
ಕ್ರೈಸ್ಟ್ಚರ್ಚ್ನಲ್ಲಿ ನಡೆದ ಆತಿಥೇಯ ನ್ಯೂಝಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಭುಜಬಲದ ಪರಾಕ್ರಮ ಮೆರೆದ ಪಾಕಿಸ್ತಾನ್ ಆಟಗಾರ ಖುಷ್ದಿಲ್ ಶಾಗೆ ಐಸಿಸಿ ದಂಡ ವಿಧಿಸಿದೆ. ಈ ಪಂದ್ಯದ 8ನೇ ಓವರ್ ವೇಳೆ ಖುಷ್ದಿಲ್ ಶಾ ಕಿವೀಸ್ ವೇಗಿ ಝಕಾರಿ ಫೌಲ್ಕ್ಸ್ ಅವರನ್ನು ಭುಜದಿಂದ ಗುದ್ದಿದ್ದರು. ಉದ್ದೇಶಪೂರ್ವಕವಾಗಿಯೇ ಡಿಕ್ಕಿ ಹೊಡೆದಿದ್ದ ಪಾಕ್ ಆಟಗಾರನಿಗೆ ಫೀಲ್ಡ್ ಅಂಪೈರ್ ಐಸಿಸಿ ನೀತಿ ಸಂಹಿತೆಯ ಉಲ್ಲಂಘನೆಯ ಎಚ್ಚರಿಕೆ ನೀಡಿದ್ದರು.
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.12 ರ ಪ್ರಕಾರ, ಆಟಗಾರ, ಸಹಾಯಕ ಸಿಬ್ಬಂದಿ, ಅಂಪೈರ್, ಪಂದ್ಯದ ಅಧಿಕಾರಿ ಅಥವಾ ಯಾವುದೇ ಇತರ ವ್ಯಕ್ತಿಯೊಂದಿಗೆ ಅನುಚಿತ ದೈಹಿಕ ಸಂಪರ್ಕದೊಂದಿಗೆ ಅಡ್ಡಿಪಡಿಸಿದರೆ ಅವರ ವಿರುದ್ಧ ಕ್ರಮ ಜರುಗಿಸಬಹುದು. ಅದರಂತೆ ಇದೀಗ ಖುಷ್ದಿಲ್ ಶಾಗೆ ಐಸಿಸಿ ಪಂದ್ಯ ಶುಲ್ಕದ ಶೇ.50 ರಷ್ಟು ದಂಡ ವಿಧಿಸಿದೆ. ಅಲ್ಲದೆ ಮೂರು ಡಿಮೆರಿಟ್ ಪಾಯಿಂಟ್ಗಳನ್ನು ನೀಡಲಾಗಿದೆ.
Pakistan all-rounder Khushdil Shah fined for breaching ICC Code of Conduct, gets 3 demerit points pic.twitter.com/dm1xXxhxvS
— Zsports (@_Zsports) March 18, 2025
ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡ ನಾಯಕ ಮೈಕೆಲ್ ಬ್ರೇಸ್ವೆಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು ಪವರ್ಪ್ಲೇನಲ್ಲೇ ರನ್ಗಳಿಸಲು ಪರದಾಡಿದರು. ಪರಿಣಾಮ ಮೊದಲ 6 ಓವರ್ಗಳಲ್ಲಿ ಮೂಡಿಬಂದ ಸ್ಕೋರ್ ಕೇವಲ 14 ರನ್ ಮಾತ್ರ. ಇತ್ತ 4 ವಿಕೆಟ್ ಕಬಳಿಸಿ ನ್ಯೂಝಿಲೆಂಡ್ ಬೌಲರ್ಗಳು ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.
ಈ ಹಂತದಲ್ಲಿ ಕಣಕ್ಕಿಳಿದ ನಾಯಕ ಸಲ್ಮಾನ್ ಅಲಿ ಅಘಾ 18 ರನ್ಗಳಿಸಿದರೆ. ಖುಷ್ದಿಲ್ ಶಾ 30 ಎಸೆತಗಳಲ್ಲಿ 32 ರನ್ ಬಾರಿಸಿದರು. ಇನ್ನು 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜಹಂದಾದ್ ಖಾನ್ 17 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಪಾಕಿಸ್ತಾನ್ ತಂಡವು 18.4 ಓವರ್ಗಳಲ್ಲಿ 91 ರನ್ಗಳಿಸಿ ಆಲೌಟ್ ಆಯಿತು.
ನ್ಯೂಝಿಲೆಂಡ್ ಪರ ಜೇಕಬ್ ಡಫಿ 3.4 ಓವರ್ಗಳಲ್ಲಿ 4 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಕೈಲ್ ಜೇಮಿಸನ್ 4 ಓವರ್ಗಳಲ್ಲಿ 8 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು.
120 ಎಸೆತಗಳಲ್ಲಿ 91 ರನ್ಗಳ ಗುರಿ ಪಡೆದ ನ್ಯೂಝಿಲೆಂಡ್ ತಂಡಕ್ಕೆ ಫಿನ್ ಅಲೆನ್ ಹಾಗೂ ಟಿಮ್ ಸೀಫರ್ಟ್ ಸ್ಪೋಟಕ ಆರಂಭ ಒದಗಿಸಿದ್ದರು. ಪರಿಣಾಮ ಮೊದಲ 6 ಓವರ್ಗಳಲೇ ತಂಡದ ಮೊತ್ತ 53 ಕ್ಕೆ ಬಂದು ನಿಂತಿತು.
ಇದನ್ನೂ ಓದಿ: IPL 2025: 8 ಆಟಗಾರರು ಎಂಟ್ರಿ: RCB ಅಭಿಮಾನಿಗಳಿಗೆ ಗುಡ್ ನ್ಯೂಸ್
ಈ ಹಂತದಲ್ಲಿ 29 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 44 ರನ್ ಬಾರಿಸಿದ್ದ ಸೀಫರ್ಟ್ ಔಟಾದರು. ಆ ಬಳಿಕ ಜೊತೆಗೂಡಿದ ಫಿನ್ ಅಲೆನ್ (29) ಹಾಗೂ ಟಿಮ್ ರಾಬಿನ್ಸನ್ (18) ಅಜೇಯರಾಗುಳಿದು 10.1 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್ನಲ್ಲಿ ನ್ಯೂಝಿಲೆಂಡ್ ತಂಡ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.