IND vs AUS: ಲಾರ್ಡ್ಸ್​ನಿಂದ ಪರ್ತ್​ವರೆಗೆ; ವಿದೇಶಿ ಪಿಚ್​ಗಳಲ್ಲಿ ರಾಹುಲ್​ಗೆ ಸರಿಸಾಟಿ ಯಾರು?

|

Updated on: Nov 23, 2024 | 5:57 PM

KL Rahul's Test Career: ಕೆಎಲ್ ರಾಹುಲ್ ಭಾರತದ ಪರ ಇದುವರೆಗೆ 50 ಟೆಸ್ಟ್​ ಪಂದ್ಯಗಳನ್ನಾಡಿದ್ದರೂ ಅವರ ಸರಾಸರಿ ತೀರ ಕಡಿಮೆ ಇದೆ. ಆದಾಗ್ಯೂ ರಾಹುಲ್​ಗೆ ಅವಕಾಶಗಳನ್ನು ನೀಡಲಾಗುತ್ತಿದೆ. ಇದಕ್ಕೆ ಕಾರಣ, ಕಠಿಣ ಪರಿಸ್ಥಿತಿಯಲ್ಲಿ ತಂಡಕ್ಕೆ ಅಮೂಲ್ಯ ಕೊಡುಗೆ ನೀಡುವುದರಲ್ಲಿ ರಾಹುಲ್ ನಿಪುಣರು. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಂತಹ ತಂಡಗಳ ವಿರುದ್ಧದ ಪಂದ್ಯಗಳಲ್ಲಿ ಅವರ ಸ್ಮರಣೀಯ ಇನ್ನಿಂಗ್ಸ್‌ಗಳೇ ಇದಕ್ಕೆ ಸಾಕ್ಷಿ.

IND vs AUS: ಲಾರ್ಡ್ಸ್​ನಿಂದ ಪರ್ತ್​ವರೆಗೆ; ವಿದೇಶಿ ಪಿಚ್​ಗಳಲ್ಲಿ ರಾಹುಲ್​ಗೆ ಸರಿಸಾಟಿ ಯಾರು?
ಕೆಎಲ್ ರಾಹುಲ್
Follow us on

‘ಕೆಎಲ್ ರಾಹುಲ್ ಹೊಂದಿರುವ ಪ್ರತಿಭೆಗೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಸರಾಸರಿ 60 ಕ್ಕಿಂತ ಹೆಚ್ಚಿರಬೇಕಿತ್ತು’. ಇದು ನಾವು ಹೇಳುತ್ತಿರುವ ಮಾತಲ್ಲ. ಆಸ್ಟ್ರೇಲಿಯಾದ ಲೆಜೆಂಡರಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಮ್ಯಾಥ್ಯೂ ಹೇಡನ್ ವೀಕ್ಷಕ ವಿವರಣೆಯಲ್ಲಿ ಹೇಳಿದ ಮಾತುಗಳಿವು. ಆದರೆ ಭಾರತದ ಪರ 50ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿರುವ ರಾಹುಲ್ ಅವರ ಸರಾಸರಿ ಕೇವಲ 34 ಮಾತ್ರ. ಹೀಗಾಗಿ ರಾಹುಲ್ ತಮ್ಮ ಸುದೀರ್ಘ ಟೆಸ್ಟ್ ವೃತ್ತಿಜೀವನದಲ್ಲಿ ಸಾಕಷ್ಟು ಬಾರಿ ಟೀಕೆಗೆ ಗುರಿಯಾಗಿದ್ದಾರೆ. ಭಾರತ ತಂಡದಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆದ ಹೊರತಾಗಿಯೂ ರಾಹುಲ್​ಗೆ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ನಾನಾ ಕಾರಣಗಳಿರಬಹುದು. ಇದರ ನಡುವೆ ಸಾಕಷ್ಟು ವೈಫಲ್ಯಗಳ ನಡುವೆಯೂ ರಾಹುಲ್​ಗೆ ತಂಡದಲ್ಲಿ ಏಕೆ ಅವಕಾಶಗಳನ್ನು ನೀಡಲಾಗುತ್ತಿದೆ ಎಂಬ ಪ್ರಶ್ನೆ ಹಲವರಲ್ಲಿ ಮೂಡಬಹುದು. ಅದಕ್ಕೆಲ್ಲ ಉತ್ತರ, ತಂಡ ಸಂಕಷ್ಟಕ್ಕೆ ಸಿಲುಕಿದಾಗ, ಅದರಲ್ಲೂ ವಿದೇಶಿ ಪಿಚ್​ಗಳಲ್ಲಿ ಎದುರಾಳಿ ತಂಡದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿ ಸ್ಮರಣೀಯ ಇನ್ನಿಂಗ್ಸ್ ಕಟ್ಟುವ ಕಲೆ ರಾಹುಲ್​ಗೆ ಕರಗತವಾಗಿರುವುದು.

