ಸೆಂಚುರಿಯನ್ ಟೆಸ್ಟ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಟೀಂ ಇಂಡಿಯಾ ಇತಿಹಾಸ ನಿರ್ಮಿಸಿದೆ. ಐದನೇ ದಿನದಾಟದಲ್ಲಿ ದಕ್ಷಿಣ ಆಫ್ರಿಕಾವನ್ನು 113 ರನ್‌ಗಳಿಂದ ಸೋಲಿಸಿದ ನಂತರ ಟೀಮ್ ಇಂಡಿಯಾ ಮೊದಲ ಬಾರಿಗೆ ಈ ಮೈದಾನವನ್ನು ಗೆದ್ದಿದೆ. ಸೆಂಚುರಿಯನ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ಏಷ್ಯಾದ ಮೊದಲ ತಂಡ ಭಾರತ. ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ಸಿಡಿಸಿದ ಟೀಂ ಇಂಡಿಯಾ ಗೆಲುವಿನ ಹೀರೋ ಆಗಿ ಓಪನರ್ ಕೆಎಲ್ ರಾಹುಲ್ ಆಯ್ಕೆಯಾದರು. ಬ್ಯಾಟ್ಸ್‌ಮನ್‌ಗಳು ಆಡುವುದು ಕಷ್ಟಕರವಾಗಿದ್ದ ಪಿಚ್‌ನಲ್ಲಿ ರಾಹುಲ್ 123 ರನ್‌ಗಳ ಇನಿಂಗ್ಸ್ ಆಡಿದರು. ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಬಳಿಕ ಮಾತನಾಡಿದ ಕೆಎಲ್ ರಾಹುಲ್, ಸೆಂಚುರಿಯನ್ ಟೆಸ್ಟ್‌ಗೂ ಮುನ್ನ ತಮ್ಮ ತಂತ್ರವನ್ನು ಬದಲಾಯಿಸಿಕೊಂಡಿದ್ದು, ಅದರಿಂದ ತನಗೆ ಲಾಭವಾಯಿತು ಎಂದಿದ್ದಾರೆ.
ಈ ಬಗ್ಗೆ ಮಾತನಾಡಿದ ಕೆಎಲ್ ರಾಹುಲ್, ಇದು ಕೇವಲ ತಾಳ್ಮೆ ಮತ್ತು ದೃಢತೆಯನ್ನು ತೋರಿಸುವುದಾಗಿತ್ತು. ನನ್ನ ತಂಡಕ್ಕೆ ಉತ್ತಮ ಆರಂಭವನ್ನು ನೀಡಲು ನಾನು ಬಯಸಿದ್ದೆ. ಆರಂಭದಲ್ಲಿ ಉತ್ತಮ ಜೊತೆಯಾಟ ಮುಖ್ಯವಾಗಿತ್ತು. ನಾನು ನನ್ನ ತಂತ್ರದಲ್ಲಿ ಸ್ವಲ್ಪ ಕೆಲಸ ಮಾಡಿದ್ದೇನೆ. ಜೊತೆಗೆ ನಾನು ತಂಡದಿಂದ ಹೊರಗಿರುವಾಗ ನನ್ನ ಆಟದಲ್ಲಿ ನಾನು ತುಂಬಾ ಶ್ರಮಿಸಿದೆ. ಈಗ ಅದರ ಫಲ ಸಿಗುತ್ತಿದೆ. ಆದರೆ, ಕೆಎಲ್ ರಾಹುಲ್ ತಮ್ಮ ಯಶಸ್ಸಿಗೆ ಮತ್ತೊಂದು ಕಾರಣವನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಭಾರತದ ಬೌಲರ್‌ಗಳು ನೆಟ್ಸ್‌ನಲ್ಲಿ ಭಯ ಹುಟ್ಟಿಸಿದ್ದಾರೆ- ರಾಹುಲ್
ಪಂದ್ಯದ ನಂತರ ಕೆಎಲ್ ರಾಹುಲ್ ಭಾರತದ ವೇಗದ ಬೌಲರ್‌ಗಳನ್ನು ಹೊಗಳಿದರು. ಅದೇ ಸಮಯದಲ್ಲಿ, ನೆಟ್ಸ್‌ನಲ್ಲಿ ಅಭ್ಯಾಸದ ಸಮಯದಲ್ಲಿ ಈ ವೇಗದ ಬೌಲರ್‌ಗಳು ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್‌ಗಳ ಬಗ್ಗೆ ಕರುಣೆ ತೋರುವುದಿಲ್ಲ ಎಂದು ಅವರು ಹೇಳಿದರು. ಈ ವೇಗದ ಬೌಲಿಂಗ್ ದಾಳಿಯನ್ನು ನೆಟ್ಸ್‌ನಲ್ಲಿ ಆಡುವುದು ಕೂಡ ಕಷ್ಟಕರವಾಗಿದೆ. ವಿಶೇಷವಾಗಿ ನನಗೆ ನೆಟ್ ಸೆಷನ್‌ನಲ್ಲಿ ತುಂಬಾ ಹೆದರಿಕೆಯಾಗುತ್ತದೆ. ಅಂತಹ ಬೌಲಿಂಗ್ ದಾಳಿಯನ್ನು ಹೊಂದಲು ನಮಗೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ.
ವಿದೇಶದಲ್ಲಿ ರನ್ ಗಳಿಸಲು ಶಿಸ್ತು ಸಾಕಷ್ಟು ನೆರವಾಗಿದೆ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ. ಬ್ಯಾಟಿಂಗ್‌ನಲ್ಲಿನ ಶಿಸ್ತು ನನ್ನ ಆಟಕ್ಕೆ ಸಾಕಷ್ಟು ಕೊಡುಗೆ ನೀಡಿದೆ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ. ಇದು ವಿದೇಶದಲ್ಲಿ ಬ್ಯಾಟಿಂಗ್‌ಗೆ ನೆರವಾಗಿದೆ. ವಿದೇಶದಲ್ಲಿ ಶತಕ ಬಾರಿಸಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ. ವೇಗದ ಬೌಲರ್‌ಗಳ ಬಗ್ಗೆ ಹೇಳುವುದಾದರೆ, ಅವರ ಸಾಮರ್ಥ್ಯ ಅದ್ಭುತವಾಗಿದೆ. ಅವರು ಬೌಲಿಂಗ್ ಮಾಡುವ ರೀತಿ ನಿಜಕ್ಕೂ ದೊಡ್ಡ ವಿಚಾರ. ಶಮಿ ಯಾವಾಗಲೂ ಚೆಂಡಿನ ಸಹಾಯ ಪಡೆಯುತ್ತಾರೆ. ಇದೀಗ ಮತ್ತೊಮ್ಮೆ ಉತ್ತಮ ಪ್ರದರ್ಶನವನ್ನು ಪುನರಾವರ್ತಿಸಿ ಎರಡನೇ ಟೆಸ್ಟ್‌ನಲ್ಲೂ ಗೆಲುವು ಸಾಧಿಸುವ ಗುರಿ ಹೊಂದಲಾಗಿದೆ ಎಂದಿದ್ದಾರೆ.