ್ರೇಯಸ್ ಗೋಪಾಲ್ ಶತಕ ಗಳಿಸುವ ಮೂಲಕ ಮಿಂಚಿದರು.