Kuldeep Yadav: ಎರಡನೇ ಟೆಸ್ಟ್‌ಗೆ ಕುಲ್ದೀಪ್ ಯಾದವ್ ಕೈಬಿಟ್ಟಿದ್ದಕ್ಕೆ ರಾಹುಲ್ ನೀಡಿದ ಕಾರಣವೇನು ಗೊತ್ತೇ?
KL Rahul, IND vs BAN 2nd Test: ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ನ ಟಾಸ್ ಪ್ರಕ್ರಿಯೆ ವೇಳೆ ನಾಯಕ ಕೆಎಲ್ ರಾಹುಲ್ ಅವರು ಕುಲ್ದೀಪ್ ಯಾದವ್ ಜಾಗಕ್ಕೆ ಜಯದೇವ್ ಉನಾದ್ಕಟ್ ಆಯ್ಕೆ ಆಗಿದ್ದಾರೆ ಎಂದು ಮಾಹಿತಿ ನೀಡಿದರು.
ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ಬಾಂಗ್ಲಾದೇಶ (India vs Bangladesh) ನಡುವಣ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಆರಂಭವಾಗಿದೆ. ಟಾಸ್ ಗೆದ್ದ ಬಾಂಗ್ಲಾದೇಶ ತಂಡ ನಾಯಕ ಶಕಿಬ್ ಅಲ್ ಹಸನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಉಭಯ ತಂಡಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಬಾಂಗ್ಲಾ ತಂಡದಲ್ಲಿ ಯಾಸಿರ್ ಅಲಿ ಬದಲು ಮೊಮಿನುಲ್ ಹಕ್ ಹಾಗೂ ಇಬಾದತ್ ಹುಸೇನ್ ಬದಲು ತಾಸ್ಕಿನ್ ಅಹ್ಮದ್ ಸ್ಥಾನ ಪಡೆದುಕೊಂಡಿದ್ದಾರೆ. ಇತ್ತ ಟೀಮ್ ಇಂಡಿಯಾದಲ್ಲೂ ಒಂದು ಅಚ್ಚರಿಯ ಬದಲಾವಣೆ ಮಾಡಲಾಗಿದೆ. ಮೊದಲ ಟೆಸ್ಟ್ನಲ್ಲಿ ಅದ್ಭುತ ಪ್ರದರ್ಶನ ತೋರಿ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡ ಕುಲ್ದೀಪ್ ಯಾದವ್ (Kuldeep Yadav) ಅವರನ್ನು ಹೊರಗಿಡಲಾಗಿದೆ. ಇವರ ಬದಲು ಜಯದೇವ್ ಉನಾದ್ಕಟ್ (Jaydev Unadkat) ಸ್ಥಾನ ಪಡೆದುಕೊಂಡಿದ್ದಾರೆ.
ಇದೀಗ ಒಂದು ಪಂದ್ಯವನ್ನಾಡಿಸಿ ಕುಲ್ದೀಪ್ ಯಾದವ್ ಅವರನ್ನು ಹೊರಗಿಟ್ಟ ಬಗ್ಗೆ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಟ್ವಿಟರ್ನಲ್ಲಿ ಬಿಸಿಸಿಐ ವಿರುದ್ಧ ಫ್ಯಾನ್ಸ್ ಕಿಡಿ ಕಾರುತ್ತಿದ್ದಾರೆ. ಮೊದಲ ಟೆಸ್ಟ್ನಲ್ಲಿ ಕುಲ್ದೀಪ್ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ 16 ಓವರ್ ಬೌಲಿಂಗ್ ಮಾಡಿ 40 ನೀಡಿ 5 ವಿಕೆಟ್ ಕಬಳಿಸಿದ್ದರು. ದ್ವಿತೀಯ ಇನ್ನಿಂಗ್ಸ್ನಲ್ಲೂ 20 ಓವರ್ ಬೌಲಿಂಗ್ ಮಾಡಿ 3 ವಿಕೆಟ್ ಕಿತ್ತಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮೂಲಕವೂ ಕೊಡುಗೆ ನೀಡಿದ ಇವರು ಆರ್. ಅಶ್ವಿನ್ ಜೊತೆಗೂಡಿ 92 ರನ್ಗಳ ಕಾಣಿಕೆ ನೀಡಿ 114 ಎಸೆತಗಳಲ್ಲಿ 40 ರನ್ ಕಲೆಹಾಕಿದ್ದರು. ಇದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಬಾಚಿಕೊಂಡಿದ್ದರು. ಆದರೀಗ ಎರಡನೇ ಟೆಸ್ಟ್ನಿಂದ ಇವರನ್ನು ದಿಢೀರ್ ಕೈಬಿಟ್ಟಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
Ranji Trophy: ಸಿಎಸ್ಕೆ ತಂಡದಿಂದ ಕಿಕ್ ಔಟ್; ರಣಜಿಯಲ್ಲಿ 252 ರನ್ ಚಚ್ಚಿದ ಡೆಲ್ಲಿ ಡ್ಯಾಶರ್..!