ಪರ್ತ್ ಟೆಸ್ಟ್‌ಗೂ ಮುನ್ನ, ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ರಾಹುಲ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಕೊಡಬೇಕೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಇದಕ್ಕೆ ಕಾರಣವೂ ಇತ್ತು. ಏಕೆಂದರೆ ರಾಹುಲ್, ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿಫಲರಾಗಿದ್ದರು. ಹೀಗಾಗಿ ಅವರನ್ನು ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಬೆಂಚ್ ಮೇಲೆ ಕೂರಿಸಲಾಗಿತ್ತು. ಆ ಬಳಿಕವೂ ರಾಹುಲ್​ರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡಲಾಗಿತ್ತು. ಎಂದಿನಂತೆ ಅವರ ಆಯ್ಕೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಯಿತು. ಆ ನಂತರ ಪರ್ತ್ ಟೆಸ್ಟ್‌ನಿಂದ ರೋಹಿತ್ ಶರ್ಮಾ ಮತ್ತು ಶುಭ್​ಮಾನ್ ಗಿಲ್ ಹೊರಗುಳಿಯುವ ಸುದ್ದಿ ಬಂದಾಗ, ಟೀಂ ಇಂಡಿಯಾಕ್ಕೆ ಇದ್ದ ಒಂದೇ ಒಂದು ವಿಶ್ವಾಸಾರ್ಹ ಆಯ್ಕೆ ಎಂದರೆ ಅದು ರಾಹುಲ್ ಮಾತ್ರ. ಹೀಗಾಗಿಯೇ ರಾಹುಲ್​ರನ್ನು ಪರ್ತ್​ ಟೆಸ್ಟ್​ನಲ್ಲಿ ಆರಂಭಿಕನಾಗಿ ಕಣಕ್ಕಿಳಿಸಲಾಯಿತು.

ಮತ್ತೆ ತಮ್ಮ ಕ್ಲಾಸ್ ತೋರಿಸಿದ ರಾಹುಲ್

ವಾಸ್ತವವಾಗಿ ರಾಹುಲ್ ಟೀಂ ಇಂಡಿಯಾ ಪರ 50 ಕ್ಕೂ ಹೆಚ್ಚು ಟೆಸ್ಟ್​ ಪಂದ್ಯಗಳನ್ನು ಆಡಿದ್ದರೂ ಅವರಿಗೆ ಆದ ಒಂದು ನಿರ್ದೀಷ್ಟ ಸ್ಲಾಟ್ ಅನ್ನು ಇದುವರೆಗೂ ನೀಡಲಾಗಿಲ್ಲ. ಒಮ್ಮೊಮ್ಮೆ ಆರಂಭಿಕನಾಗಿ ಕಣಕ್ಕಿಳಿಯುವ ರಾಹುಲ್​, ಮತ್ತೊಮ್ಮೆ ಮಧ್ಯಮ ಕ್ರಮಾಂಕದಲ್ಲಿ ಅಥವಾ ಕೆಳ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಾರೆ. ಆದರೆ ತನಗೆ ಯಾವ ಕ್ರಮಾಂಕ ನೀಡಿದರೂ ಅದಕ್ಕೆ ನ್ಯಾಯ ಒದಗಿಸಬಲ್ಲೇ ಎಂಬುದಕ್ಕೆ ರಾಹುಲ್ ಸಾಕಷ್ಟು ಪುರಾವೆಗಳನ್ನು ನೀಡಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಪರ್ತ್ ಟೆಸ್ಟ್ ಅನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, ಮೊದಲ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯದ ವೇಗಿಗಳ ಎದುರು ಟೀಂ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್​ಗಳು ಪಿಚ್​ನಲ್ಲಿ ನಿಲ್ಲಲು ಪರದಾಡುತ್ತಿದ್ದರೆ, ರಾಹುಲ್ ಮಾತ್ರ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ದುರಾದೃಷ್ಟವಶಾತ್ ವಿವಾದಾತ್ಮಕ ತೀರ್ಪಿಗೆ ರಾಹುಲ್ ಬಲಿಯಾಗಬೇಕಾಯಿತು. ಆದರೆ ಎರಡನೇ ಇನ್ನಿಂಗ್ಸ್​ನಲ್ಲಿ ಯಾವುದೇ ಸಣ್ಣ ತಪ್ಪಿಗೂ ಅವಕಾಶ ಮಾಡಿಕೊಡದ ರಾಹುಲ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹೇಜಲ್‌ವುಡ್ ಅವರ ಮಾರಕ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದರು.

