IND vs ENG: ಟಿ20 ವಿಶ್ವಕಪ್‌ನಿಂದ ಔಟ್; ರೋಹಿತ್ ಪಡೆಯ ಹೀನಾಯ ಸೋಲಿಗೆ 4 ಕಾರಣಗಳಿವು..!

| Updated By: ಪೃಥ್ವಿಶಂಕರ

Updated on: Nov 10, 2022 | 5:18 PM

T20 World Cup 2022: 2007ರಲ್ಲಿ ಚಾಂಪಿಯನ್ ಆಗಿದ್ದ ಟೀಂ ಇಂಡಿಯಾದ ಮತ್ತೊಮ್ಮೆ ಟಿ20 ವಿಶ್ವಕಪ್ ಗೆಲ್ಲುವ ಕನಸು ಭಗ್ನಗೊಂಡಿತು. 2022 ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ಏಕೆ ಸೋತಿತು ಎಂಬುದಕ್ಕೆ 4 ಪ್ರಮುಖ ಕಾರಣಗಳ ವಿವರಣೆ ಹೀಗಿದೆ.

IND vs ENG: ಟಿ20 ವಿಶ್ವಕಪ್‌ನಿಂದ ಔಟ್; ರೋಹಿತ್ ಪಡೆಯ ಹೀನಾಯ ಸೋಲಿಗೆ 4 ಕಾರಣಗಳಿವು..!
ರೋಹಿತ್ ಶರ್ಮಾ
Follow us on

2022ರ ಐಸಿಸಿ ಟಿ20 ವಿಶ್ವಕಪ್‌ನ (T20 World Cup 2022) ಎರಡನೇ ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ (Team India) ಇಂಗ್ಲೆಂಡ್ ಎದುರು 10 ವಿಕೆಟ್​ಗಳಿಂದ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರೋಹಿತ್ ಪಡೆ ಕೇವಲ 168 ರನ್ ಟಾರ್ಗೆಟ್ ನೀಡಿತು. ಟಾರ್ಗೆಟ್ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಈ ಸ್ಕೋರ್ ತುಂಬಾ ಕಡಿಮೆ ಎಂದು ಸಾಬೀತುಪಡಿಸಿತು. ಇಂಗ್ಲೆಂಡ್‌ನ ಆರಂಭಿಕ ಆಟಗಾರ ಅಲೆಕ್ಸ್ ಹೇಲ್ಸ್ ಮತ್ತು ನಾಯಕ ಜೋಸ್ ಬಟ್ಲರ್ ಶತಕದ ಜೊತೆಯಾಟ ನಡೆಸಿ ಇಂಗ್ಲೆಂಡ್‌ ತಂಡವನ್ನು ಫೈನಲ್​ಗೆ ಕರೆದೊಯ್ದರು. ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ-ಹಾರ್ದಿಕ್ ಪಾಂಡ್ಯ (Virat Kohli-Hardik Pandya) ಅರ್ಧಶತಕ ಗಳಿಸಿದರಾದರೂ ತಂಡದ ಬೌಲಿಂಗ್ ಸಂಪೂರ್ಣ ವಿಫಲವಾಯಿತು. ಇದೇ ಕಾರಣಕ್ಕೆ ಟೀಂ ಇಂಡಿಯಾ ಫೈನಲ್ ತಲುಪಲು ಸಾಧ್ಯವಾಗಲಿಲ್ಲ.

ಮತ್ತೊಂದೆಡೆ, ಇಂಗ್ಲೆಂಡ್ ಮೂರನೇ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದೆ. 2010ರಲ್ಲಿ ಟಿ20 ವಿಶ್ವಕಪ್ ಗೆದ್ದಿದ್ದ ಇಂಗ್ಲೆಂಡ್ 2016ರಲ್ಲೂ ಫೈನಲ್ ತಲುಪಿದ್ದು, ಇದೀಗ 6 ವರ್ಷಗಳ ಬಳಿಕ ಈ ತಂಡ ಫೈನಲ್ ತಲುಪಿದೆ. ಹಾಗೆಯೇ 2007ರಲ್ಲಿ ಚಾಂಪಿಯನ್ ಆಗಿದ್ದ ಟೀಂ ಇಂಡಿಯಾ ಮತ್ತೊಮ್ಮೆ ಟಿ20 ವಿಶ್ವಕಪ್ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದೆ. 2022 ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ಏಕೆ ಸೋತಿತು ಎಂಬುದಕ್ಕೆ 4 ಪ್ರಮುಖ ಕಾರಣಗಳ ವಿವರಣೆ ಹೀಗಿದೆ.