ಕೆಎಲ್ ರಾಹುಲ್ ಹೇಳಿದ್ದೇನು?:
ಟಾಸ್ ಪ್ರಕ್ರಿಯೆ ವೇಳೆ ನಾಯಕ ಕೆಎಲ್ ರಾಹುಲ್ ಅವರು ಕುಲ್ದೀಪ್ ಯಾದವ್ ಜಾಗಕ್ಕೆ ಜಯದೇವ್ ಉನಾದ್ಕಟ್ ಆಯ್ಕೆ ಆಗಿದ್ದಾರೆ ಎಂದು ಮಾಹಿತಿ ನೀಡಿದರು. ಇದಕ್ಕೆ ಕಾರಣ ಕೂಡ ತಿಳಿಸಿದ ರಾಹುಲ್, ”ಕುಲ್ದೀಪ್ ಯಾದವ್ ಅವರ ಜಾಗಕ್ಕೆ ಜಯದೇವ್ ಉನಾದ್ಕತ್ ಆಯ್ಕೆ ಮಾಡಿದ್ದೇವೆ. ಕುಲ್ದೀಪ್ ಅವರನ್ನು ಕೈಬಿಟ್ಟಿರುವುದು ಕಠಿಣ ನಿರ್ಧಾರ. ಆದರೆ, ಆರ್. ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಸ್ಪಿನ್ ಸೇವೆ ತಂಡಕ್ಕಿದೆ. ಮತ್ತು ಜಯದೇವ್ ಅವರು ಎಲ್ಲ ವಿಭಾಗಗಳಲ್ಲಿ ತಂಡಕ್ಕೆ ನೆರವಾಗಬಹುದು, ಇದೊಂದು ಅವರಿಗೆ ಉತ್ತಮ ಅವಕಾಶ,” ಎಂದು ಹೇಳಿದ್ದಾರೆ.
12 ವರ್ಷಗಳ ಬಳಿಕ ಉನಾದ್ಕಟ್ಗೆ ಅವಕಾಶ:
ಜಯದೇವ್ ಉನಾದ್ಕಟ್ ಬರೋಬ್ಬರಿ 12 ವರ್ಷಗಳ ಬಳಿಕ ಭಾರತ ಟೆಸ್ಟ್ ಪರ ಪ್ಲೇಯಿಂಗ್ XIನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. 2010ರಲ್ಲಿಯೇ ಇವರು ಭಾರತ ತಂಡದ ಟೆಸ್ಟ್‌ಗೆ ಕ್ರಿಕೆಟ್ ಪದಾರ್ಪಣೆ ಮಾಡಿದ್ದರು. ಭಾರತ ಕೇವಲ ಒಂದು ಟೆಸ್ಟ್ ಪಂದ್ಯವನ್ನು ಮಾತ್ರ ಆಡಿರುವ ಉನಾದ್ಕಟ್ ಯಾವುದೇ ವಿಕೆಟ್ ಪಡೆದುಕೊಂಡಿಲ್ಲ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಆಡಿರುವ 93 ಪಂದ್ಯಗಳಿಂದ 353 ವಿಕೆಟ್ ಪಡೆದಿದ್ದಾರೆ. ಅಲ್ಲದೆ ಸೌರಾಷ್ಟ್ರ ತಂಡವನ್ನು ನಾಯಕನಾಗಿ ಮುನ್ನಡೆಸಿ ರಣಜಿ ಟ್ರೋಫಿ ಗೆದ್ದಿದ್ದರು. ಇದೀಗ 12 ವರ್ಷಗಳ ಬಳಿಕ ಅವರು ಭಾರತ ತಂಡಕ್ಕೆ ಮರಳಿದ್ದು ಯಾವರೀತಿ ಪ್ರದರ್ಶನ ನೀಡುತ್ತಾರೆ ಎಂಬುದು ನೋಡಬೇಕಿದೆ.
ಭಾರತ ತಂಡ: ಕೆಎಲ್ ರಾಹುಲ್ (ನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಜಯದೇವ್ ಉನಾದ್ಕಟ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್.
ಬಾಂಗ್ಲಾದೇಶ ತಂಡ: ನಜ್ಮುಲ್ ಹುಸೇನ್ ಶಾಂಟೊ, ಜಾಕಿರ್ ಹಸನ್, ಮೊಮಿನುಲ್ ಹಕ್, ಲಿಟ್ಟನ್ ದಾಸ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್(ನಾಯಕ), ನೂರುಲ್ ಹಸನ್(ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್, ತಸ್ಕಿನ್ ಅಹ್ಮದ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:56 am, Thu, 22 December 22