AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಯ್ತಾ ಇರು… CSK ಯನ್ನು ಟ್ರೋಲ್ ಮಾಡಿದ ಪೊಲಾರ್ಡ್​!

ಸೌತ್ ಆಫ್ರಿಕಾ ಟಿ20 ಲೀಗ್‌ನ ಹರಾಜಿನಲ್ಲಿ ಸಿಎಸ್‌ಕೆ ಒಡೆತನದ ಜೋಬರ್ಗ್ ಸೂಪರ್ ಕಿಂಗ್ಸ್ ತಂಡವು ಕೀರನ್ ಪೊಲಾರ್ಡ್ ಅವರನ್ನು 1.5 ಮಿಲಿಯನ್ ರಾಂಡ್ ನೀಡಿ ಖರೀದಿಸಿತ್ತು. ಹೀಗಾಗಿ ಈ ಬಾರಿಯ ಟೂರ್ನಿಯಲ್ಲಿ ಪೊಲಾರ್ಡ್ ಹಳದಿ ಜೆರ್ಸಿಯಲ್ಲಿ ಆಡುವುದನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದರು. ಆದರೆ, ಇದೀಗ ಕೊನೆ ಕ್ಷಣದಲ್ಲಿ ಜೆಎಸ್‌ಕೆ ತಂಡಕ್ಕೆ  ಕೈಕೊಟ್ಟಿರುವ ಪೊಲಾರ್ಡ್, ಸಿಎಸ್‌ಕೆ ಅಭಿಮಾನಿಗಳನ್ನು ಕೆಣಕುವ ಮೂಲಕ ಕಾಲೆಳೆದಿದ್ದಾರೆ.

ಹೋಯ್ತಾ ಇರು... CSK ಯನ್ನು ಟ್ರೋಲ್ ಮಾಡಿದ ಪೊಲಾರ್ಡ್​!
Kieron PollardImage Credit source: MI
ಝಾಹಿರ್ ಯೂಸುಫ್
|

Updated on: Oct 27, 2026 | 8:29 AM

Share

ಐಪಿಎಲ್ 2027ರ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಸಾಂಪ್ರದಾಯಿಕ ಹಗೆತನಕ್ಕೆ ಮತ್ತೆ ಕಿಡಿ ಬಿದ್ದಿದೆ. ಇಷ್ಟು ದಿನ ಮೈದಾನದಲ್ಲಿ ಬ್ಯಾಟ್ ಮೂಲಕ ಅಬ್ಬರಿಸುತ್ತಿದ್ದ ವೆಸ್ಟ್ ಇಂಡೀಸ್‌ನ ದೈತ್ಯ ಕೀರನ್ ಪೊಲಾರ್ಡ್, ಈಗ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆದ ಬೆನ್ನಲ್ಲೇ ಸಿಎಸ್‌ಕೆ ತಂಡವನ್ನು ಕೆಣಕಿದ್ದಾರೆ. ಅದು ಸಹ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗೆ ಕೈಕೊಟ್ಟ ಬೆನ್ನಲ್ಲೇ ಎಂಬುದು ವಿಶೇಷ.

ಸೂಪರ್ ಕಿಂಗ್ಸ್​ಗೆ ‘ಕೈ ಕೊಟ್ಟ’ ಪೊಲಾರ್ಡ್!

ಕೆಲವೇ ದಿನಗಳ ಹಿಂದೆ ನಡೆದ ಸೌತ್ ಆಫ್ರಿಕಾದ SA20 ಲೀಗ್ ಹರಾಜಿನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್‌ ಮೂಲೀಕತ್ವದ ಫ್ರಾಂಚೈಸಿಯಾದ ಜೋಹಾನ್ಸ್‌ಬರ್ಗ್ ಸೂಪರ್ ಕಿಂಗ್ಸ್ (JSK) ತಂಡವು ಪೊಲಾರ್ಡ್ ಅವರನ್ನು 1.5 ಮಿಲಿಯನ್ ರಾಂಡ್ ನೀಡಿ ಖರೀದಿಸಿತ್ತು. ಮುಂಬೈ ಇಂಡಿಯನ್ಸ್​​ನ ಖಾಯಂ ಸದಸ್ಯರಾಗಿದ್ದ ಪೊಲಾರ್ಡ್ ಹಳದಿ ಜರ್ಸಿ ಧರಿಸಲಿದ್ದಾರೆ ಎಂಬುದು ದೊಡ್ಡ ಸುದ್ದಿಯಾಗಿತ್ತು. ಆದರೆ, ಅಕ್ಟೋಬರ್ 24 ರಂದು ಮುಂಬೈ ಇಂಡಿಯನ್ಸ್ ತಂಡವು ಪೊಲಾರ್ಡ್ ಅವರನ್ನು ಐಪಿಎಲ್ 2027 ಕ್ಕೆ ಹೆಡ್ ಕೋಚ್ ಆಗಿ ನೇಮಿಸಿತು.

