Vijay Hazare Trophy: ಕರ್ನಾಟಕ vs ಕನ್ನಡಿಗ; ಬಲಿಷ್ಠ ತಂಡಗಳ ನಡುವೆ ಫೈನಲ್ ಫೈಟ್; ಎಷ್ಟು ಗಂಟೆಗೆ ಪಂದ್ಯ ಆರಂಭ?

|

Updated on: Jan 17, 2025 | 8:20 PM

Vijay Hazare Trophy 2024-25 Final: ವಿಜಯ್ ಹಜಾರೆ ಟ್ರೋಫಿಯ ಫೈನಲ್‌ನಲ್ಲಿ ಕರ್ನಾಟಕ ಮತ್ತು ವಿದರ್ಭ ತಂಡಗಳು ಭೇಟಿಮುಖಾಮುಖಿಯಾಗಲಿವೆ. ಕರ್ನಾಟಕ ತಂಡ ಐದನೇ ಬಾರಿಗೆ ಫೈನಲ್​ಗೆ ಅರ್ಹತೆ ಪಡೆದಿದ್ದರೆ, ಈ ಮೊದಲು ಕರ್ನಾಟಕದಲ್ಲೇ ಆಡಿದ್ದ ಕರುಣ್ ನಾಯರ್ ನಾಯಕತ್ವದ ವಿದರ್ಭ ತಂಡ ಮೊದಲ ಬಾರಿಗೆ ಫೈನಲ್ ತಲುಪಿದೆ. ಎರಡೂ ತಂಡಗಳ ನಾಯಕರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಕರುಣ್ ನಾಯರ್ ಅವರ ಅದ್ಭುತ ಬ್ಯಾಟಿಂಗ್ ಕರ್ನಾಟಕಕ್ಕೆ ಸವಾಲಾಗಿದೆ. ಫೈನಲ್ ಪಂದ್ಯ ಜನವರಿ 18 ರಂದು ನಡೆಯಲಿದೆ.

Vijay Hazare Trophy: ಕರ್ನಾಟಕ vs ಕನ್ನಡಿಗ; ಬಲಿಷ್ಠ ತಂಡಗಳ ನಡುವೆ ಫೈನಲ್ ಫೈಟ್; ಎಷ್ಟು ಗಂಟೆಗೆ ಪಂದ್ಯ ಆರಂಭ?
ವಿಜಯ್ ಹಜಾರೆ ಟ್ರೋಫಿ ಫೈನಲ್
Follow us on

ದೇಶೀ ಟೂರ್ನಿ ವಿಜಯ್ ಹಜಾರೆ ಟ್ರೋಫಿ ಇದೀಗ ಅಂತಿಮ ಹಂತಕ್ಕೆ ಬಂದು ನಿಂತಿದೆ. ಈ ಟೂರ್ನಿಯ ಚಾಂಪಿಯನ್ ಯಾರಾಗುತ್ತಾರೆ ಎಂಬುದು ಕೆಲವೇ ಗಂಟೆಗಳಲ್ಲಿ ಖಚಿತವಾಗಲಿದೆ. ಈ ಫೈನಲ್ ಪಂದ್ಯದ ಇನ್ನೊಂದು ರೋಚಕ ಕಹಾನಿ ಏನೆಂದರೆ ಕರ್ನಾಟಕ ಹಾಗೂ ಕನ್ನಡಿಗನ ನಡುವೆ ಚಾಂಪಿಯನ್ ಪಟ್ಟಕಾಗಿ ಹಣಾಹಣಿ ನಡೆಯಲಿದೆ. ಒಂದೆಡೆ ಕರ್ನಾಟಕ ತಂಡ ಐದನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದುಕೊಂಡಿದ್ದರೆ, ಮತ್ತೊಂದೆಡೆ ಈ ಮೊದಲು ಕರ್ನಾಟಕ ತಂಡದ ಪರ ಆಡುತ್ತಿದ್ದ ಕನ್ನಡಿಗ ಕರುಣ್ ನಾಯರ್ ನಾಯಕತ್ವದಲ್ಲಿ ವಿದರ್ಭ ತಂಡ ಇದೇ ಮೊದಲ ಬಾರಿಗೆ ಫೈನಲ್​ಗೆ ಟಿಕೆಟ್ ಪಡೆದುಕೊಂಡಿದೆ. ಹೀಗಾಗಿ ಫೈನಲ್‌ನಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಕರ್ನಾಟಕ vs ಕನ್ನಡಿಗ

