ಇಂಡೋನೇಷ್ಯಾದ ಫುಟ್ಬಾಲ್ ಕ್ರೀಡಾಂಗಣದಲ್ಲಿ ಗಲಭೆ, ಕಾಲ್ತುಳಿತಕ್ಕೆ 174 ಮಂದಿ ಬಲಿ; ಈ ದುರಂತಕ್ಕೆ ಕಾರಣವಾಗಿದ್ದೇನು?
ಕ್ರೀಡಾಂಗಣವು 42,000 ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಆದರೆ ಅದರ ಸಾಮರ್ಥ್ಯ 38,000. ಈ ಹೊತ್ತಲ್ಲಿ ಕಾಲ್ತುಳಿತ ಮತ್ತು ಉಸಿರುಗಟ್ಟುವಿಕೆ ಐದು ವರ್ಷದ ಬಾಲಕ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ 174 ಜೀವಗಳನ್ನು ಬಲಿ ತೆಗೆದುಕೊಂಡಿತು
ಶನಿವಾರ ರಾತ್ರಿ ಇಂಡೋನೇಷ್ಯಾದ (Indonesia) ಪೂರ್ವ ಜಾವಾದಲ್ಲಿ ಫುಟ್ಬಾಲ್ (Football) ಪಂದ್ಯದ ವೇಳೆ ಅಭಿಮಾನಿಗಳು ಕ್ರೀಡಾಂಗಣಕ್ಕೆ ನುಗ್ಗಿ ದಾಂದಲೆ ನಡೆಸಿದ್ದರಿಂದ ಆರಂಭವಾದ ಹಿಂಸಾಚಾರ, ಕಾಲ್ತುಳಿತದಲ್ಲಿ 170 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು 180 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪೂರ್ವ ಜಾವಾದ ಮಲಾಂಗ್‌ನಲ್ಲಿರುವ ಕಂಜುರುಹಾನ್ ಕ್ರೀಡಾಂಗಣದಲ್ಲಿ (Kanjuruhan stadium) ನಡೆದ ಈ ಅನಾಹುತಕ್ಕೆ ಕಾರಣವಾಗಿದ್ದೇನು? ಇಂಡೋನೇಷ್ಯಾದಲ್ಲಿ ಫುಟ್‌ಬಾಲ್ ಜನಪ್ರಿಯವಾಗಿದೆ. ಆಟಗಳ ಮೊದಲು ಭಾವೋದ್ರೇಕದಿಂದ ಆಗಾಗ್ಗೆ ಅಭಿಮಾನಿಗಳ ನಡುವೆ ಘರ್ಷಣೆಯೂ ಉಂಟಾಗುವುದು ಇಲ್ಲಿ ಮಾಮೂಲು. ಮಲಾಂಗ್‌ನಲ್ಲಿ ಇದನ್ನು ಮತ್ತಷ್ಟು ಹದಗೆಡಿಸಿದ್ದು ಜನದಟ್ಟಣೆ ಮತ್ತು ಪೊಲೀಸರ ಅಶ್ರುವಾಯು ಬಳಕೆಯಿಂದ ಉಂಟಾಗುವ ಭೀತಿ. ಶನಿವಾರ ಅರೆಮಾ ಎಫ್‌ಸಿ ತಮ್ಮ ಪ್ರತಿಸ್ಪರ್ಧಿ ಪರ್ಸೆಬಯಾ ಸುರಬಯಾ ಜತೆ ಆಡುತ್ತಿತ್ತು. ಎರಡು ತಂಡಗಳ ಅಭಿಮಾನಿಗಳಿಂದ ಸಂಭವನೀಯ ಗಲಭೆಯನ್ನು ತಡೆಯಲು ಅರೆಮಾ ಅಭಿಮಾನಿಗಳನ್ನು ಮಾತ್ರ ಒಳಗೆ ಅನುಮತಿಸಲಾಗಿದೆ. ಆದಾಗ್ಯೂ, ಪರ್ಸೆಬಯಾ 3-2 ರಿಂದ ಗೆದ್ದ ನಂತರ, ಕೋಪಗೊಂಡ ಅಭಿಮಾನಿಗಳು ಆಟಗಾರರು ಮತ್ತು ಅಧಿಕಾರಿಗಳ ಮೇಲೆ ಬಾಟಲಿ, ಇತರ ವಸ್ತುಗಳನ್ನು ಎಸೆಯುವ ಮೂಲಕ ದಾಂದಲೆ ನಡೆಸಿದ್ದಾರೆ.