ಕ್ರಮೇಣ, ಕ್ರೀಸ್‌ನಲ್ಲಿ ಹೆಚ್ಚು ಸಮಯ ಉಳಿಯುವ ಮೂಲಕ, ಆಸ್ಟ್ರೇಲಿಯಾದ ಬೌಲರ್‌ಗಳು ದಣಿಯುವಂತೆ ಮಾಡಿದಲ್ಲದೆ, ನಡು ನಡುವೆ ತಾಳ್ಮೆ ಕಳೆದುಕೊಳ್ಳುತ್ತಿದ್ದ ಯಶಸ್ವಿ ಜೈಸ್ವಾಲ್​ರನ್ನು ಎಚ್ಚರಿಸುವ ಕೆಲಸ ಮಾಡಿದರು. ಇದರ ಜೊತೆಗೆ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಅನುಭವವನ್ನು ಧಾರೆ ಎರೆದ ರಾಹುಲ್, ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಪ್ರದರ್ಶಿಸುವ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿ ಕೊಟ್ಟರು. ರಾಹುಲ್​ ಅವರ ಆಟವನ್ನು ನೋಡಿದ ವಾಸಿಂ ಅಕ್ರಂ ಕೂಡ ಕಾಮೆಂಟರಿ ಮಾಡುತ್ತಿದ್ದ ವೇಳಿ, ‘ರಾಹುಲ್​ ಅವರ ಆಟವನ್ನು ನೋಡಿದರೆ ನನಗೆ ಸಚಿನ್ ತೆಂಡೂಲ್ಕರ್ ನೆನಪಾಗುತ್ತಿದ್ದಾರೆ’ ಎಂದು ಹೇಳಿದರು.

ಈ ಹಿಂದೆಯೂ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದ ರಾಹುಲ್

ಕಠಿಣ ಪರಿಸ್ಥಿತಿಯಲ್ಲಿ ರಾಹುಲ್ ತಂಡದ ಜವಾಬ್ದಾರಿ ವಹಿಸಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆ 2021ರಲ್ಲಿ ಶುಭಮನ್ ಗಿಲ್ ಹಠಾತ್ ಗಾಯಗೊಂಡಾಗ ಇಂಗ್ಲೆಂಡ್ ಪ್ರವಾಸದಲ್ಲಿ ರಾಹುಲ್ ತಂಡದ ಓಪನಿಂಗ್ ಜವಾಬ್ದಾರಿ ವಹಿಸಿಕೊಂಡಿದ್ದರು. ಲಾರ್ಡ್ಸ್ ಟೆಸ್ಟ್‌ನಲ್ಲಿ ನೆಲ ಕಚ್ಚಿ ಆಡಿದ್ದ ರಾಹುಲ್ 129 ರನ್‌ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದ್ದರು. ನಂತರ ಅದೇ ವರ್ಷದಲ್ಲಿ, ಅವರು ದಕ್ಷಿಣ ಆಫ್ರಿಕಾದ ಸೆಂಚುರಿಯನ್‌ನಲ್ಲಿ ಮಾರಣಾಂತಿಕ ದಕ್ಷಿಣ ಆಫ್ರಿಕಾದ ದಾಳಿಯ ವಿರುದ್ಧ ಆರಂಭಿಕನಾಗಿ ಕಣಕ್ಕಿಳಿದು 123 ರನ್‌ಗಳ ಇನ್ನಿಂಗ್ಸ್‌ ಆಡಿದ್ದರು. ಇದಲ್ಲದೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಅದೇ ಸೆಂಚುರಿಯನ್‌ನಲ್ಲಿ ನಡೆದ ಪಂದ್ಯದಲ್ಲಿ ಮತ್ತೊಮ್ಮೆ ಟೀಂ ಇಂಡಿಯಾದ ಬೆನ್ನಿಗೆ ನಿಂತಿದ್ದ ರಾಹುಲ್ 6ನೇ ಕ್ರಮಾಂಕದಲ್ಲಿ ಅಖಾಡಕ್ಕಿಳಿದು 101 ರನ್‌ಗಳ ಇನ್ನಿಂಗ್ಸ್‌ ಆಡಿದ್ದರು. ಹೀಗೆ ರಾಹುಲ್ ಅನೇಕ ಸಂದರ್ಭಗಳಲ್ಲಿ ತಂಡವನ್ನು ಸಂಕಷ್ಟದಿಂದ ಹೊರತರುವ ಕೆಲಸವನ್ನು ಮಾಡಿದ್ದಾರೆ. ಆದ್ದರಿಂದಲೇ ತಂಡದ ಆಡಳಿತ ಮಂಡಳಿ ರಾಹುಲ್​ಗೆ ಮತ್ತೆ ಮತ್ತೆ ಅವಕಾಶಗಳನ್ನು ನೀಡುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:52 pm, Sat, 23 November 24