ಗುವಾಹಟಿಯ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ (India vs South Africa) ತಂಡ ಭರ್ಜರಿ ಜಯ ಸಾಧಿಸಿದೆ. ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್ (Suryakumar Yadav) ಹಾಗೂ ವಿರಾಟ್ ಕೊಹ್ಲಿಯ ಬೊಂಬಾಟ್ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ 16 ರನ್ಗಳಿಂದ ಗೆದ್ದಿತು. ಈ ಮೂಲಕ ರೋಹಿತ್ ಪಡೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡು ಸರಣಿ ವಶಪಡಿಸಿಕೊಳ್ಳುವ ಜೊತೆಗೆ ಹರಿಣಗಳ ವಿರುದ್ಧ ಮೊದಲ ಟಿ20 ಸರಣಿ ಗೆದ್ದ ಸಾಧನೆ ಮಾಡಿದೆ. ಗೆಲುವಿಗೆ ಆಫ್ರಿಕಾನ್ನರು ಕಠಿಣ ಹೋರಾಟ ನಡೆಸಿದರೂ ಸಾಧ್ಯವಾಗಲಿಲ್ಲ. ಡೇವಿಡ್ ಮಿಲ್ಲರ್ ಸ್ಫೋಟಕ ಶತಕ ಸಿಡಿಸಿ ಅಜೇಯರಾಗಿ ಉಳಿದರೂ ಅದು ಫಲ ಸಿಗಲಿಲ್ಲ. ಕೇವಲ 28 ಎಸೆತಗಳಲ್ಲಿ 5 ಫೋರ್, 4 ಸಿಕ್ಸರ್ ಸಿಡಿಸಿ 57 ರನ್ ಬಾರಿಸಿದ ಕೆಎಲ್ ರಾಹುಲ್ಗೆ (KL Rahul) ಪಂದ್ಯಶ್ರೇಷ್ಠ ನೀಡಲಾಯಿತು. ಆದರೆ, ಇದನ್ನು ರಾಹುಲ್ ತಿರಸ್ಕರಿಸಿದ ಘಟನೆ ನಡೆದಿದೆ.
ಟೀಮ್ ಇಂಡಿಯಾಕ್ಕೆ ಸ್ಫೋಟಕ ಆರಂಭ ಕೊಟ್ಟ ಕೆಎಲ್ ರಾಹುಲ್ಗೆ ಪಂದ್ಯ ಮುಗಿದ ಬಳಿಕ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಲು ಕರೆಯಲಾಯಿತು. ಈ ಸಂದರ್ಭ ರಾಹುಲ್ ಆಡಿದ ಮಾತುಗಳು ಎಲ್ಲರ ಮನಗೆದ್ದಿತು. ”ಪಂದ್ಯಶ್ರೇಷ್ಠ ಪ್ರಶಸ್ತಿ ನನಗೆ ಸಿಕ್ಕಿರುವುದು ಆಶ್ಚರ್ಯ ತಂದಿದೆ. ಈ ಪ್ರಶಸ್ತಿ ನನಗಲ್ಲ ಸೂರ್ಯಕುಮಾರ್ ಯಾದವ್ ಅವರಿಗೆ ಸಿಗಬೇಕಿತ್ತು. ಮಧ್ಯಮ ಕ್ರಮಾಂಕದಲ್ಲಿ ಬಂದು ಪಂದ್ಯದ ಗತಿಯನ್ನು ಬದಲಾಯಿಸಿದ್ದು ಅವರು. ಹೀಗಾಗಿ ಸೂರ್ಯನಿಗೆ ಪಂದ್ಯಶ್ರೇಷ್ಠ ಅವಾರ್ಡ್ ಕೊಡಬೇಕಿತ್ತು,” ಎಂದು ರಾಹುಲ್ ಹೇಳಿದ್ದಾರೆ.
ಮಾತು ಮುಂದುವರೆಸಿದ ರಾಹುಲ್, ”ದಿನೇಶ್ ಕಾರ್ತಿಕ್ ಒಬ್ಬ ಅದ್ಭುತ ಬ್ಯಾಟರ್. ಅವರಿಗೆ ರನ್ ಕಲೆಹಾಕಲು ಹೆಚ್ಚಿನ ಬಾಲ್ಗಳನ್ನು ಆಡಬೇಕು ಎಂದಿಲ್ಲ. ವಿರಾಟ್ ಕೊಹ್ಲಿ ಕೂಡ ಉತ್ತಮ ಬ್ಯಾಟಿಂಗ್ ಮಾಡಿದ್ದಾರೆ. ಓಪನರ್ಗಳು ಪಂದ್ಯದ ಪರಿಸ್ಥಿತಿಯನ್ನು ಅರ್ಥಹಿಸಿ ಕೊಡುಗೆ ನೀಡಬೇಕಾಗಿರುವುದು ಮುಖ್ಯ. ನಾನು ಇದೇ ಪ್ರದರ್ಶನವನ್ನು ಮುಂದುವರೆಸುತ್ತೇನೆ. ಮೊದಲ ಎರಡು ಓವರ್ ಆದ ಬಳಿಕ ಪಿಚ್ ತುಂಬಾ ಗ್ರಿಪ್ ಆದಂತೆ ಕಂಡಿತು. ನಾನು ಮತ್ತು ರೋಹಿತ್ ಮಾತನಾಡಿ 180-185 ಒಳ್ಳೆಯ ಟಾರ್ಗೆಟ್ ಎಂದು ಮಾತನಾಡಿ ಕೊಂಡೆವು. ಆದರೆ, ನಂತರ ಪಂದ್ಯ ಸಾಗಿದ್ದು ಆಶ್ಚರ್ಯ ಮೂಡಿಸಿತು,” ಎಂಬುದು ರಾಹುಲ್ ಮಾತು.
ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಭಾರತ ಭರ್ಜರಿ ಆರಂಭ ಪಡೆದುಕೊಂಡಿತು. ನಾಯಕ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ 9.5 ಓವರ್ಗಳಲ್ಲಿ 96 ರನ್ ಜೊತೆಯಾಟ ಆಡಿ ಭದ್ರ ಬುನಾದಿ ಹಾಕಿದರು. ರೋಹಿತ್ ಶರ್ಮಾ 37 ಎಸೆತದಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ನೊಂದಿಗೆ 43 ರನ್ ಬಾರಿಸಿ ಔಟಾದರು. ನಂತರ ವಿರಾಟ್ ಕೊಹ್ಲಿ ಜೊತೆಯಾದ ಕೆ.ಎಲ್ ರಾಹುಲ್ ಆರ್ಭಟಿಸಿದರು. 28 ಎಸೆತದಲ್ಲಿ 5 ಬೌಡರಿ ಮತ್ತು 4 ಸಿಕ್ಸರ್ನಿಂದ 57 ರನ್ ಗಳಿಸಿದರು. ಬಳಿಕ ಶುರುವಾಗಿದ್ದು ಕೊಹ್ಲಿ ಸೂರ್ಯಕುಮಾರ್ ಜುಗಲ್ಬಂದಿ. ಸೂರ್ಯ ತಮ್ಮ ಅದ್ಭುತ ಫಾರ್ಮ್ ಮುಂದುವರೆಸಿದರು. 22 ಬಾಲ್ನಲ್ಲಿ 5 ಸಿಕ್ಸರ್ ಹಾಗೂ 5 ಬೌಂಡರಿಯಿಂದ 61 ರನ್ ಚಚ್ಚಿದರು.
ಸೂರ್ಯಕುಮಾರ್ ಯಾದವ್ ಟಿ20 ಮಾದರಿಯಲ್ಲಿ 1,000 ದಾಖಲಿಸಿ ಭಾರತ ಮೂರನೇ ಬ್ಯಾಟರ್ ಆಗಿ ಹೊರಹೊಮ್ಮಿದ ಸಾಧನೆ ಮಾಡಿದರು. ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ 102 ರನ್ ಜೊತೆಯಾಟವಾಡಿದ್ದು ತಂಡದ ಸ್ಕೋರ್ 200ರ ಗಡಿ ದಾಟುವಂತೆ ಮಾಡಿತು. ಕೊನೆಯಲ್ಲಿ ದಿನೇಶ್ ಕಾರ್ತಿಕ್ ಬಂದು 7 ಎಸೆತಗಳಲ್ಲಿ 1 ಫೋರ್, 2 ಸಿಕ್ಸರ್ ಸಿಡಿಸಿ ಅಜೇಯ 17 ರನ್ ಗಳಿಸಿದರು. ಮತ್ತೊಂದು ತುದಿಯಲ್ಲಿದ್ದ ಕೊಹ್ಲಿ 28 ಎಸೆತಗಲ್ಲಿ ಅಜೇಯ 49 ರನ್ ಬಾರಿಸಿದರು. ಪರಿಣಾಮ ಭಾರತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 237 ರನ್ ಕಲೆಹಾಕಿತು. ಆಫ್ರಿಕಾ ಪರ ಕೇಶವ್ ಮಹರಾಜ್ 23 ರನ್‌ಗಳಿಗೆ 2 ವಿಕೆಟ್ ಪಡೆದರು.
ಬೆಟ್ಟದಂತಹ ಟಾರ್ಗೆಟ್ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 1 ರನ್ಗೆ 2 ವಿಕೆಟ್ ಕಳೆದುಕೊಂಡಿತು. ಆ್ಯಡಂ ಮರ್ಕ್ರಮ್ 33 ರನ್ ಬಾರಿಸಿ ಔಟಾದರು. ಆದರೆ, ನಂತರ ಒಂದಾದ ಕ್ವಿಂಟನ್ ಡಿಕಾಕ್ ಹಾಗೂ ಡೇವಿಡ್ ಮಿಲ್ಲರ್ ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿಗೆ ಹೋರಾಟ ನಡೆಸಿದರು. ಆದರೆ, ಜಯದ ಅಂಚಿಗೆ ಬಂದರೂ ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ. ಮಿಲ್ಲರ್ ಕೇವಲ 47 ಎಸೆತಗಳಲ್ಲಿ 8 ಫೋರ್, 7 ಸಿಕ್ಸರ್ನೊಂದಿಗೆ ಅಜೇಯ 106 ರನ್ ಸಿಡಿಸಿದರೆ, ಡಿಕಾಕ್ 48 ಎಸೆತಗಳಲ್ಲಿ ಅಜೇಯ 69 ರನ್ ಗಳಿಸಿದರು. ಆಫ್ರಿಕಾ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿ ಸೋಲು ಕಂಡಿತು. ಭಾರತ ಪರ ಅರ್ಶ್ದೀಪ್ ಸಿಂಗ್ 2 ವಿಕೆಟ್ ಪಡೆದರು.