ಇಡೀ ಟೂರ್ನಿಯಲ್ಲಿ ಕರ್ನಾಟಕ ಮತ್ತು ವಿದರ್ಭ ತಂಡಗಳು ಅಮೋಘ ಪ್ರದರ್ಶನ ನೀಡಿ ಅಂತಿಮ ಸುತ್ತಿಗೆ ತಲುಪಿವೆ. ಕರುಣ್ ನಾಯರ್ ನಾಯಕತ್ವದ ವಿದರ್ಭ ತಂಡ ಟೂರ್ನಿಯಲ್ಲಿ ಅಜೇಯವಾಗಿ ಫೈನಲ್ ಪ್ರವೇಶಿದ್ದರೆ, ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ ಒಂದು ಪಂದ್ಯದಲ್ಲಿ ಸೋತು ಫೈನಲ್ ತಲುಪಿದೆ. ಇದಕ್ಕೂ ಮುನ್ನ ನಡೆದಿದ್ದ ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡ, ಹರಿಯಾಣವನ್ನು ಸೋಲಿಸಿದರೆ, ಇತ್ತ ವಿದರ್ಭ ತಂಡ ಮಹಾರಾಷ್ಟ್ರವನ್ನು ಸೋಲಿಸಿ ಫೈನಲ್‌ಗೆ ಟಿಕೆಟ್ ಪಡೆದುಕೊಂಡಿವೆ.

ಉಭಯ ನಾಯಕರ ಆರ್ಭಟ

ಇದರ ಜೊತೆಗೆ ಮತ್ತೊಂದು ಕೌತುಕದ ಸಂಗತಿಯೆಂದರೆ ಎರಡೂ ತಂಡಗಳ ನಾಯಕರು ಇಡೀ ಟೂರ್ನಿಯಲ್ಲಿ ರನ್​ಗಳ ಶಿಖರವನ್ನೇ ಕಟ್ಟಿದ್ದಾರೆ. ಕರ್ನಾಟಕ ತಂಡದ ನಾಯಕ ಮಯಾಂಕ್ ಸೆಮಿಫೈನಲ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದನ್ನು ಬಿಟ್ಟರೆ ಉಳಿದಂತೆ ಅವರ ಪ್ರದರ್ಶನ ಅದ್ಭುತವಾಗಿದೆ. ಇತ್ತ ವಿದರ್ಭ ತಂಡದ ನಾಯಕ ಕರುಣ್ ನಾಯರ್ ಟೂರ್ನಿಯಲ್ಲಿ ಅಧಿಕ ರನ್ ಕಲೆಹಾಕಿದ ಆಟಗಾರನೆನಿಸಿಕೊಂಡಿದ್ದು, ನಾಯರ್ ಇಡೀ ಟೂರ್ನಿಯಲ್ಲಿ 112, 44, 163, 111, 112, 122 ಮತ್ತು 88 ರನ್ ಗಳಿಸಿದ್ದಾರೆ. ಇದರಲ್ಲಿ ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ಇಷ್ಟೂ ಇನ್ನಿಂಗ್ಸ್​ಗಳಲ್ಲಿ ಒಮ್ಮೆ ಮಾತ್ರ ಕರುಣ್ ವಿಕೆಟ್ ಕೈಚೆಲ್ಲಿದ್ದಾರೆ. ಉಳಿದಂತೆ ಎಲ್ಲಾ ಪಂದ್ಯಗಳಲ್ಲೂ ಅಜೇಯರಾಗಿ ಉಳಿದಿದ್ದಾರೆ. ಹೀಗಾಗಿ ನಾಳಿನ ಪಂದ್ಯದಲ್ಲಿ ಕರ್ನಾಟಕ ಗೆಲ್ಲಬೇಕೆಂದರೆ ಕರುಣ್ ಅವರ ವಿಕೆಟ್ ಪಡೆಯುವುದು ಅತ್ಯವಶ್ಯಕವಾಗಿದೆ.