ಇದರ ಬೆನ್ನಲ್ಲೇ, ಪೊಲಾರ್ಡ್ SA20 ಟೂರ್ನಿಯಿಂದ ಅಧಿಕೃತವಾಗಿ ಹಿಂದೆ ಸರಿದರು. ಹರಾಜಿನಲ್ಲಿ ಕೋಟಿ ಸುರಿದು ಖರೀದಿಸಿದ ನಂತರ ಈ ರೀತಿ ದಿಢೀರ್ ಹಿಂದೆ ಸರಿದಿದ್ದರಿಂದ ಜೆಎಸ್‌ಕೆ ತಂಡದ ರಣತಂತ್ರ ಸಂಪೂರ್ಣ ತಲೆಕೆಳಗಾಯಿತು. ಮಾಜಿ ಕ್ರಿಕೆಟಿಗ ಕೆ. ಶ್ರೀಕಾಂತ್ ಸೇರಿದಂತೆ ಹಲವರು ಪೊಲಾರ್ಡ್ ಅವರ ಈ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.

ಹೋಯ್ತಾ ಇರು!

ಇತ್ತ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಗೆ ಕೈಕೊಟ್ಟ ಬೆನ್ನಲ್ಲೇ ಕೀರನ್ ಪೊಲಾರ್ಡ್ 2023ರ ವಿಡಿಯೋವೊಂದನ್ನು ತನ್ನ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. 2012ರ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಬ್ರಾವೋ, ಪೊಲಾರ್ಡ್ ವಿಕೆಟ್ ಪಡೆದಾಗ “ಏರೋಪ್ಲೇನ್” ಸಂಕೇತ ಮಾಡಿ, ಪೊಲಾರ್ಡ್‌ಗೆ ಮನೆಗೆ ವಿಮಾನ ಹತ್ತಿ ಹೋಗು ಎಂದು ಲೇವಡಿ ಮಾಡಿದ್ದರು.

ಇದಕ್ಕೆ ಸರಿಯಾಗಿ 11 ವರ್ಷಗಳ ನಂತರ, ಅಂದರೆ 2023ರ ಜುಲೈನಲ್ಲಿ ನಡೆದ MLC ಚಾಲೆಂಜರ್ ಪಂದ್ಯದಲ್ಲಿ ಪೊಲಾರ್ಡ್ ನಾಯಕತ್ವದ ‘ಎಮ್‌ಐ ನ್ಯೂಯಾರ್ಕ್’ ತಂಡವು ಬ್ರಾವೋ ಅವರ ‘ಟೆಕ್ಸಾಸ್ ಸೂಪರ್ ಕಿಂಗ್ಸ್’ ತಂಡವನ್ನು ಟೂರ್ನಿಯಿಂದ ಹೊರಹಾಕಿತು. ಆ ವೇಳೆ ಪೊಲಾರ್ಡ್ ಅದೇ ವಿಮಾನದ ಸಂಕೇತವನ್ನು ಮರುಸೃಷ್ಟಿಸಿ, ಬ್ರಾವೋಗೆ “ಈಗ ನೀನು ಮನೆಗೆ ಹೋಗಲು ವಿಮಾನ ಹತ್ತು” ಎಂದು ಸನ್ನೆ ಮಾಡುವ ಮೂಲಕ ಮೈದಾನದಲ್ಲೇ ಸೇಡು ತೀರಿಸಿಕೊಂಡರು.

Kp (8)

ಕೀರನ್ ಪೊಲಾರ್ಡ್ ಪೋಸ್ಟ್

ಇದೀಗ ಅದೇ ಹೋಯ್ತಾ ಇರು ವಿಡಿಯೋವನ್ನು ಕೀರನ್ ಪೊಲಾರ್ಡ್ ಇನ್​ಸ್ಟಾಗ್ರಾಮ್ ರೀಲ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್​​ಗೆ ಪರೋಕ್ಷವಾಗಿ ಹೋಯ್ತಾ ಇರಿ, ನಾನೇನು ನಿಮ್ಮ ಪರ ಆಡಲ್ಲ ಎಂಬಾರ್ಥದಲ್ಲಿ ಕಿಚಾಯಿಸಿದ್ದಾರೆ. ಇದೀಗ ಪೊಲಾರ್ಡ್ ಅವರ ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: IPL 2027 ಹರಾಜಿಗೆ ಡೇಟ್ ಫಿಕ್ಸ್​: ಎಲ್ಲಿ, ಯಾವಾಗ? ಇಲ್ಲಿದೆ ಮಾಹಿತಿ

ಒಟ್ಟಾರೆಯಾಗಿ, ಕೀರನ್ ಪೊಲಾರ್ಡ್ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಂತೆ ಸಿಎಸ್‌ಕೆ ತಂಡಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನೀಡಿರುವ ಈ ಪರೋಕ್ಷ ಟಾಂಗ್, ಉಭಯ ತಂಡಗಳ ಅಭಿಮಾನಿಗಳ ನಡುವಿನ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದೆ. ಇಷ್ಟು ದಿನ ಮೈದಾನದಲ್ಲಿ ಸಿಎಸ್​ಕೆ ಪಾಲಿಗೆ ಸಿಂಹಸ್ವಪ್ನವಾಗಿದ್ದ ಪೊಲಾರ್ಡ್, ಇದೀಗ ಕೋಚ್ ಹುದ್ದೆ ಪಡೆದ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್​ ಅಭಿಮಾನಿಗಳನ್ನೇ ಟಾರ್ಗೆಟ್ ಮಾಡಿರುವುದು ವಿಶೇಷ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More