
2025 ರ ರಣಜಿ ಟ್ರೋಫಿಯ ಮೂರನೇ ಸುತ್ತು ಇಂದಿನಿಂದ ಆರಂಭವಾಗಿದೆ. ಅದರಂತೆ ಕರ್ನಾಟಕ ತಂಡ ತನ್ನ ಮೂರನೇ ಪಂದ್ಯವನ್ನು ಮಂಗಳಾಪುರಂನ ಕೆಸಿಎ ಕ್ರಿಕೆಟ್ ಮೈದಾನದಲ್ಲಿ ಕೇರಳ ವಿರುದ್ಧ ಆಡುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಕರ್ನಾಟಕ ತಂಡ ಮೊದಲ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 319 ರನ್ ಕಲೆಹಾಕಿದೆ.

ತಂಡಕ್ಕೆ ಉತ್ತಮ ಆರಂಭ ಸಿಗದ ಹೊರತಾಗಿಯೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳು ತಂಡದ ಕೈಹಿಡಿದಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಬಂದ ಶ್ರೀಜಿತ್ 65 ರನ್‌ಗಳ ಇನ್ನಿಂಗ್ಸ್ ಆಡಿದರೆ, ಕರುಣ್ ನಾಯರ್ ಅಜೇಯ 142 ರನ್‌ಗಳ ಇನ್ನಿಂಗ್ಸ್ ಆಡಿದ್ದಾರೆ. ಇವರಿಗೆ ಸಾಥ್ ನೀಡುತ್ತಿರುವ ಸ್ಮರಣ್ ರವಿಚಂದ್ರನ್ ಕೂಡ ಅಜೇಯ 88 ರನ್‌ಗಳ ಇನ್ನಿಂಗ್ಸ್ ಆಡಿದ್ದಾರೆ.

ವಾಸ್ತವವಾಗಿ ಪ್ರಸ್ತುತ ರಣಜಿಯಲ್ಲಿ ಕರುಣ್ ನಾಯರ್ ಅವರ ಸತತ ಎರಡನೇ ಶತಕ ಇದಾಗಿದೆ. ಕರುಣ್ 160 ಎಸೆತಗಳಲ್ಲಿ 10 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ ತಮ್ಮ ಶತಕವನ್ನು ಪೂರೈಸಿದರು. ಇದು ಕರುಣ್ ನಾಯರ್ ಅವರ ಪ್ರಥಮ ದರ್ಜೆ ವೃತ್ತಿಜೀವನದಲ್ಲಿ 26 ನೇ ಶತಕವಾಗಿದೆ. ಈ ಶತಕದ ಇನ್ನಿಂಗ್ಸ್‌ನಲ್ಲಿ, ಕರುಣ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 9 ಸಾವಿರ ರನ್‌ಗಳನ್ನು ಪೂರೈಸಿದರು.

ಈ ಪಂದ್ಯಕ್ಕೂ ಮುನ್ನ ನಡೆದ ಗೋವಾ ವಿರುದ್ಧದ ಪಂದ್ಯದಲ್ಲೂ ಕರುಣ್ ಶತಕ ಬಾರಿಸಿದ್ದರು. ಗೋವಾ ವಿರುದ್ಧ ಅಜೇಯ 174 ರನ್ ಬಾರಿಸಿದ್ದ ಕರುಣ್, ಸೌರಾಷ್ಟ್ರ ವಿರುದ್ಧದ ಮೊದಲ ಪಂದ್ಯದಲ್ಲೂ 73 ರನ್ ಬಾರಿಸಿದ್ದರು. ಇನ್ನು ಕೇರಳ ವಿರುದ್ಧದ ಈ ಪಂದ್ಯದಲ್ಲಿ ಶತಕ ಬಾರಿಸುವುದರ ಜೊತೆಗೆ ಕರುಣ್, ಶ್ರೀಜಿತ್ ಅವರೊಂದಿಗೆ ಮೂರನೇ ವಿಕೆಟ್‌ಗೆ 123 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.ನಂತರ ಸ್ಮರಣ್ ರವಿಚಂದ್ರನ್ ಅವರೊಂದಿಗೆ ನಾಯರ್ ನಾಲ್ಕನೇ ವಿಕೆಟ್‌ಗೆ ಅದ್ಭುತ ಪಾಲುದಾರಿಕೆಯನ್ನು ಹಂಚಿಕೊಂಡು ಕರ್ನಾಟಕವನ್ನು 300 ರನ್‌ಗಳ ಗಡಿ ದಾಟಿಸಿದರು.

ವಾಸ್ತವವಾಗಿ ಕಳೆದ ರಣಜಿ ಸೀಸನ್ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ್ದ ಕರುಣ್ಗೆ 8 ವರ್ಷಗಳ ನಂತರ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಆದಾಗ್ಯೂ, ಆ ಪ್ರವಾಸದ ಸಮಯದಲ್ಲಿ ಕರುಣ್ ರನ್ ಗಳಿಸಲು ಹೆಣಗಾಡಿದರು. ಆಡಿದ ನಾಲ್ಕು ಟೆಸ್ಟ್ ಪಂದ್ಯಗಳ ಎಂಟು ಇನ್ನಿಂಗ್ಸ್‌ಗಳಲ್ಲಿ ಕೇವಲ 205 ರನ್ ಬಾರಿಸಿದ್ದರು. ಇದರಲ್ಲಿ ಕೇವಲ ಒಂದು ಅರ್ಧಶತಕ ಸೇರಿತ್ತು.

ಹೀಗಾಗಿ ಈ ಸರಣಿಯ ಬಳಿಕ ಅವರನ್ನು ತಂಡದಿಂದ ಹೊರಹಾಕಲಾಯಿತು. ಇದರ ಪರಿಣಾಮವಾಗಿ ಕರುಣ್ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ ತವರು ಸರಣಿಯಿಂದಲೂ ಹೊರಗಿಡಲಾಯಿತು. ಇದೀಗ ರಣಜಿಯಲ್ಲಿ ಅಬ್ಬರಿಸುತ್ತಿರುವ ನಾಯರ್ ಈಗ ಮತ್ತೆ ಭಾರತ ಟೆಸ್ಟ್ ತಂಡಕ್ಕೆ ಮರಳಲು ಪ್ರಯತ್ನಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಗೆ ಅವರಿಗೆ ಅವಕಾಶ ಸಿಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.