KL Rahul Wedding: ಜನವರಿಯಲ್ಲಿ ರಾಹುಲ್- ಅಥಿಯಾ ಮದುವೆ? ತಂಡದಿಂದ ಬ್ರೇಕ್ ಕೇಳಿದ ಕನ್ನಡಿಗ

| Updated By: ಪೃಥ್ವಿಶಂಕರ

Updated on: Dec 01, 2022 | 12:44 PM

KL Rahul Wedding: ಇಂಜುರಿ ಕಾರಣದಿಂದಾಗಿ ರಾಹುಲ್ ಈ ಬ್ರೇಕ್ ಕೇಳಿಲ್ಲ. ಬದಲಿಗೆ ಕೆಲವು ವೈಯಕ್ತಿಕ ಕಾರಣಗಳನ್ನು ನೀಡಿ ರಾಹುಲ್ ರಜೆ ಕೇಳಿದ್ದಾರೆ ಎಂದು ಬಿಸಿಸಿಐ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

KL Rahul Wedding: ಜನವರಿಯಲ್ಲಿ ರಾಹುಲ್- ಅಥಿಯಾ ಮದುವೆ? ತಂಡದಿಂದ ಬ್ರೇಕ್ ಕೇಳಿದ ಕನ್ನಡಿಗ
ಕೆಎಲ್ ರಾಹುಲ್- ಅಥಿಯಾ ಶೆಟ್ಟಿ
Follow us on

ಟಿ20 ವಿಶ್ವಕಪ್ (T20 World Cup) ಬಳಿಕ ಟೀಂ ಇಂಡಿಯಾದಿಂದ ದೂರ ಉಳಿದಿರುವ ಉಪನಾಯಕ ಕೆಎಲ್ ರಾಹುಲ್ (KL Rahul) ತಮ್ಮ ಕಳಪೆ ಫಾರ್ಮ್​ನಿಂದ ಹೊರಬರಲು ದೇವರ ಮೊರೆ ಹೋಗುತ್ತಿದ್ದಾರೆ. ಇತ್ತೀಚೆಗೆ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದ ರಾಹುಲ್ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಇದೀಗ ಭಾಂಗ್ಲಾದೇಶ ವಿರುದ್ಧ ಭಾನುವಾರದಿಂದ ಆರಂಭವಾಗುವ ಏಕದಿನ ಸರಣಿಯೊಂದಿಗೆ ರಾಹುಲ್ ಟೀಂ ಇಂಡಿಯಾ ಸೇರಲಿದ್ದಾರೆ. ಬಾಂಗ್ಲಾ ಪ್ರವಾಸದ ಬಳಿಕ ಟೀಂ ಇಂಡಿಯಾ (Team India) ಶ್ರೀಲಂಕಾ ವಿರುದ್ಧ ತವರಿನಲ್ಲಿ ಏಕದಿನ ಹಾಗೂ ಟಿ20 ಸರಣಿ ಆಡಲಿದ್ದು, ಈ ಸರಣಿಗಳಿಗೆ ರಾಹುಲ್ ಗೈರಾಗಲಿದ್ದಾರೆ ಎಂದು ವರದಿಯಾಗಿದೆ.

ಮದುವೆಗಾಗಿಯೇ ರಾಹುಲ್ ಈ ಬ್ರೇಕ್?

ವಾಸ್ತವವಾಗಿ ರಾಹುಲ್ ತವರಿನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಮತ್ತು ಏಕದಿನ ಸರಣಿಯಿಂದ ಹಿಂದೆ ಸರಿಯುವ ಸಾಧ್ಯತೆಯಿದ್ದು, ಅವರು ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ನಂತರ ಬ್ರೇಕ್ ತೆಗೆದುಕೊಳ್ಳಲಿದ್ದಾರೆ ಎಂದು ಇನ್ಸೈಡ್ ಸ್ಪೋರ್ಟ್ ವರದಿ ಮಾಡಿದೆ. ಈ ವರದಿಯ ಬೆನ್ನಲ್ಲೇ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಮದುವೆ ಮಾತು ಮುನ್ನೆಲೆಗೆ ಬಂದಿದ್ದು, ಮದುವೆಗಾಗಿಯೇ ರಾಹುಲ್ ಈ ಬ್ರೇಕ್ ತೆಗೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಹರಿದಾಡಲಾರಂಭಿಸಿದೆ.

