Karnataka vs Uttar Pradesh: ಕರ್ನಾಟಕ ಬೌಲರ್ಗಳ ಮಾರಕ ದಾಳಿಗೆ ತತ್ತರಿಸಿದ ಉತ್ತರ ಪ್ರದೇಶ
Karnataka vs Uttar Pradesh, 3rd Quarter-Final: ಈ ಗುರಿ ಬೆನ್ನತ್ತಿದ ಉತ್ತರ ಪ್ರದೇಶ ತಂಡಕ್ಕೆ ಆರಂಭದಲ್ಲೇ ಆಘಾತ ನೀಡುವಲ್ಲಿ ಕರ್ನಾಟಕ ಬೌಲರ್ಗಳು ಯಶಸ್ವಿಯಾದರು.
ಆಲೂರಿನ ಕೆಎಸ್ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಕ್ವಾರ್ಟರ್ಫೈನಲ್ (Ranji Trophy 2022, Quarterfinals) ಪಂದ್ಯದಲ್ಲಿ ಮೊದಲ ಇನಿಂಗ್ಸ್ನಲ್ಲಿ ಉತ್ತರ ಪ್ರದೇಶ ತಂಡ ಕೇವಲ 155 ರನ್ಗೆ ಆಲೌಟ್ ಆಗಿದೆ. ಕರ್ನಾಟಕ ಬೌಲರ್ಗಳ ಕರಾರುವಾಕ್ ದಾಳಿ ಮುಂದೆ ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದ ಉತ್ತರ ಪ್ರದೇಶದ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಪೆರೇಡ್ ನಡೆಸಿದರು. ಇದಕ್ಕೂ ಮುನ್ನ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಉತ್ತರಪ್ರದೇಶ ತಂಡದ ನಾಯಕ ಕರಣ್ ಶರ್ಮಾ ನಿರ್ಧಾರವನ್ನು ಸಮರ್ಥಿಸುವಂತೆ ಬೌಲರ್ಗಳು ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ್ದರು. ಪರಿಣಾಮ ಕರ್ನಾಟಕ ತಂಡದ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಕೇವಲ 10 ರನ್ಗೆ ಶಿವಂ ಮಾವಿ ಎಸೆತದಲ್ಲಿ ಔಟಾಗಿ ಹೊರನಡೆದರು.
ಇನ್ನು ಅರ್ಧಶತಕ ಗಳಿಸಿದ ರವಿಕುಮಾರ್ ಸಮರ್ಥ್ 30ನೇ ಓವರ್ನಲ್ಲಿ ಸೌರಭ್ ಕುಮಾರ್ಗೆ ವಿಕೆಟ್ ಒಪ್ಪಿಸಿದರು. ಕರುಣ್ ನಾಯರ್ (29) ಶಿವಂ ಮಾವಿ ಸ್ವಿಂಗ್ ಎಸೆತದಲ್ಲಿ ಕ್ಲೀನ್ಬೌಲ್ಡ್ ಆದರೆ, ಕೃಷ್ಣಮೂರ್ತಿ ಸಿದ್ಧಾರ್ಥ್ (37) ಅವರನ್ನು ಶಿವಂ ಮಾವಿ ಬೇಗನೆ ಪೆವಿಲಿಯನ್ಗೆ ಕಳುಹಿಸಿದರು. ಇದರ ಬೆನ್ನಲ್ಲೇ ಕರ್ನಾಟಕ ತಂಡದ ನಾಯಕ ಮನೀಷ್ ಪಾಂಡೆ (27) ಸೌರಭ್ ಕುಮಾರ್ ಎಸೆತದಲ್ಲಿ ವಿಕೆಟ್ ಕೈಚೆಲ್ಲಿದರು. ಮರು ಎಸೆತದಲ್ಲೇ ವಿಕೆಟ್ ಕೀಪರ್ ಬ್ಯಾಟರ್ ಶ್ರೀನಿವಾಸ್ ಶರತ್ ಶೂನ್ಯಕ್ಕೆ ಔಟ್ ಆಗಿದ್ದು ತಂಡಕ್ಕೆ ಮತ್ತಷ್ಟು ಹೊಡೆತ ನೀಡಿತು.
ಇದಾಗ್ಯೂ ಮೊದಲ ದಿನದಾಟದಲ್ಲಿ 7 ವಿಕೆಟ್ ಕಳೆದುಕೊಂಡು 213 ರನ್ಗಳಿಸಿದ್ದ ಕರ್ನಾಟಕಕ್ಕೆ 2ನೇ ದಿನದಾಟದಲ್ಲಿ ಆಸರೆಯಾಗಿದ್ದು ಶ್ರೇಯಸ್ ಗೋಪಾಲ್. ಒಂದೆಡೆ 80 ಎಸೆತಗಳಲ್ಲಿ ಅಜೇಯ 56 ರನ್ ಬಾರಿಸಿ ಶ್ರೇಯಸ್ ಗೋಪಾಲ್ ಮಿಂಚಿದರೆ, ಮತ್ತೊಂದೆಡೆ ವಿಕೆಟ್ ಉರುಳುತ್ತಾ ಸಾಗಿತು. ಪರಿಣಾಮ ಕರ್ನಾಟಕ ತಂಡದ ಮೊದಲ ಇನಿಂಗ್ಸ್ 253 ರನ್ಗಳಿಗೆ ಅಂತ್ಯವಾಯಿತು.
