ದೇಶದಲ್ಲಿ ಕೊರೊನಾ ವೈರಸ್ ತಾಂಡವವಾಡುತ್ತಿದ್ದ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ದೇಶೀಯ ಟೆಸ್ಟ್ ಕ್ರಿಕೆಟ್ ರಣಜಿ ಟ್ರೋಫಿಗೆ (Ranji Trophy 2021-22) ಇದೀಗ ಚಾಲನೆ ಸಿಕ್ಕಿದೆ. ಜೈವಿಕ ಸುರಕ್ಷಾ ವಲಯದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ರಣಜಿ ಕ್ರಿಕೆಟ್ ಟೂರ್ನಿ ಇಂದಿನಿಂದ ಆರಂಭವಾಗಿದೆ. ವಿವಿಧ ತಂಡಗಳು ಇಂದಿನಿಂದ ಲೀಗ್ ಹಂತದ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಮೊದಲ ಹಂತದ ಲೀಗ್ ಮುಖಾಮುಖಿಯಲ್ಲಿ ಒಟ್ಟು 19 ಪಂದ್ಯಗಳು ಏಕಕಾಲಕ್ಕೆ ಶುರುವಾಗಿವೆ. ಮನೀಶ್ ಪಾಂಡೆ ನಾಯಕತ್ವದ ಕರ್ನಾಟಕ ತಂಡ ರೈಲ್ವೇಸ್ (Karnataka vs Railways) ವಿರುದ್ಧ ಕಣಕ್ಕಿಳಿದಿದ್ದು ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದೆ. ಆದರೆ, ಆರಂಭದಲ್ಲೇ ಪ್ರಮುಖ ಮಯಾಂಕ್ ಅಗರ್ವಾಲ್ ವಿಕೆಟ್ ಕಳೆದುಕೊಂಡಿದೆ. 38 ಎಸೆತಗಳಲ್ಲಿ 16 ರನ್ ಗಳಿಸಿದ್ದ ಮಯಾಂಕ್ ರನೌಟ್ಗೆ ಬಲಿಯಾಗಿ ಪೆವಿಲಿಯನ್ ಸೇರಿಕೊಂಡರು. ಆದರೂ ರಾಜ್ಯ ತಂಡ ಬಲಿಷ್ಠವಾಗಿದೆ. ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ (Manish Pandey), ರವಿಕುಮಾರ್ ಸಮರ್ಥ್ ಸೇರಿದಂತೆ ಅನೇಕ ಸ್ಟಾರ್ ಆಟಗಾರರ ದಂಡೇ ಇದೆ.
ಚೆನ್ನೈಯಲ್ಲಿ ನಡೆಯುತ್ತಿರುವ ಸಿ ವಿಭಾಗದ ಪಂದ್ಯದಲ್ಲಿ ಕರ್ನಾಟಕ ತಂಡದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಕಳೆದ ಬಾರಿ ಸಾಧಾರಣ ಪ್ರದರ್ಶನ ನೀಡಿದ್ದ ಕರ್ನಾಟಕದಲ್ಲಿ ಈ ಬಾರಿ ಯುವ ಪ್ರತಿಭೆಗಳೇ ತುಂಬಿದ್ದಾರೆ. ಆಡುವ 11ರ ಬಳಗದಲ್ಲಿ ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ರವಿಕುಮಾರ್ ಸಮರ್ಥ್, ಮನೀಶ್ ಪಾಂಡೆ, ಶ್ರೀನಿವಾಸ್ ಶರತ್, ಕೃಷ್ಣಪ್ಪ ಗೌತಮ್, ಕೃಷ್ಣಮೂರ್ತಿ ಸಿದ್ಧಾರ್ಥ್, ವಿದ್ಯಾದರ್ ಪಾಟಿಲ್, ಶ್ರೇಯಸ್ ಗೋಪಾಲ್, ರೋನಿತ್ ಮೋರೆ, ವಿಜಯ್ ಕುಮಾರ್ ಸ್ಥಾನ ಪಡೆದುಕೊಂಡಿದ್ದಾರೆ. ಇತ್ತ ರೈಲ್ವೇಸ್ ತಂಡವನ್ನು ಕರ್ಣ್ ಶರ್ಮಾ ಮುನ್ನಡೆಸುತ್ತಿದ್ದು, ಮ್ರುನಾಲ್ ದೇವ್ದರ್, ವಿಕೇಕ್ ಸಿಂಗ್, ಶಿವಂ ಚತುರ್ವೇದಿ, ಮೊಹಮ್ಮದ್ ಸೈಫ್, ಅಮಿತ್ ಚಾಂಡಿಕಾ, ಹಿಮಾಂಶು ಸಾಂಗ್ವಾನ ಪ್ರಮುಖ ಆಟಗಾರರಾಗಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಕರ್ನಾಟಕ ತಂಡ ರೈಲ್ವೇಸ್ ಎದುರಿನ ಮೊದಲ ಪಂದ್ಯದಲ್ಲಿ ಜಯ ಗಳಿಸುವ ವಿಶ್ವಾಸದಲ್ಲಿದೆ. ಈ ಎರಡು ತಂಡಗಳು ಮುಖಾಮುಖಿಯಾದಾಗಲೆಲ್ಲ ಕರ್ನಾಟಕ ಮೇಲುಗೈ ಸಾಧಿಸಿದೆ. ಹಿಂದಿನ ಐದು ಪಂದ್ಯಗಳಲ್ಲಿ ಏಕಪಕ್ಷೀಯ ಆಟವಾಡಿರುವುದರಿಂದ ಭರವಸೆಯಲ್ಲಿದೆ.
