15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸೋಮವಾರ ಎರಡು ಹೊಸ ತಂಡಗಳ ನಡುವೆ ನಡೆದ ಕದನ ಸಾಕಷ್ಟು ಕುತೂಹಲ ಕೆರಳಿಸಿತ್ತು. ಕುಚುಕು ಸ್ನೇಹಿತರಾದ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ (KL Rahul) ಹಾಗೂ ಗುಜರಾತ್ ಲಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮುಖಾಮುಖಿ ಆಗಿದ್ದರು. ಮೇಲ್ನೋಟಕ್ಕೆ ಸಾಕಷ್ಟು ಬಲಿಷ್ಠವಾಗಿದ್ದ, ನಾಯಕನಾಗಿ ಅನುಭವ ಹೊಂದಿರುವ ಕೆಎಲ್ ರಾಹುಲ್ ಪಡೆ ಈ ಪಂದ್ಯದಲ್ಲಿ ಸೋಲು ಅನುಭವಿಸಿತು. ಜೊತೆಗೆ ನಾಯಕನಾಗಿಯೂ ರಾಹುಲ್ ಇನ್ನಿಂಗ್ಸ್ನ ಮೊದಲ ಎಸೆತದಲ್ಲೇ ಔಟಾಗಿ ಪೆವಿಲಿಯನ್ ಸೇರಿಕೊಂಡರು. ಹಾರ್ದಿಕ್ ಪಾಂಡ್ಯ ಪಡೆ 5 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಐಪಿಎಲ್ 2022 ರಲ್ಲಿ (IPL 2022) ಶುಭಾರಂಭ ಕಂಡಿದೆ. ರಾಹುಲ್ ತೇವಾಟಿಯ (Rahul Tewatia) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಗುಜರಾತ್ ಗೆಲುವು ಸಾಧಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್‌ಗೆ, ಮೊದಲ ಓವರ್‌ನ ಮೊದಲ ಎಸೆತದಲ್ಲೇ ಮೊಹಮ್ಮದ್ ಶಮಿ ಶಾಕ್ ನೀಡಿದರು. ಮೊದಲ ಬಾಲ್ ಎಲ್ ರಾಹುಲ್ ಬ್ಯಾಟ್ ಸವರಿಕೊಂಡು ಹೋಗಿ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಕೈ ಸೇರಿತು. ಆದರೆ ಆನ್‌ಫೀಲ್ಡ್ ಅಂಪೈರ್ ಯಾವುದೇ ತೀರ್ಪು ನೀಡಲಿಲ್ಲ. ಹೀಗಾಗಿ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಥರ್ಡ್ ಅಂಪೈರ್ ರಿವ್ಯೂ ತೆಗೆದುಕೊಂಡರು. ರಿವ್ಯೂನಲ್ಲಿ ಚೆಂಡು ಬ್ಯಾಟ್ ಸಮೀಪವೇ ಸಾಗಿದ್ದು ರಾಹುಲ್ ಮೊದಲ ಪಂದ್ಯದಲ್ಲೇ ಗೋಲ್ಡನ್ ಡಕೌಟ್ ಆದರು. ನಂತರ 9 ಎಸೆತಗಳಲ್ಲಿ 7ರನ್‌ಗೆ ಡಿಕಾಕ್ ವಿಕೆಟ್ ನಿರ್ಗಮಿಸಿದರು. ಇದರ ಬೆನ್ನಲ್ಲೇ ಎವಿನ್ ಲೂವಿಸ್ (10) ಕೂಡ ಪೆವಿಲಿಯನ್ ಸೇರಿಕೊಂಡರು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಮನೀಶ್ ಪಾಂಡೆ (6) ಆಟ ಕೂಡ ನಡೆಯಲಿಲ್ಲ.