1. ಆರಂಭಿಕರ ವೈಫಲ್ಯ

ಟೀಮ್ ಇಂಡಿಯಾದ ಆರಂಭಿಕ ಜೊತೆಯಾಟ ಇಡೀ ವಿಶ್ವಕಪ್​ನಲ್ಲೇ ವಿಫಲವಾಗಿದೆ. ಈ ವೈಫಲ್ಯದ ಸರಣಿ ಸೆಮಿಫೈನಲ್‌ನಲ್ಲಿಯೂ ಕಂಡುಬಂತು. ಇಂಗ್ಲೆಂಡ್ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿದಿದ್ದ ರೋಹಿತ್ ಹಾಗೂ ರಾಹುಲ್ ಕೇವಲ 9 ರನ್ ಗಳಿಸಿ ಬೇರ್ಪಟ್ಟರು. ಹೀಗಾಗಿ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ ಟೀಂ ಇಂಡಿಯಾ ಪವರ್‌ಪ್ಲೇಯಲ್ಲಿ ಕೇವಲ 38 ರನ್ ಗಳಿಸಲಷ್ಟೇ ಶಕ್ತವಾಯಿತು.

2. ನಿರ್ಣಾಯಕ ಪಂದ್ಯದಲ್ಲಿ ರೋಹಿತ್-ಸೂರ್ಯ ಆಡಲಿಲ್ಲ

ಇಡೀ ಟಿ20 ವಿಶ್ವಕಪ್‌ನಲ್ಲಿ ನಾಯಕ ರೋಹಿತ್ ಶರ್ಮಾ ಅವರ ಬ್ಯಾಟ್ ಸದ್ದು ಮಾಡಲಿಲ್ಲ. ಆ ಫ್ಲಾಪ್ ಸರಣಿ ಸೆಮಿಫೈನಲ್‌ನಲ್ಲಿಯೂ ಕಂಡುಬಂತು. ಈ ಪಂದ್ಯದಲ್ಲಿ ಆಮೆ ಗತಿಯ ಬ್ಯಾಟಿಂಗ್ ಮಾಡಿದ ರೋಹಿತ್ 28 ಎಸೆತಗಳಲ್ಲಿ 27 ರನ್ ಗಳಿಸಲಷ್ಟೇ ಶಕ್ತರಾದರು. ಮತ್ತೊಂದೆಡೆ ಸೂರ್ಯಕುಮಾರ್ ಯಾದವ್ 10 ಎಸೆತಗಳಲ್ಲಿ 14 ರನ್ ಗಳಿಸಿ ಬ್ಯಾಟ್ ಎತ್ತಿಟ್ಟರು.

3. ಭಾರತದ ಕಳಪೆ ಬೌಲಿಂಗ್

ಸೂಪರ್-12ರಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಅರ್ಷದೀಪ್ ಸಿಂಗ್ ಮತ್ತು ಭುವನೇಶ್ವರ್ ಕುಮಾರ್ ಸೆಮಿಫೈನಲ್​ನಲ್ಲಿ ನಿರಾಸೆ ಮೂಡಿಸಿದರು. ಪವರ್‌ಪ್ಲೇಯಲ್ಲಿ ಇಬ್ಬರೂ ವಿಕೆಟ್‌ಗಳನ್ನು ತೆಗೆಯಲು ಅಥವಾ ರನ್‌ಗಳನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಭುವನೇಶ್ವರ್ ಕುಮಾರ್ ಅವರ ಎಕಾನಮಿ ರೇಟ್ ಪ್ರತಿ ಓವರ್‌ಗೆ 10 ರನ್‌ಗಳಿಗಿಂತ ಹೆಚ್ಚಿತ್ತು. ಶಮಿ, ಅಶ್ವಿನ್ ಮತ್ತು ಪಾಂಡ್ಯ ಕೂಡ ಪ್ರತಿ ಓವರ್‌ಗೆ 10ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟರು.

4. ಕಳಪೆ ಪ್ಲೇಯಿಂಗ್ XI ಆಯ್ಕೆ

ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಆಯ್ಕೆಯೂ ಎಲ್ಲೋ ಸೋಲಿಗೆ ಕಾರಣವಾಗಿತ್ತು. ವಿಕೆಟ್ ಟೇಕರ್ ಸ್ಪಿನ್ನರ್‌ಗೆ ಭಾರತ ಆಡುವ XI ನಲ್ಲಿ ಸ್ಥಾನ ನೀಡಲಿಲ್ಲ. ಟಿ20 ವಿಶ್ವಕಪ್ ಆರಂಭದಿಂದಲೂ ಬೌಲಿಂಗ್​ನಲ್ಲಿ ಸತತ ವೈಫಲ್ಯ ಅನುಭವಿಸಿರುವ ಅಕ್ಷರ್ ಪಟೇಲ್‌ಗೆ ಪದೇ ಪದೇ ಅವಕಾಶ ನೀಡಲಾಯಿತು. ಆದರೆ ಇಂಗ್ಲೆಂಡ್ ಪರ ಅತ್ಯುತ್ತಮ ಟ್ರ್ಯಾಕ್ ರೆಕಾರ್ಡ್​ ಹೊಂದಿರುವ ಯುಜುವೇಂದ್ರಗೆ ಇಡೀ ಪಂದ್ಯಾವಳಿಯಲ್ಲಿ ಒಂದೇ ಒಂದು ಅವಕಾಶ ನೀಡಲಿಲ್ಲ.

Published On - 5:13 pm, Thu, 10 November 22