ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯವನ್ನು 10 ವಿಕೆಟ್ಗಳಿಂದ ಸೋತಿರುವ ಟೀಂ ಇಂಡಿಯಾಕ್ಕೆ ಭಾರಿ ಮುಖಭಂಗ ಉಂಟಾಗಿದೆ. ಸೂಪರ್ 12 ಸುತ್ತಿನಲ್ಲಿ ಏಕೈಕ ಸೋಲುಂಡಿದ್ದ ರೋಹಿತ್ ಪಡೆಗೆ ಈ ಸೋಲು ಮರೆಯಲಾಗದ ಪೆಟ್ಟು ನೀಡಿದೆ. ತಂಡದ ಸೋಲಿಗೆ ಬೌಲಿಂಗ್ ವೈಫಲ್ಯದೊಂದಿಗೆ ಆರಂಭಿಕರ ವೈಫಲ್ಯವೂ ಕಾರಣವಾಗಿದೆ. ಟಿ20 ವಿಶ್ವಕಪ್‌ನ (T20 World Cup 2022) ಬಿಗ್ ಮ್ಯಾಚ್‌ನಲ್ಲಿ ಭಾರತದ ಆರಂಭಿಕ ಆಟಗಾರ ಕೆಎಲ್ ರಾಹುಲ್ (KL Rahul) ಮತ್ತೊಮ್ಮೆ ವಿಫಲರಾಗಿದ್ದಾರೆ. ದೊಡ್ಡ ತಂಡಗಳ ವಿರುದ್ಧ ಟೀಂ ಇಂಡಿಯಾಕ್ಕೆ (Team India) ಬಲಿಷ್ಠ ಆರಂಭ ನೀಡುವಲ್ಲಿ ರಾಹುಲ್ ಸತತವಾಗಿ ವಿಫಲರಾಗುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಬೌಂಡರಿಯೊಂದಿಗೆ ಭಾರತದ ಖಾತೆ ತೆರೆದ ರಾಹುಲ್ ಕೇವಲ 5 ರನ್ ಗಳಿಸಲಷ್ಟೇ ಶಕ್ತರಾದರು. ಆ ಬಳಿಕ ಎರಡನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಕ್ರಿಸ್ ವೋಕ್ಸ್ಗೆ ರಾಹುಲ್ ಬಲಿಯಾದರು.
ಈ ಟೂರ್ನಿಯ ಆರಂಭದಿಂದಲೂ ರಾಹುಲ್ ಕಳಪೆ ಫಾರ್ಮ್‌ನಿಂದ ಕಂಗೆಟ್ಟಿದ್ದರು. ಆದರೆ ಕಳೆದ ಎರಡು ಪಂದ್ಯಗಳಲ್ಲಿ ಅವರು ಪ್ರಬಲ ಪುನರಾಗಮನವನ್ನು ಮಾಡಿದ್ದರು. ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ವಿರುದ್ಧ ಅರ್ಧಶತಕಗಳನ್ನು ಬಾರಿಸಿದ್ದ ರಾಹುಲ್ ಮತ್ತೆ ತಮ್ಮ ಹಳೆಯ ಫಾರ್ಮ್‌ಗೆ ಮರಳಿದ್ದರು. ಆದರೆ ಸೆಮಿ-ಫೈನಲ್‌ನಲ್ಲಿ ಅವರ ಬ್ಯಾಟ್ಗೆ ಸದ್ದು ಮಾಡಲು ಸಾಧ್ಯವಾಗಲಿಲ್ಲ. ಮತ್ತೊಮ್ಮೆ ಅವರು ಟಿ20 ವಿಶ್ವಕಪ್‌ನಲ್ಲಿ ಅಗ್ರ 8 ತಂಡಗಳ ವಿರುದ್ಧ ಕಳಪೆ ಆಟ ಪ್ರದರ್ಶಿಸಿದ್ದಾರೆ.
ರಾಹುಲ್ ಮುಖ್ಯ ಪಂದ್ಯಗಳಲ್ಲಿ ಆಡುವುದಿಲ್ಲ
ಅದೇನೇ ಇರಲಿ, ಟಿ20 ವಿಶ್ವಕಪ್‌ನಲ್ಲಿ ಅಗ್ರ 8 ತಂಡಗಳ ವಿರುದ್ಧ ಕೆಎಲ್ ರಾಹುಲ್ ಅವರ ದಾಖಲೆ ವಿಶೇಷವೇನಲ್ಲ. ಅಡಿಲೇಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅವರು 5 ಎಸೆತಗಳಲ್ಲಿ 5 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಹಾಗೆಯೇ ಕೇವಲ 5 ನಿಮಿಷಗಳ ಕಾಲ ಕ್ರೀಸ್‌ನಲ್ಲಿ ಉಳಿಯಲು ಅವರಿಗೆ ಸಾಧ್ಯವಾಗಲಿಲ್ಲ. ಇದಕ್ಕೂ ಮೊದಲು ಮೆಲ್ಬೋರ್ನ್‌ನಲ್ಲಿ ಪಾಕಿಸ್ತಾನ ವಿರುದ್ಧ 8 ಎಸೆತಗಳಲ್ಲಿ 4 ರನ್ ಗಳಿಸಿ ಬ್ಯಾಟ್ ಬದಿಗಿಟ್ಟಿದ್ದರು.
ದೊಡ್ಡ ತಂಡಗಳ ವಿರುದ್ಧ ರಾಹುಲ್ ಫೇಲ್
ದಕ್ಷಿಣ ಆಫ್ರಿಕಾ ವಿರುದ್ಧ ಪರ್ತ್‌ನಲ್ಲಿ 14 ಎಸೆತಗಳಲ್ಲಿ ಅವರ ಬ್ಯಾಟ್‌ನಿಂದ ಕೇವಲ 9 ರನ್‌ಗಳು ಮಾತ್ರ ಬಂದವು. ಕಳೆದ ವರ್ಷ ದುಬೈನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 16 ಎಸೆತಗಳನ್ನು ಎದುರಿಸಿ, 18 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇದಕ್ಕೂ ಮುನ್ನ ದುಬೈನ ಇದೇ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧ 8 ಎಸೆತಗಳಲ್ಲಿ 3 ರನ್ ಗಳಿಸಿದ್ದರು.
ಕೊಹ್ಲಿಯಿಂದಲೂ ಸಲಹೆ
ಈ ಟೂರ್ನಿಯಲ್ಲಿ ಕೆಎಲ್ ರಾಹುಲ್ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ, ಪಾಕಿಸ್ತಾನ ವಿರುದ್ಧ 4 ರನ್ ಗಳಿಸಿದ್ದರು. ನೆದರ್ಲೆಂಡ್ಸ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಮುಂದಿನ ಪಂದ್ಯಗಳಲ್ಲಿ ತಲಾ 9 ರನ್ ಗಳಿಸಲು ಸಾಧ್ಯವಾಯಿತು. ಇದರ ನಂತರ ಅವರು ನೆಟ್ಸ್‌ನಲ್ಲಿ ವಿರಾಟ್ ಕೊಹ್ಲಿಯಿಂದ ಟಿಪ್ಸ್ ತೆಗೆದುಕೊಂಡಿದ್ದರು. ಟಿಪ್ಸ್ ತೆಗೆದುಕೊಂಡ ನಂತರ ಅವರು ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 50 ಮತ್ತು ಜಿಂಬಾಬ್ವೆ ವಿರುದ್ಧ 51 ರನ್ ಬಾರಿಸಿದ್ದರು.
Published On - 4:53 pm, Thu, 10 November 22