IND vs ENG: 10 ವಿಕೆಟ್‌ಗಳ ಹೀನಾಯ ಸೋಲು; ಬಿಸಿಸಿಐ ಈಗಲಾದರೂ ಬದಲಾಗಬೇಕು ಎಂದ ಕೋಚ್ ರಾಹುಲ್
T20 World Cup 2022: ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಬಿಸಿಸಿಐ ಮೇಲೆ ಗಂಭೀರ ಆರೋಪ ಹೊರಿಸಿದ್ದು, ಮಂಡಳಿಯ ಚಿಂತನೆಯ ಬಗ್ಗೆ ದ್ರಾವಿಡ್ ಪ್ರಶ್ನೆಗಳನ್ನು ಎತ್ತಿದ್ದಾರೆ.
2022 ರ ಟಿ20 ವಿಶ್ವಕಪ್‌ನ (T20 World Cup 2022) ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ (Team India) ಹೀನಾಯವಾಗಿ ಸೋಲನುಭವಿಸಿದೆ. ಭಾರತ ನೀಡಿದ 169 ರನ್‌ಗಳ ಗುರಿಯನ್ನು ಇಂಗ್ಲೆಂಡ್ ಯಾವುದೇ ವಿಕೆಟ್ ನಷ್ಟವಿಲ್ಲದೆ ಗೆದ್ದು ಫೈನಲ್ಗೆ ಲಗ್ಗೆ ಇಟ್ಟಿದೆ. ಇಂಗ್ಲೆಂಡ್‌ನ ಎದುರು ಇಂತಹ ಹೀನಾಯ ಸೋಲಿನ ನಂತರ ಟೀಮ್ ಇಂಡಿಯಾ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ತಂಡದ ಪ್ರದರ್ಶನದ ಬಗ್ಗೆ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಅದರಲ್ಲೂ ನಾಯಕ ಹಾಗೂ ಉಪನಾಯಕನ ಆಟಕ್ಕೆ ಎಲ್ಲೆಡೆ ಛೀಮಾರಿ ಹಾಕಲಾಗುತ್ತಿದೆ. ಆದರೆ ಇದೆಲ್ಲದರ ನಡುವೆ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid), ಬಿಸಿಸಿಐ (BCCI) ಮೇಲೆ ಗಂಭೀರ ಆರೋಪ ಹೊರಿಸಿದ್ದು, ಮಂಡಳಿಯ ಚಿಂತನೆಯ ಬಗ್ಗೆ ದ್ರಾವಿಡ್ ಪ್ರಶ್ನೆಗಳನ್ನು ಎತ್ತಿದ್ದಾರೆ.
ಟಿ20 ವಿಶ್ವಕಪ್‌ನಿಂದ ಟೀಂ ಇಂಡಿಯಾ ಹೊರಬಿದ್ದ ಬಳಿಕ ಮಾತನಾಡಿದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ವಿದೇಶಿ ಲೀಗ್‌ಗಳಲ್ಲಿ ಆಡುವುದರಿಂದ ನಮ್ಮ ಆಟಗಾರರಿಗೆ ಸಹಾಯವಾಗುತ್ತದೆ. ಈ ಬಗ್ಗೆ ಚಿಂತನೆ ನಡೆಸುವುದು ಬಿಸಿಸಿಐ ನಿರ್ಧಾರಕ್ಕೆ ಬಿಟ್ಟದ್ದು ಎಂದು ಹೇಳುವ ಮೂಲಕ ಬಿಸಿಸಿಐ ನಿಲುವನ್ನು ಪ್ರಶ್ನಿಸಿದ್ದಾರೆ. ರಾಹುಲ್ ಹೀಗೆ ಪ್ರಶ್ನೆ ಮಾಡುವುದಕ್ಕೂ ಪ್ರಮುಖ ಕಾರಣವಿದ್ದು, ಐಪಿಎಲ್ಗಾಗಿ ವಿಶ್ವದ ಎಲ್ಲಾ ಆಟಗಾರರನ್ನು ಭಾರತಕ್ಕೆ ಬರಮಾಡಿಕೊಳ್ಳುವ ಬಿಸಿಸಿಐ, ಭಾರತೀಯ ಆಟಗಾರರು ಮಾತ್ರ ವಿದೇಶಿ ಲೀಗ್‌ಗಳಲ್ಲಿ ಆಡುವುದಕ್ಕೆ ನಿಷೇಧ ಹೇರಿದೆ. ಹೀಗಾಗಿ ಭಾರತೀಯ ಕ್ರಿಕೆಟ್‌ಗೆ ಸಂಬಂಧಿಸಿದ ಯಾವುದೇ ಕ್ರಿಕೆಟಿಗರು ವಿದೇಶಿ ಲೀಗ್‌ಗಳಲ್ಲಿ ಆಡುವಂತಿಲ್ಲ.