ಪಂದ್ಯದ ಬಗ್ಗೆ ಪೂರ್ಣ ಮಾಹಿತಿ

ಕರ್ನಾಟಕ vs ವಿದರ್ಭ ನಡುವಿನ ವಿಜಯ್ ಹಜಾರೆ ಟ್ರೋಫಿ ಫೈನಲ್ ಯಾವಾಗ ನಡೆಯಲಿದೆ?

ಕರ್ನಾಟಕ vs ವಿದರ್ಭ ನಡುವಿನ ವಿಜಯ್ ಹಜಾರೆ ಟ್ರೋಫಿ ಫೈನಲ್ ಬರೋಡದ ಕೊಟಂಬಿ ಸ್ಟೇಡಿಯಂನಲ್ಲಿ ಜನವರಿ 18 ರಂದು ನಡೆಯಲಿದೆ.

ಕರ್ನಾಟಕ vs ವಿದರ್ಭ ನಡುವಿನ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯ ಯಾವ ಸಮಯಕ್ಕೆ ಆರಂಭ?

ಕರ್ನಾಟಕ vs ವಿದರ್ಭ ನಡುವಿನ ವಿಜಯ್ ಹಜಾರೆ ಟ್ರೋಫಿ ಫೈನಲ್ ಶನಿವಾರ ಮಧ್ಯಾಹ್ನ 1:30 ಕ್ಕೆ ಆರಂಭವಾಗಲಿದೆ.

ಕರ್ನಾಟಕ vs ವಿದರ್ಭ ನಡುವಿನ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯವನ್ನು ಎಲ್ಲಿ ವೀಕ್ಷಿಸಬಹುದು?

ಕರ್ನಾಟಕ vs ವಿದರ್ಭ ನಡುವಿನ ವಿಜಯ್ ಹಜಾರೆ ಟ್ರೋಫಿ ಫೈನಲ್ ಅನ್ನು JioCinema ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು ಮತ್ತು Sports18 ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಿರಲಿದೆ.

ಎರಡೂ ತಂಡಗಳು

ವಿದರ್ಭ: ಕರುಣ್ ನಾಯರ್ (ನಾಯಕ), ನಚಿಕೇತ್ ಭೂತೆ, ಶುಭಂ ದುಬೆ, ಹರ್ಷ್ ದುಬೆ, ಪ್ರಫುಲ್ ಹಿಂಗೆ, ಯಶ್ ಕದಮ್, ಅಮನ್ ಮೊಖಡೆ, ದರ್ಶನ್ ನಲ್ಕಂಡೆ, ಯಶ್ ರಾಥೋಡ್, ಪಾರ್ಥ್ ರೇಖಡೆ, ಜಿತೇಶ್ ಶರ್ಮಾ, ಧ್ರುವ ಶೌರೆ, ಅಥರ್ವ ತಾಯ್ಡೆ, ಆದಿತ್ಯ, ಅಪೂರ್ವ ವಾಂಖೆಡೆ, ಯಶ್ ಠಾಕೂರ್

ಕರ್ನಾಟಕ: ಮಯಾಂಕ್ ಅಗರ್ವಾಲ್ (ನಾಯಕ), ಶ್ರೇಯಸ್ ಗೋಪಾಲ್ (ಉಪನಾಯಕ), ಅಭಿಲಾಷ್ ಶೆಟ್ಟಿ, ಕೆವಿ ಅನೀಶ್, ಕಿಶನ್ ಬೇಡರೆ, ಮನೋಜ್ ಭಾಂಡಗೆ, ಪ್ರವೀಣ್ ದುಬೆ, ಹಾರ್ದಿಕ್ ರಾಜ್, ವಿ ಕೌಶಿಕ್, ಅಭಿನವ್ ಮನೋಹರ್, ನಿಕಿನ್ ಜೋಸ್, ವಿದ್ಯಾಧರ್ ಪಾಟೀಲ್, ಕೆಎಲ್ ಶ್ರೀಜಿತ್, ಲವನೀತ್ ಸಿಸೋಡಿಯಾ, ಆರ್ ಸ್ಮರಣ್, ವಿಜಯಕುಮಾರ್ ವೈಶಾಕ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