ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯ ನಾಳೆಯಿಂದ ಅಡಿಲೇಡ್ನಲ್ಲಿ ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನ ಈಗಾಗಲೇ ಉಭಯ ತಂಡಗಳ ನಡುವೆ ಸ್ಲೆಡ್ಜಿಂಗ್ ವಾರ್ ಶುರುವಾಗಿದೆ. ವಾಸ್ತವವಾಗಿ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲೇ ಅದರ ಝಲಕ್ ಎಲ್ಲರನ್ನೂ ರೋಮಾಂಚನಗೊಳಿಸಿತ್ತು.
ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ರನ್ನು ಆಸೀಸ್ ಅನುಭವಿಗಳು ಸಾಕಷ್ಟು ಭಾರಿ ಕೆಣಕ್ಕಿದರು. ಆದರೆ ವಯಸ್ಸು ಅನ್ನೋದು ಕೇವಲ ದೇಹಕ್ಕೆ ಮಾತ್ರ ಎಂಬುದನ್ನು ಸಾಭೀತುಪಡಿಸಿದ್ದ ಜೈಸ್ವಾಲ್, ಕಾಂಗರೂ ಆಟಗಾರರಿಗೆ ಸ್ಲೆಡ್ಜಿಂಗ್ ಪಾಠ ಮಾಡಿದ್ದರು. ಇದೀಗ ಮೊದಲ ಟೆಸ್ಟ್ ಪಂದ್ಯದ ವೇಳೆ ಜೈಸ್ವಾಲ್ ನನ್ನನ್ನು ಸ್ಲೆಡ್ಜ್ ಮಾಡಿದ್ದರು ಎಂದು ಆಸೀಸ್ ಲೆಜೆಂಡರಿ ಸ್ಪಿನ್ನರ್ ನಾಥನ್ ಲಿಯಾನ್ ಹೇಳಿಕೊಂಡಿದ್ದಾರೆ.
ಪಾಡ್ಕ್ಯಾಸ್ಟ್ನಲ್ಲಿ ಮಾತನಾಡಿದ ನಾಥನ್ ಲಿಯಾನ್, ‘ನಾನು ಪರ್ತ್‌ನಲ್ಲಿ ಬೌಲಿಂಗ್ ಮಾಡುವಾಗ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಮಾತನಾಡುತ್ತಿದ್ದೆ. ಆ ವೇಳೆ ನೀವು ಲೆಜೆಂಡ್ ಆದರೆ ನಿಮಗೀಗ ವಯಸ್ಸಾಗಿದೆ ಎಂದು ಯಶಸ್ವಿ ಜೈಸ್ವಾಲ್ ನನಗೆ ಹೇಳಿದರು. ಇದಾದ ನಂತರ ನಾನು ನಿಜ ಸ್ನೇಹಿತ ಆದರೆ ನನಗಿನ್ನೂ ವಯಸ್ಸಾಗಿಲ್ಲ ಎಂದು ಹೇಳಿದೆ ಎಂದಿದ್ದಾರೆ.
ನಾಥನ್ ಲಿಯಾನ್ರನ್ನು ಮಾತ್ರವಲ್ಲದೆ ಪರ್ತ್‌ನಲ್ಲಿ ಯಶಸ್ವಿ ಜೈಸ್ವಾಲ್ ಮಿಚೆಲ್ ಸ್ಟಾರ್ಕ್ ಅವರನ್ನು ಸಹ ಸ್ಲೆಡ್ಜ್ ಮಾಡಿದ್ದರು. ಕ್ರೀಸ್ನಲ್ಲಿ ಬ್ಯಾಟಿಂಗ್ ಮಾಡುವ ವೇಳೆ ಜೈಸ್ವಾಲ್ಗೆ ಸ್ಟಾರ್ಕ್ ಏನನ್ನೋ ಹೇಳಿದರು. ಇದರಿಂದ ಕೆರಳಿದ ಜೈಸ್ವಾಲ್, ನಿಮ್ಮ ಎಸೆತದಲ್ಲಿ ಅಷ್ಟು ವೇಗವಿಲ್ಲ ಎಂದು ಹೇಳಿ ಆಸೀಸ್ ವೇಗಿಗೆ ತಕ್ಕ ತಿರುಗೇಟು ನೀಡಿದ್ದರು.
ಇದನ್ನು ಕೇಳಿಸಿಕೊಂಡಿದ್ದ ಸ್ಟಾರ್ಕ್ ನನಗೇನೂ ಕೇಳಿಸಿಯೇ ಇಲ್ಲವೆಂಬಂತೆ ತಮ್ಮ ಬೌಲಿಂಗ್ ಮುಂದುವರೆಸಿದ್ದರು. ಆದರೆ ಪಂದ್ಯ ಮುಗಿದ ನಂತರ ಈ ಬಗ್ಗೆ ಸ್ಟಾರ್ಕ್ ಅವರ ಬಳಿ ಕೇಳಲಾಯಿತು. ಇದಕ್ಕೆ ಉತ್ತರಿಸಿದ್ದ ಅವರು, ಜೈಸ್ವಾಲ್ ಆ ರೀತಿಯಾಗಿ ಏನನ್ನು ಹೇಳಲಿಲ್ಲ ಎಂದು ಹೇಳಿದ್ದರು.
ಪರ್ತ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವಲ್ಲಿ ಯಶಸ್ವಿ ಜೈಸ್ವಾಲ್ ಪ್ರಮುಖ ಪಾತ್ರ ವಹಿಸಿದ್ದರು. ಜೈಸ್ವಾಲ್ಗೆ ಮೊದಲ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಶತಕ ಗಳಿಸಿದರು. ಜೈಸ್ವಾಲ್ ಎರಡನೇ ಇನ್ನಿಂಗ್ಸ್‌ನಲ್ಲಿ 161 ರನ್‌ಗಳ ಇನ್ನಿಂಗ್ಸ್ ಆಡಿದರು.
ಜೈಸ್ವಾಲ್ ಅವರ ಶತಕದ ಆಧಾರದ ಮೇಲೆ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 487 ರನ್‌ಗಳ ಬೃಹತ್ ಸ್ಕೋರ್ ಮಾಡಿತು ಮತ್ತು ಆಸ್ಟ್ರೇಲಿಯಾಕ್ಕೆ 534 ರನ್‌ಗಳ ಗುರಿ ನೀಡಿತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ತಂಡವು ಕೇವಲ 238 ರನ್‌ಗಳಿಗೆ ಆಲೌಟ್ ಆಯಿತು. ಹೀಗಾಗಿ ಪರ್ತ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾ 295 ರನ್‌ಗಳ ದಾಖಲೆಯ ಗೆಲುವು ಸಾಧಿಸಿತ್ತು.
Published On - 3:57 pm, Thu, 5 December 24