ವಿದೇಶಿ ಲೀಗ್‌ಗಳಲ್ಲಿ ಆಡುವುದರಿಂದಾಗುವ ಪ್ರಯೋಜನಗಳು
ಭಾರತದ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ವಿಶ್ವದಾದ್ಯಂತ ಲೀಗ್‌ಗಳಲ್ಲಿ ಆಡುತ್ತಾರೆ. ಹೇಲ್ಸ್ ಐಪಿಎಲ್ ಹೊರತಾಗಿ ಕೆರಿಬಿಯನ್ ಪ್ರೀಮಿಯರ್ ಲೀಗ್, ಪಾಕಿಸ್ತಾನ್ ಸೂಪರ್ ಲೀಗ್ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್‌ಗಳಲ್ಲಿ ಆಡಿದ್ದಾರೆ. ಅಲೆಕ್ಸ್ ಹೇಲ್ಸ್ ಬಿಗ್ ಬ್ಯಾಷ್ನಲ್ಲಿ ಆಡುವ ಲಾಭ ಪಡೆದಿದ್ದು, ಟಿ20 ವಿಶ್ವಕಪ್‌ನಲ್ಲಿ ಈ ಆಟಗಾರ ಅದ್ಭುತ ಪ್ರದರ್ಶನ ನೀಡಿದ್ದಾರೆ. ವಿದೇಶಿ ಲೀಗ್‌ಗಳಲ್ಲಿ ಆಡುವ ಮೂಲಕ ಆಟಗಾರರಿಗೆ ಆ ದೇಶದ ಪರಿಸ್ಥಿತಿಗಳು ಮತ್ತು ಪಿಚ್‌ಗಳ ಬಗ್ಗೆ ಅರಿವು ಹೆಚ್ಚಾಗುತ್ತದೆ. ಇದು ಐಸಿಸಿ ಪಂದ್ಯಾವಳಿಗಳಲ್ಲಿ ಸಹಾಯಕ್ಕೆ ಬರುತ್ತದೆ.
10 ವಿಕೆಟ್ ನಷ್ಟಕ್ಕೆ ಮುಖ್ಯ ಕೋಚ್ ಹೇಳಿದ್ದೇನು?
10 ವಿಕೆಟ್‌ಗಳ ಸೋಲಿನ ಬಗ್ಗೆ ಮಾತನಾಡಿದ ರಾಹುಲ್ ದ್ರಾವಿಡ್, ಕ್ರಿಕೆಟ್ನಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಈ ಸೋಲಿನಿಂದ ನನಗೆ ಖಂಡಿತ ನಿರಾಸೆಯಾಗಿದೆ ಎಂದು ಹೇಳಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಎರಡು ಬಾರಿ 10 ವಿಕೆಟ್‌ಗಳಿಂದ ಸೋತ ಏಕೈಕ ತಂಡ ಭಾರತ. ಕಳೆದ ವರ್ಷ ಪಾಕಿಸ್ತಾನ ವಿರುದ್ಧ 2021ರ ಟಿ20 ವಿಶ್ವಕಪ್‌ನಲ್ಲಿ 10 ವಿಕೆಟ್‌ಗಳಿಂದ ಟೀಂ ಇಂಡಿಯಾ ಸೋತಿತ್ತು.