ಅಸೋಸಿಯೇಟೆಡ್ ಪ್ರೆಸ್ ವರದಿಯ ಪ್ರಕಾರ, ಅಭಿಮಾನಿಗಳು ಪೊಲೀಸ್ ಕಾರುಗಳನ್ನು ಉರುಳಿಸಿ, ಅವುಗಳಿಗೆ ಹಾನಿಗೈದ ನಂತರ ಹೊರಗಡೆ ಗಲಭೆ ಉಂಟಾಗಿದೆ. ಈ ಹೊತ್ತಲ್ಲಿ ಪೊಲೀಸರು ಅಶ್ರುವಾಯು ಪ್ರಯೋಗಿಸಿ ಜನರನ್ನು ಚದುರಿಸಲು ನೋಡಿದರು. ಕ್ರೀಡಾಂಗಣವು 42,000 ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಆದರೆ ಅದರ ಸಾಮರ್ಥ್ಯ 38,000. ಈ ಹೊತ್ತಲ್ಲಿ ಕಾಲ್ತುಳಿತ ಮತ್ತು ಉಸಿರುಗಟ್ಟುವಿಕೆಯಿಂದಾಗಿ ಐದು ವರ್ಷದ ಬಾಲಕ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ 174 ಜೀವಗಳನ್ನು ಬಲಿ ತೆಗೆದುಕೊಂಡಿತು. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಇಲ್ಲಿ ದಾಂದಲೆ ಉಂಟಾಯಿತು. ಅವರು ಅಧಿಕಾರಿಗಳ ಮೇಲೆ ದಾಳಿ ಮಾಡಲು ಪ್ರಾರಂಭಿಸಿದರು. ಕಾರುಗಳನ್ನು ಹಾನಿಗೊಳಿಸಿದರು. ಎಲ್ಲರೂ ದಾಂದಲೆ ಮಾಡಿಲ್ಲ. ಸುಮಾರು 3,000 ಮಂದಿ ಕ್ರೀಡಾಂಗಣದೊಳಗೆ ನುಗ್ಗಿದ್ದರು ಎಂದು ಪೂರ್ವ ಜಾವಾದ ಪೊಲೀಸ್ ಮುಖ್ಯಸ್ಥ ನಿಕೊ ಅಫಿಂಟಾ ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ.
#WATCH | At least 127 people died after violence at a football match in Indonesia, last night. The deaths occurred when angry fans invaded a football pitch after a match in East Java
(Video source: Reuters) pic.twitter.com/j7Bet6f9mE
— ANI (@ANI) October 2, 2022
ಈಗ ಹೇಗಿದೆ ಪರಿಸ್ಥಿತಿ