ಈ ಗುರಿ ಬೆನ್ನತ್ತಿದ ಉತ್ತರ ಪ್ರದೇಶ ತಂಡಕ್ಕೆ ಆರಂಭದಲ್ಲೇ ಆಘಾತ ನೀಡುವಲ್ಲಿ ಕರ್ನಾಟಕ ಬೌಲರ್ಗಳು ಯಶಸ್ವಿಯಾದರು. 2ನೇ ಓವರ್ನ ಮೊದಲ ಎಸೆತದಲ್ಲೇ ಸಮರ್ಥ್ ಸಿಂಗ್ರನ್ನು ಔಟ್ ಮಾಡಿ ವಿಜಯ್ ಕುಮಾರ್ ವೈಶಾಖ್ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಆರ್ಯನ್ ಜುಯೆಲ್ರನ್ನು ರೋನಿತ್ ಮೋರೆ ಪೆವಿಲಿಯನ್ಗೆ ಕಳುಹಿಸಿದರು. ಇದಾಗ್ಯೂ ಪ್ರಿಯಂ ಗರ್ಗ್ 39 ರನ್ಗಳಿಸಿ ತಂಡಕ್ಕೆ ಆಸರೆಯಾಗುವ ಸೂಚನೆ ನೀಡಿದ್ದರು. ಈ ಹಂತದಲ್ಲಿ ಮತ್ತೆ ದಾಳಿಗಿಳಿಯದ ರೋನಿತ್ ಮತ್ತೊಂದು ಯಶಸ್ಸು ತಂದುಕೊಟ್ಟರು.
ನಾಯಕ ಕರಣ್ ಶರ್ಮಾರನ್ನು ವಿಜಯ್ ಕುಮಾರ್ ವೈಶಾಖ್ ಕೇವಲ 1 ರನ್ಗೆ ಔಟ್ ಮಾಡಿದರೆ, 33 ರನ್ಗಳಿಸಿದ ರಿಂಕು ಸಿಂಗ್ ಕೃಷ್ಣಪ್ಪ ಗೌತಮ್ ಅವರ ಸ್ಪಿನ್ ಮೋಡಿಗೆ ಬಲಿಯಾದರು. ಇನ್ನು ಧೃವ್ ಜುರೆಯಲ್ 9 ರನ್ಗಳಿಸಿ ರೋನಿತ್ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಪ್ರಿನ್ಸ್ ಯಾದವ್ರನ್ನು ಶೂನ್ಯಕ್ಕೆ ಔಟ್ ಮಾಡಿದ ವಿಧ್ವತ್ ಕಾವೇರಪ್ಪ ಮತ್ತೊಂದು ಯಶಸ್ಸು ತಂದುಕೊಟ್ಟರು. ಹಾಗೆಯೇ ಸೌರಭ್ ಕುಮಾರ್ರನ್ನು ಕೃಷ್ಣಪ್ಪ ಗೌತಮ್ ಅವರು ಶೂನ್ಯ ಔಟ್ ಮಾಡಿದರು.
ಹೀಗೆ ಬ್ಯಾಕ್ ಟು ಬ್ಯಾಕ್ ವಿಕೆಟ್ ಪಡೆದ ಕರ್ನಾಟಕ ಬೌಲರ್ಗಳು 111 ರನ್ಗಳಿಗೆ 9 ವಿಕೆಟ್ ಕಬಳಿಸಿದ್ದರು. ಆದರೆ ಕೊನೆಯ ವಿಕೆಟ್ ವೇಳೆ ಶಿವಂ ಮಾವಿ ಅಂಕಿತ್ ರಜಪೂತ್ ಜೊತೆಗೂಡಿ ಎಚ್ಚರಿಕೆ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಪರಿಣಾಮ ಕೊನೆಯ ವಿಕೆಟ್ಗೆ 44 ರನ್ಗಳ ಜೊತೆಯಾಟ ಮೂಡಿಬಂತು. ಅಂತಿಮವಾಗಿ ಶ್ರೇಯಸ್ ಗೋಪಾಲ್ 33 ರನ್ ಬಾರಿಸಿದ್ದ ಶಿವಂ ಮಾವಿಯ ವಿಕೆಟ್ ಪಡೆಯುವ ಮೂಲಕ ಉತ್ತರ ಪ್ರದೇಶ ತಂಡವನ್ನು 155 ರನ್ಗಳಿಗೆ ಆಲೌಟ್ ಮಾಡಿದರು.
ಕರ್ನಾಟಕ ಪರ ರೋನಿತ್ ಮೋರೆ 3 ವಿಕೆಟ್ ಪಡೆದರೆ, ವಿಧ್ವತ್ ಕಾವೇರಪ್ಪ, ಶ್ರೇಯಸ್ ಗೋಪಾಲ್ ಹಾಗೂ ವಿಜಯ್ ಕುಮಾರ್ ವೈಶಾಖ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು. ಪರಿಣಾಮ ಉತ್ತರ ಪ್ರದೇಶ ತಂಡವು ಮೊದಲ ಇನಿಂಗ್ಸ್ನಲ್ಲಿ 98 ರನ್ಗಳ ಹಿನ್ನಡೆ ಅನುಭವಿಸಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.