IND vs AUS: ಟೀಮ್ ಇಂಡಿಯಾ ಆರಂಭಿಕ ಜೋಡಿ ಯಾರೆಂದು ತಿಳಿಸಿದ ರೋಹಿತ್ ಶರ್ಮಾ

India vs Australia: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯವು ನಾಳೆಯಿಂದ (ಡಿ.6) ಶುರುವಾಗಲಿದೆ. ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಡೇ-ನೈಟ್ ಟೆಸ್ಟ್ ಎಂಬುದು ವಿಶೇಷ. ಅಂದರೆ ಈ ಪಂದ್ಯವು ಭಾರತೀಯ ಕಾಲಮಾನ ಬೆಳಿಗ್ಗೆ 9.30 ರಿಂದ ಶುರುವಾಗಲಿದೆ.

IND vs AUS: ಟೀಮ್ ಇಂಡಿಯಾ ಆರಂಭಿಕ ಜೋಡಿ ಯಾರೆಂದು ತಿಳಿಸಿದ ರೋಹಿತ್ ಶರ್ಮಾ
Rohit Sharma-Rahul-Jaiswal

Updated on: Dec 05, 2024 | 12:58 PM

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಯಾರು ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ? ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಅಡಿಲೇಡ್​ನಲ್ಲಿ ನಡೆಯಲಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಇನಿಂಗ್ಸ್ ಆರಂಭಿಸಲಿದ್ದಾರೆ ಎಂದು ಭಾರತ ತಂಡದ  ರೋಹಿತ್ ಶರ್ಮಾ ಖಚಿತಪಡಿಸಿದ್ದಾರೆ.

ಪಿಂಕ್ ಬಾಲ್ ಟೆಸ್ಟ್ ನಿಮಿತ್ತ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ, ಡೇ-ನೈಟ್ ಟೆಸ್ಟ್​​ನಲ್ಲೂ ಕೆಎಲ್ ರಾಹುಲ್ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. ನಾನು ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದೇನೆ ಎಂದು ತಿಳಿಸಿದ್ದಾರೆ.

ಈ ಮೂಲಕ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಇನಿಂಗ್ಸ್ ಆರಂಭಿಸಲಿರುವುದನ್ನು ಹಿಟ್​​ಮ್ಯಾನ್ ಖಚಿತಪಡಿಸಿದ್ದಾರೆ. ಇದಕ್ಕೂ ಮುನ್ನ ಪರ್ತ್​​​ನಲ್ಲಿ ನಡೆದ ಮೊದಲ ಪಂದ್ಯಕ್ಕೆ ವೈಯುಕ್ತಿಕ ಕಾರಣಗಳಿಂದಾಗಿ ರೋಹಿತ್ ಶರ್ಮಾ ಅಲಭ್ಯರಾಗಿದ್ದರು.

ಹೀಗಾಗಿ ಕೆಎಲ್ ರಾಹುಲ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಲಾಗಿತ್ತು. ಅದರಂತೆ ಸಿಕ್ಕ ಅವಕಾಶವನ್ನು ಬಳಸಿಕೊಂಡ ಕೆಎಲ್ ರಾಹುಲ್ ಪ್ರಥಮ ಟೆಸ್ಟ್​​ನಲ್ಲಿ ಒಟ್ಟು 103 ರನ್​​ಗಳನ್ನು ಬಾರಿಸಿ ಟೀಮ್ ಇಂಡಿಯಾಗೆ ಉತ್ತಮ ಆರಂಭ ಒದಗಿಸಿದ್ದರು.

ಇದೀಗ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲು ಮುಂದಾಗಿರುವ ರೋಹಿತ್ ಶರ್ಮಾ ಮಧ್ಯಮ ಕ್ರಮಾಂಕದಲ್ಲಿ ಆಡಲು ನಿರ್ಧರಿಸಿದ್ದಾರೆ. ಅಲ್ಲದೆ ಪರ್ತ್ ಟೆಸ್ಟ್​​ನಲ್ಲಿ ಯಶಸ್ವಿಯಾಗಿರುವ ಆರಂಭಿಕ ಜೋಡಿಯನ್ನೇ ಅಡಿಲೇಡ್​​ನಲ್ಲೂ ಮುಂದುವರೆಸಲು ಬಯಸಿದ್ದಾರೆ.

ಅದರಂತೆ ಶುಕ್ರವಾರದಿಂದ (ಡಿ.6) ಶುರುವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲೂ ಟೀಮ್ ಇಂಡಿಯಾ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಮೊದಲ ಪಂದ್ಯದಿಂದ ಹೊರಗುಳಿದಿದ್ದ ಶುಭ್​​ಮನ್ ಗಿಲ್ ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ.

ಇದನ್ನೂ ಓದಿ: ಶರ ವೇಗದ ಸೆಂಚುರಿ ಸಿಡಿಸಿ ವಿಶ್ವ ದಾಖಲೆ ಬರೆದ ಅಭಿಷೇಕ್ ಶರ್ಮಾ

ನಾಲ್ಕನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಡಿದರೆ, ರೋಹಿತ್ ಶರ್ಮಾ ಅಥವಾ ರಿಷಭ್ ಪಂತ್ ಐದನೇ ಕ್ರಮಾಂಕದಲ್ಲಿ ಆಡಬಹುದು. ಇನ್ನು ಆಲ್​ರೌಂಡರ್​ಗಳಾಗಿ ನಿತೀಶ್ ಕುಮಾರ್ ರೆಡ್ಡಿ ಹಾಗೂ ವಾಷಿಂಗ್ಟನ್ ಸುಂದರ್​ಗೆ ಪ್ಲೇಯಿಂಗ್ ಇಲೆವೆನ್​​ನಲ್ಲಿ ಚಾನ್ಸ್ ಸಿಗಬಹುದು.  ಇನ್ನು ವೇಗಿಗಳಾಗಿ ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಹಾಗೂ ಹರ್ಷಿತ್ ರಾಣಾ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಭಾರತ vs ಆಸ್ಟ್ರೇಲಿಯಾ ಪಂದ್ಯ ಎಷ್ಟು ಗಂಟೆಗೆ ಶುರು?

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯವು ನಾಳೆಯಿಂದ (ಡಿ.6) ಶುರುವಾಗಲಿದೆ. ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಡೇ-ನೈಟ್ ಟೆಸ್ಟ್ ಎಂಬುದು ವಿಶೇಷ. ಅಂದರೆ ಈ ಪಂದ್ಯವು ಭಾರತೀಯ ಕಾಲಮಾನ ಬೆಳಿಗ್ಗೆ 9.30 ರಿಂದ ಶುರುವಾಗಲಿದೆ. ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಹಾಗೂ ಡಿಸ್ನಿ ಹಾಟ್​ಸ್ಟಾರ್ ಆ್ಯಪ್​ ಮತ್ತು ವೆಬ್​ಸೈಟ್​​ಗಳಲ್ಲಿ ವೀಕ್ಷಿಸಬಹುದು.

 

 

Published On - 12:58 pm, Thu, 5 December 24