ಯಾವುದೇ ಗುಂಪಿನ ನಿಯಂತ್ರಣ ಅನಿಲ ಅಥವಾ ಬಂದೂಕುಗಳ ಬಳಕೆಯನ್ನು ವಿಶ್ವ ಫುಟ್ಬಾಲ್ ಆಡಳಿತ ಮಂಡಳಿ ಫಿಪಾ ಸುರಕ್ಷತಾ ನಿಯಮಗಳಿಂದ ನಿಷೇಧಿಸಲಾಗಿದೆ. ರಾಯಿಟರ್ಸ್ ವರದಿಯ ಪ್ರಕಾರ, ಪೂರ್ವ ಜಾವಾ ಪೊಲೀಸರು ನಿಮಗೆಅಂತಹ ನಿಯಮಗಳ ಬಗ್ಗೆ ತಿಳಿದಿದೆಯೇ ಎಂಬ ಪ್ರಶ್ನೆಗೆ ತಕ್ಷಣವೇ ಪ್ರತಿಕ್ರಿಯಿಸಲಿಲ್ಲ. ಇಂಡೋನೇಷ್ಯಾದ ಪಿಎಸ್‌ಎಸ್‌ಐ ಫುಟ್‌ಬಾಲ್ ಅಸೋಸಿಯೇಷನ್‌ನಿಂದ ಘಟನೆಯ ಕುರಿತು ಫಿಫಾ ವರದಿ ಕೇಳಿದೆ. ತನಿಖೆಗಾಗಿ ಪಿಎಸ್‌ಎಸ್‌ಐ ತಂಡವನ್ನು ಮಲಾಂಗ್‌ಗೆ ಕಳುಹಿಸಲಾಗಿದೆ ಎಂದು ರಾಯಿಟರ್ಸ್ ಹೇಳಿದೆ. ಮಲಾಂಗ್ ಸಂತ್ರಸ್ತರಿಗೆ ಸರ್ಕಾರ ಆರ್ಥಿಕ ನೆರವು ನೀಡಲಿದೆ. ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ಸುರಕ್ಷತಾ ಸನ್ನದ್ಧತೆಯನ್ನು ಮರುಪರಿಶೀಲಿಸುವವರೆಗೆ ಪ್ರೀಮಿಯರ್ ಸಾಕರ್ ಲೀಗ್ ಅನ್ನು ರದ್ದು ಮಾಡುವಂತೆ ಅವರು ಆದೇಶಿಸಿದ್ದಾರೆ. ಇಂಡೋನೇಷ್ಯಾದ ಕ್ರೀಡಾ ಮತ್ತು ಯುವ ಸಚಿವ ಜೈನುದಿನ್ ಅಮಾಲಿ, ನಾವು ಪಂದ್ಯದ ಸಂಘಟನೆ ಮತ್ತು ಅಭಿಮಾನಿಗಳ ಹಾಜರಾತಿಯನ್ನು ಕೂಲಂಕಷವಾಗಿ ಮೌಲ್ಯಮಾಪನ ಮಾಡುತ್ತೇವೆ. ಅಭಿಮಾನಿಗಳು ಪಂದ್ಯಗಳಿಗೆ ಹಾಜರಾಗದಂತೆ ನಿಷೇಧಿಸಲು ಸಾಧ್ಯವೆ? ಅದನ್ನೇ ನಾವು ಚರ್ಚಿಸುತ್ತೇವೆ ಎಂದಿದ್ದಾರೆ. ಇಂಡೋನೇಷ್ಯಾದ ಫುಟ್ಬಾಲ್ ಸಂಸ್ಥೆಯು ಅರೆಮಾವನ್ನು ಉಳಿದ ಋತುವಿನಲ್ಲಿ ಪಂದ್ಯಗಳನ್ನು ಆಯೋಜಿಸುವುದನ್ನು ನಿಷೇಧಿಸಿದೆ.
ಇಂಡೋನೇಷ್ಯಾದಲ್ಲಿ ಈ ರೀತಿಯ ದುರಂತ ನಡೆದಿದ್ದು ಇದೇ ಮೊದಲು ಅಲ್ಲ
ಇಂಡೋನೇಷ್ಯಾ ಫುಟ್ಬಾಲ್ ಅಭಿಮಾನಿಗಳುಸಾಮಾನ್ಯವಾಗಿ ದೇಶದ ಒಳಗೆ ಮತ್ತು ಹೊರಗೆ ಪ್ರತಿಸ್ಪರ್ಧಿಗಳೊಂದಿಗೆ ಘರ್ಷಣೆ ಮಾಡುತ್ತಾರೆ. ಎಪಿ ವರದಿಯ ಪ್ರಕಾರ, 2019 ರಲ್ಲಿ ಮಲೇಷಿಯಾದ ಅಭಿಮಾನಿಗಳಿಗೆ ಜಕಾರ್ತಾದಲ್ಲಿ ನಡೆದ ವಿಶ್ವಕಪ್ ಅರ್ಹತಾ ಪಂದ್ಯದ ವೇಳೆ ಸ್ಪೋಟಕಗಳಿಂದ ಬೆದರಿಕೆ ಹಾಕಲಾಗಿತ್ತು. ಅಲ್ಲಿ ದಾಳಿಯೂ ನಡೆದಿತ್ತು. ಹಿಂಸಾಚಾರ ಭುಗಿಲೆದ್ದ ನಂತರ ಮಲೇಷ್ಯಾದ ಪ್ರವಾಸಿ ಕ್ರೀಡಾ ಸಚಿವರನ್ನು ಕ್ರೀಡಾಂಗಣದಿಂದ ಸ್ಥಳಾಂತರಿಸಬೇಕಾಯಿತು.