ಇದನ್ನೂ ಓದಿ: India vs Bangladesh: ಬಾಂಗ್ಲಾದೇಶಕ್ಕೆ ಹೊರಟ ರೋಹಿತ್, ಕೊಹ್ಲಿ, ರಾಹುಲ್: ಭಾನುವಾರ ಮೊದಲ ಏಕದಿನ ಕದನ

ಹಾರ್ದಿಕ್ ಪಾಂಡ್ಯಗೆ ಟಿ20 ನಾಯಕತ್ವ?

ಜನವರಿ ಮೊದಲ ವಾರದಲ್ಲಿ ಸುನೀಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಅವರ ಜೊತೆ ರಾಹುಲ್ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ ಎಂಬ ಸುದ್ದಿಯಿದೆ. ಆದಾಗ್ಯೂ, ರಾಹುಲ್ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನಡೆಯಲ್ಲಿರುವ ಸರಣಿಗೆ ಲಭ್ಯವಿರುತ್ತಾರೆ ಎಂದು ವರದಿಯಾಗಿದೆ. ರೋಹಿತ್ ಶರ್ಮಾ ಕೂಡ ಟಿ20ಯಿಂದ ವಿರಾಮ ತೆಗೆದುಕೊಳ್ಳುವ ನಿರೀಕ್ಷೆ ಇರುವುದರಿಂದ ಹಾರ್ದಿಕ್ ಪಾಂಡ್ಯ ಟಿ20 ಸರಣಿಯಲ್ಲಿ ತಂಡದ ನಾಯಕತ್ವವಹಿಸುವ ಸಾಧ್ಯತೆ ಇದೆ. ಆದರೆ ತವರಿನಲ್ಲಿ ಶ್ರೀಲಂಕಾ ವಿರುದ್ಧ ನಡೆಯುವ ಏಕದಿನ ಹಾಗೂ ಟಿ20 ಸರಣಿಗಳ ವೇಳಾಪಟ್ಟಿ ಇನ್ನೂ ಪ್ರಕಟಿಸಲಾಗಿಲ್ಲ. ಮೂಲಗಳ ಪ್ರಕಾರ ಜನವರಿ ಮೊದಲ ವಾರದಲ್ಲಿ ಸರಣಿ ನಡೆಯುವ ಸಾಧ್ಯತೆ ಇದೆ ಎಂಬುದು ತಿಳಿದುಬಂದಿದೆ.

ವೈಯಕ್ತಿಕ ಕಾರಣಗಳನ್ನು ನೀಡಿ ರಾಹುಲ್ ರಜೆ ಕೇಳಿದ್ದಾರೆ

ಅಲ್ಲದೆ ರಾಹುಲ್ ವಿರಾಮ ಕೇಳಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಖಚಿತಪಡಿಸಿದ್ದು, ಕೆಲವು ವೈಯಕ್ತಿಕ ಕಾರಣಗಳಿಂದ ರಾಹುಲ್ ವಿರಾಮ ಕೇಳಿದ್ದಾರೆ. ಇಂಜುರಿ ಕಾರಣದಿಂದಾಗಿ ರಾಹುಲ್ ಈ ಬ್ರೇಕ್ ಕೇಳಿಲ್ಲ. ಬದಲಿಗೆ ಕೆಲವು ವೈಯಕ್ತಿಕ ಕಾರಣಗಳನ್ನು ನೀಡಿ ರಾಹುಲ್ ರಜೆ ಕೇಳಿದ್ದಾರೆ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. ರಾಹುಲ್ ಮದುವೆಯಾಗುತ್ತಿದ್ದಾರೋ ಅಥವಾ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೋ ಎಂಬುದು ನನಗೆ ಗೊತ್ತಿಲ್ಲ ಎಂದಿದ್ದಾರೆ.

ಇತ್ತೀಚೆಗೆ ಬಾಲಿವುಡ್ ನಟ ಹಾಗೂ ಕನ್ನಡಿಗ ಸುನೀಲ್ ಶೆಟ್ಟಿ ಬಳಿ ಈ ಇಬ್ಬರ ಮದುವೆ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ್ದ ಸುನೀಲ್ ಶೆಟ್ಟಿ, ಮದುವೆ ಯಾವಾಗ ಮತ್ತು ಎಲ್ಲಿ ನಡೆಯುತ್ತದೆ ಎಂಬುದನ್ನು ಶೀಘ್ರದಲ್ಲೇ ನಿಮಗೆ ತಿಳಿಸುತ್ತೇವೆ ಎಂದು ಹೇಳಿದ್ದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:41 pm, Thu, 1 December 22