ಕೇವಲ 29ರನ್‌ಗೆ 4 ಪ್ರಮುಖ ವಿಕೆಟ್ ಕಳೆದುಕೊಂಡಿದ್ದ ಸೂಪರ್ ಜೈಂಟ್ಸ್‌ಗೆ ದೀಪಕ್ ಹೂಡ ಹಾಗೂ ಯುವ ಆಟಗಾರ ಆಯುಷ್ ಬದೋನಿ ಆಸರೆಯಾದರು. ಕಡಿಮೆ ಮೊತ್ತಕ್ಕೆ ಆಲೌಟ್ ಆಗುವ ಭೀತಿಯಲ್ಲಿದ್ದ ತಂಡದ ರನ್ ಗತಿಯನ್ನು ಈ ಜೋಡಿ ಏರಿಸಿತು. ದೀಪಕ್ ಹೂಡ ಕೇವಲ 36 ಎಸೆತಗಳಲ್ಲಿ ಐಪಿಎಲ್‌ನಲ್ಲಿ 4ನೇ ಅರ್ಧಶತಕ ದಾಖಲಿಸಿದರೆ, ಯುವ ಬ್ಯಾಟರ್ ಆಯುಷ್ ಬದೋನಿ ಐಪಿಎಲ್‌ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದರು. 41 ಎಸೆತಗಳಲ್ಲಿ 55ರನ್ ಕಲೆಹಾಕಿದ್ದ ದೀಪಕ್ ಹೂಡ ಔಟಾದರೆ, ಆಯುಷ್ 41 ಎಸೆತಗಳಲ್ಲಿ 54 ರನ್ ಕಲೆಹಾಕಿದರು. ಕೊನೆಯಲ್ಲಿ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಅಜೇಯ 21 ರನ್ ಸಿಡಿಸಿದ ಪರಿಣಾಮ ಲಖನೌ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 158ರನ್ ಕಲೆಹಾಕಿತು. ಗುಜರಾತ್ ಪರ ಶಮಿ 3, ವರುಣ್ ಆಯರೋನ್ 2, ರಶೀದ್ 1 ವಿಕೆಟ್ ಕಿತ್ತರು.
ಟಾರ್ಗೆಟ್ ಬೆನ್ನಟಗಟಿದ ಗುಜರಾತ್ ಟೈಟನ್ಸ್ ತಂಡ, ನಿರ್ಣಾಯಕ ಘಟ್ಟಗಳಲ್ಲಿ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು. ಅಂತಿಮವಾಗಿ 19.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಬಾರಿಸಿ 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಅಂಕಪಟ್ಟಿಯಲ್ಲಿ ಖಾತೆ ತೆರೆಯಿತು. ಟೈಟನ್ಸ್ ಪರ ಓಪನರ್ ಶುಭಮನ್ ಗಿಲ್ (0) ಮತ್ತು ವಿಜಯ್ ಶಂಕರ್ (4) ಮಾತ್ರವೇ ರನ್‌ಗಳಿಸಲು ವಿಫಲರಾದರು. ಉಳಿದ ಬ್ಯಾಟ್ಸ್‌ಮನ್‌ಗಳಾದ ಮ್ಯಾಥ್ಯೂ ವೇಡ್ (30), ಹಾರ್ದಿಕ್ ಪಾಂಡ್ಯ (33), ಡೇವಿಡ್ ಮಿಲ್ಲರ್ (30), ರಾಹುಲ್ ತೆವಾಟಿಯ (ಅಜೇಯ 40) ಮತ್ತು ಅಭಿನವ್ ಮನೋಹರ್ (ಅಜೇಯ 15) ಅದ್ಭುತ ಕೊಡುಗೆಯ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು.
Shubman Gill Catch: ಸೂಪರ್ಮ್ಯಾನ್ ಶುಭ್ಮನ್: ಅತ್ಯಾದ್ಭುತ ಕ್ಯಾಚ್ ವಿಡಿಯೋ ಇಲ್ಲಿದೆ