- Kannada News Photo gallery Cricket photos Rohit Sharma keeps his spot as captain for Champions Trophy
Champions Trophy 2025: ರೋಹಿತ್ ಶರ್ಮಾ ನಾಯಕತ್ವ ಖಚಿತ
Champions Trophy India Squad: ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ಇಂದು ಭಾರತ ತಂಡವನ್ನು ಪ್ರಕಟಿಸಲಿದ್ದಾರೆ. ಈ ಟೂರ್ನಿಯಲ್ಲಿ ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದು, ಹಿಟ್ ಮ್ಯಾನ್ ಜೊತೆಗೆ 15 ಸದಸ್ಯರ ಬಳಗ ಕಾಣಿಸಿಕೊಳ್ಳಲಿದೆ. ಈ 15 ಸದಸ್ಯರ ತಂಡದ ಆಯ್ಕೆ ಪ್ರಕ್ರಿಯೆ ಮುಗಿದಿದ್ದು, ಜನವರಿ 18 ರಂದು ತಂಡವನ್ನು ಪ್ರಕಟಿಸಲಾಗುತ್ತದೆ ಎಂದು ವರದಿಯಾಗಿದೆ.
Updated on: Jan 18, 2025 | 7:53 AM

ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿರುವುದು ಖಚಿತವಾಗಿದೆ. ಬಾರ್ಡರ್ - ಗವಾಸ್ಕರ್ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ಕೇಳಿ ಬಂದ ನಾಯಕತ್ವದ ಬದಲಾವಣೆಗೆ ಬಿಸಿಸಿಐ ಆಯ್ಕೆ ಸಮಿತಿ ತಾತ್ಕಾಲಿಕ ವಿರಾಮವಿಟ್ಟಿದ್ದಾರೆ. ಅಲ್ಲದೆ ಏಕದಿನ ತಂಡದ ನಾಯಕರಾಗಿ ರೋಹಿತ್ ಶರ್ಮಾ ಅವರನ್ನೇ ಮುಂದುವರೆಸಲು ನಿರ್ಧರಿಸಿದ್ದಾರೆ.

ಅದರಂತೆ ಇಂಗ್ಲೆಂಡ್ ವಿರುದ್ಧದ ಮೂರು ಏಕದಿನ ಪಂದ್ಯಗಳಲ್ಲಿ ಮತ್ತು ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಟೀಮ್ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಇದಾಗ್ಯೂ ಚಾಂಪಿಯನ್ಸ್ ಟ್ರೋಫಿ ಬಳಿಕ ಭಾರತ ಏಕದಿನ ತಂಡದ ನಾಯಕ ಬದಲಾಗುವ ಸಾಧ್ಯತೆ ಹೆಚ್ಚಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿನ ಟೀಮ್ ಇಂಡಿಯಾದ ಪ್ರದರ್ಶನದ ಆಧಾರದ ಮೇಲೆ ಭಾರತ ತಂಡದಲ್ಲಿ ಮಹತ್ವದ ಬದಲಾವಣೆ ಆಗಲಿದೆ. 2027 ರ ಏಕದಿನ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಹೊಸ ತಂಡವನ್ನು ರೂಪಿಸಲು ಚಿಂತಿಸಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ. ಹೀಗಾಗಿ ನಾಯಕ ಸೇರಿದಂತೆ ತಂಡದಲ್ಲಿ ಒಂದಷ್ಟು ಬದಲಾವಣೆ ಕಂಡು ಬರುವುದು ಖಚಿತ.

ಏಕೆಂದರೆ ರೋಹಿತ್ ಶರ್ಮಾ ಅವರಿಗೆ ಈಗ 37 ವರ್ಷ. ಅವರು ಮುಂದಿನ 2 ವರ್ಷಗಳ ತಂಡದಲ್ಲಿ ಇರುವುದಿಲ್ಲ ಎಂದೇ ಹೇಳಬಹುದು. ಹೀಗಾಗಿ ಹಿಟ್ ಮ್ಯಾನ್ ಪಾಲಿಗೆ ಇದುವೇ ಕೊನೆಯ ಐಸಿಸಿ ಟೂರ್ನಿ ಆಗಿರಲಿದೆ. ಅಲ್ಲದೆ ಚಾಂಪಿಯನ್ಸ್ ಟ್ರೋಫಿ ಬಳಿಕ ಅವರ ಕಡೆಯಿಂದ ನಿವೃತ್ತಿಯನ್ನು ನಿರೀಕ್ಷಿಸಬಹುದು.

ಇನ್ನು ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಫೆಬ್ರವರಿ 19 ರಿಂದ ಶುರುವಾಗಲಿದೆ. ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಯೋಜಿಸುತ್ತಿರುವ ಈ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಅಂದರೆ ಈ ಪಂದ್ಯಾವಳಿಯ ಬಹುತೇಕ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ, ಭಾರತದ ಪಂದ್ಯಗಳು ದುಬೈನಲ್ಲಿ ಜರುಗಲಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿನ ಟೀಮ್ ಇಂಡಿಯಾ ವೇಳಾಪಟ್ಟಿ ಈ ಕೆಳಗಿನಂತಿದೆ...

ಟೀಮ್ ಇಂಡಿಯಾ ಫೆಬ್ರವರಿ 20 ರಂದು ಕಣಕ್ಕಿಳಿಯುವ ಮೂಲಕ ಚಾಂಪಿಯನ್ಸ್ ಟ್ರೋಫಿ ಅಭಿಯಾನ ಆರಂಭಿಸಲಿದೆ. ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವನ್ನು ಎದುರಿಸಲಿದ್ದು, ಈ ಪಂದ್ಯಕ್ಕೆ ದುಬೈನ ಇಂಟರ್ನ್ಯಾಷನಲ್ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಇನ್ನು ಟೀಮ್ ಇಂಡಿಯಾದ 2ನೇ ಎದುರಾಳಿ ಪಾಕಿಸ್ತಾನ್. ಹೈವೋಲ್ಟೇಜ್ ಪೈಪೋಟಿಗೆ ಸಾಕ್ಷಿಯಾಗಲಿರುವ ಈ ಪಂದ್ಯವು ಫೆಬ್ರವರಿ 23 ರಂದು ನಡೆಯಲಿದೆ. ಈ ಪಂದ್ಯ ಕೂಡ ದುಬೈ ಅಂತಾರಾಷ್ಟ್ಟೀಯ ಸ್ಟೇಡಿಯಂನಲ್ಲೇ ಜರುಗಲಿದೆ.

ಹಾಗೆಯೇ ಭಾರತ ತಂಡವು ತನ್ನ ಕೊನೆಯ ಲೀಗ್ ಮ್ಯಾಚ್ನಲ್ಲಿ ನ್ಯೂಝಿಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯವು ಮಾರ್ಚ್ 2 ರಂದು ದುಬೈನಲ್ಲೇ ನಡೆಯಲಿದೆ. ಅಂದರೆ ಮೊದಲ ಸುತ್ತಿನಲ್ಲಿ ಟೀಮ್ ಇಂಡಿಯಾ ಮೂರು ಪಂದ್ಯಗಳನ್ನು ದುಬೈನಲ್ಲೇ ಆಡಲಿದೆ.



