ಇತರ ಕ್ರೀಡಾಂಗಣದಲ್ಲಿ ನಡೆದ ದುರಂತಗಳು
ದಶಕಗಳಿಂದೀಚೆಗೆ ಅನೇಕ ಕ್ರೀಡಾಕೂಟಗಳಲ್ಲಿ ದುರಂತ ಸಂಭವಿಸಿದ್ದು ಹಲವಾರು ಅಭಿಮಾನಿಗಳು ಸಾವಿಗೀಡಾದ ಘಟನೆಗಳು ನಡೆದಿವೆ. ಆಗಸ್ಟ್ 16, 1980 ರಂದು, ಮೋಹನ್ ಬಗಾನ್-ಈಸ್ಟ್ ಬೆಂಗಾಲ್ ಕಲ್ಕತ್ತಾ ಫುಟ್‌ಬಾಲ್ ಲೀಗ್ ಪಂದ್ಯದ ವೇಳೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಕಾಲ್ತುಳಿತ ಮತ್ತು ಗಲಭೆಯಲ್ಲಿ 16 ಜನರು ಸಾವನ್ನಪ್ಪಿದರು.
ಪೂರ್ವ ಬಂಗಾಳದ ದಿಲೀಪ್ ಪಾಲಿತ್ ಮತ್ತು ಮೋಹನ್ ಬಗಾನ್‌ನ ಬಿದೇಶ್ ಬೋಸ್ ನಡುವಿನ ಪಿಚ್ ಜಗಳದ ನಂತರ ಅಭಿಮಾನಿಗಳ ನಡುವೆ ಘರ್ಷಣೆ ಪ್ರಾರಂಭವಾಯಿತು. ಎರಡು ತಂಡಗಳ ಬೆಂಬಲಿಗರ ನಡುವೆ ಯಾವುದೇ ಆಸನದ ಪ್ರತ್ಯೇಕತೆ ಇರಲಿಲ್ಲ, ಆದ್ದರಿಂದ ಹಿಂಸಾಚಾರ ಹರಡಿತು. ಏತನ್ಮಧ್ಯೆ, ಹೊರಗೇನು ನಡೆಯುತ್ತಿದೆ ಎಂದು ಪಿಚ್‌ನಲ್ಲಿ ಯಾರಿಗೂ ತಿಳಿಯದ ಕಾರಣ ಪಂದ್ಯ ಮುಂದುವರಿಯಿತು. ನಂತರ, ಆಗಸ್ಟ್ 16 ಅನ್ನು ಫುಟ್ಬಾಲ್ ಪ್ರೇಮಿಗಳ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು.
1964 ರಲ್ಲಿ ಲಿಮಾದಲ್ಲಿ ನಡೆದ ಪೆರು-ಅರ್ಜೆಂಟೀನಾ ಒಲಿಂಪಿಕ್ ಅರ್ಹತಾ ಪಂದ್ಯದಲ್ಲಿ ಕಾಲ್ತುಳಿತದಲ್ಲಿ 320 ಜನರು ಸಾವಿಗೀಡಾಗಿದ್ದರು. ಮಾರ್ಚ್ 1988 ರಲ್ಲಿ ನೇಪಾಳದ ಕಠ್ಮಂಡುವಿನ ರಾಷ್ಟ್ರೀಯ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಆಲಿಕಲ್ಲು ಮಳೆಯಾದಾಗ ಅಭಿಮಾನಿಗಳು ಬೀಗ ಹಾಕಿದ ಗೇಟ್‌ಗಳತ್ತ ಧಾವಿಸಿದಾಗ ಉಂಟಾದ ಕಾಲ್ತುಳಿತದಲ್ಲಿ 90 ಜನರು ಸಾವನ್ನಪ್ಪಿದರು.
Published On - 8:45 pm, Sun, 2 October 22