ಎಲೈಟ್ ಹಂತದಲ್ಲಿ ಒಟ್ಟು 8 ವಿಭಾಗಳಿದ್ದು, ಪ್ರತಿಯೊಂದರಲ್ಲೂ 4 ತಂಡಗಳಿವೆ. ಪ್ಲೇಟ್ ವಿಭಾಗದಲ್ಲಿ 6 ತಂಡಗಳಿಗೆ ಅವಕಾಶ ಕಲ್ಪಿಸಲಾಗಿದೆ. ಭಾರತದ ಟೆಸ್ಟ್ ಸ್ಪೆಷಲಿಸ್ಟ್‌ಗಳಾದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ರಣಜಿ ಆಡಲಿಳಿದದ್ದು ಈ ಸಲದ ವಿಶೇಷ. ಮೊದಲ ಮುಖಾಮುಖೀಯಲ್ಲೇ ಇವರಿಬ್ಬರ ತಂಡಗಳಾದ ಮುಂಬಯಿ ಮತ್ತು ಸೌರಾಷ್ಟ್ರ ಸೆಣೆಸಾಟ ನಡೆಸುತ್ತಿದೆ. ಪೃಥ್ವಿ ಶಾ ನಾಯಕತ್ವದ ಮುಂಬೈ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು 50 ರನ್ಗೂ ಮೊದಲೇ 3 ಪ್ರಮುಖ ವಿಕೆಟ್ ಕಳೆದುಕೊಂಡಿದೆ.
ಟೂರ್ನಿಯಲ್ಲಿ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯವರು ಹೊಸ ಪ್ರತಿಭೆಗಳನ್ನು ಹುಡುಕಲಿದ್ದಾರೆ. ನ್ಯೂಜಿಲೆಂಡ್ ಎದುರಿನ ಸರಣಿಯಲ್ಲಿ ತಂಡದಿಂದ ಹೊರಗಿರಿಸಲಾಗಿದ್ದ ಪ್ರಿಯಾಂಕ್ ಪಾಂಚಾಲ್, ಅಭಿಮನ್ಯು ಈಶ್ವರನ್ ಮತ್ತು ಹನುಮ ವಿಹಾರಿ ಮೇಲೆ ಕ್ರಿಕೆಟ್ ಪ್ರೇಮಿಗಳು ದೃಷ್ಟಿ ನೆಟ್ಟಿದ್ದಾರೆ. 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಮಿಂಚಿದ್ದ ಯಶ್ ಧೂಳ್ ಮತ್ತು ರಾಜ್ ಅಂಗದ್ ಬಾವ ಅವರ ಪ್ರಥಮ ದರ್ಜೆ ಕ್ರಿಕೆಟ್ ಪದಾರ್ಪಣೆಗೆ ಟೂರ್ನಿ ಅವಕಾಶ ಒದಿಗಿಸುವ ಸಾಧ್ಯತೆ ಇದೆ.
IND vs WI T20: ಕೊಹ್ಲಿ ಮಾತು ಕೇಳಿ ರಿವ್ಯೂ ತೆಗೆದುಕೊಂಡ ರೋಹಿತ್ ಶರ್ಮಾಗೆ ಶಾಕ್: ಅಷ್ಟಕ್ಕೂ ಆಗಿದ್ದೇನು ನೋಡಿ
IND vs WI T20: ಪಂದ್ಯ ಮುಗಿದ ಬಳಿಕ ಇಶಾನ್ ಕಿಶನ್ಗೆ ಸ್ಪೆಷಲ್ ಕ್ಲಾಸ್ ತೆಗೆದುಕೊಂಡ ರೋಹಿತ್ ಶರ್ಮಾ