IND vs NZ: ಸಂಕಷ್ಟದಲ್ಲಿದ್ದ ತಂಡಕ್ಕೆ ಅಜೇಯ ಶತಕದ ಮೂಲಕ ಆಸರೆಯಾದ ಕೆಎಲ್ ರಾಹುಲ್

KL Rahul Century: ರಾಜ್‌ಕೋಟ್‌ನಲ್ಲಿ ನಡೆದ ಭಾರತ-ನ್ಯೂಜಿಲೆಂಡ್ 2ನೇ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಭರ್ಜರಿ ಅಜೇಯ 112 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಆರಂಭಿಕ ವಿಕೆಟ್ ಪತನದ ನಡುವೆಯೂ 92 ಎಸೆತಗಳಲ್ಲಿ ತಮ್ಮ 8ನೇ ಏಕದಿನ ಶತಕ ಪೂರೈಸಿದ ರಾಹುಲ್, ತಂಡವನ್ನು ಸಂಕಷ್ಟದಿಂದ ಪಾರು ಮಾಡಿ 284 ರನ್‌ಗಳಿಗೆ ಕೊಂಡೊಯ್ದರು. ಇದು ಅವರ ತಾಳ್ಮೆಯ ಹಾಗೂ ನಿರ್ಣಾಯಕ ಇನ್ನಿಂಗ್ಸ್ ಆಗಿತ್ತು.

IND vs NZ: ಸಂಕಷ್ಟದಲ್ಲಿದ್ದ ತಂಡಕ್ಕೆ ಅಜೇಯ ಶತಕದ ಮೂಲಕ ಆಸರೆಯಾದ ಕೆಎಲ್ ರಾಹುಲ್
Kl Rahul

Updated on: Jan 14, 2026 | 5:39 PM

ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ (KL Rahul) ಭರ್ಜರಿ ಶತಕ ಬಾರಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ ಆರಂಭಿಸಿದ ಟೀಂ ಇಂಡಿಯಾಕ್ಕೆ ಪ್ರಮುಖ ಆಟಗಾರರ ವಿಕೆಟ್ ಪತನ ಆಘಾತವನ್ನುಂಟು ಮಾಡಿತ್ತು. ಆದರೆ ಈ ಪಂದ್ಯದಲ್ಲಿ ತಂಡದ ಪರ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ರಾಹುಲ್, ತಂಡವನ್ನು ಸಂಕಷ್ಟದಿಂದ ಪಾರು ಮಾಡಿದಲ್ಲದೆ, ತಮ್ಮ ಏಕದಿನ ವೃತ್ತಿಜೀವನದ 8ನೇ ಶತಕವನ್ನು ಪೂರ್ಣಗೊಳಿಸಿದರು. ಕೊನೆಯವರೆಗೂ ಅಜೇಯರಾಗಿ ಉಳಿದ ರಾಹುಲ್ ತಂಡವನ್ನು 284 ರನ್​ಗಳಿಗೆ ಕೊಂಡೊಯ್ದಿದ್ದು ಮಾತ್ರವಲ್ಲದೆ ತಾವು ಕೂಡ 92 ಎಸೆತಗಳಲ್ಲಿ ಅಜೇಯ 112 ರನ್ ಬಾರಿಸಿದರು.

ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾಕ್ಕೆ ರೋಹಿತ್, ಗಿಲ್, ಶ್ರೇಯಸ್, ಕೊಹ್ಲಿಯ ವಿಕೆಟ್ ಪತನ ಆಘಾತ ತಂದ್ದೊಡ್ಡಿತ್ತು. ಈ ವೇಳೆ ರವೀಂದ್ರ ಜಡೇಜಾ ಜೊತೆ ತಂಡದ ಇನ್ನಿಂಗ್ಸ್ ಕಟ್ಟಿದ ಕೆಎಲ್ ರಾಹುಲ್ 793 ದಿನಗಳ ನಂತರ ಏಕದಿನ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದರು. ನವೆಂಬರ್ 12, 2023 ರಂದು ನೆದರ್ಲ್ಯಾಂಡ್ಸ್ ವಿರುದ್ಧ ತಮ್ಮ ಕೊನೆಯ ಏಕದಿನ ಶತಕ ಬಾರಿಸಿದ್ದ ರಾಹುಲ್ ಅಂದಿನಿಂದ ಶತಕದ ಬರ ಎದುರಿಸಿದ್ದರು. ಈಗ, ಮೂರು ವರ್ಷಗಳ ನಂತರ, ರಾಹುಲ್ ಶತಕ ಸಿಡಿಸಿದ್ದಾರೆ.

ಮಗಳಿಗೆ ಶತಕ ಅರ್ಪಿಸಿದ ರಾಹುಲ್

ಸಿಕ್ಸರ್ ಬಾರಿಸುವ ಮೂಲಕ ಶತಕ ಪೂರೈಸಿದ ಕೆಎಲ್ ರಾಹುಲ್, ಈ ಮೈಲಿಗಲ್ಲು ತಲುಪಿದ ನಂತರ ವಿಶಿಷ್ಟ ರೀತಿಯಲ್ಲಿ ಆಚರಿಸಿದರು. ಅವರು ತಮ್ಮ ಬ್ಯಾಟ್ ಅನ್ನು ಗಾಳಿಯಲ್ಲಿ ಬೀಸುತ್ತಾ ಮತ್ತು ಇನ್ನೊಂದು ಕೈನ ಎರಡು ಬೆರಳುಗಳನ್ನು ಬಾಯಿಯಲ್ಲಿ ಇಟ್ಟು ಬೆರಳು ಚೀಪುವ ರೀತಿ ಶತಕವನ್ನು ಸಂಭ್ರಮಿಸಿದರು. ಅಂದರೆ ರಾಹುಲ್ ಈ ಶತಕವನ್ನು ತಮ್ಮ ಮಗಳಿಗೆ ಅರ್ಪಿಸಿದರು. ಇದಕ್ಕೂ ಮೊದಲು ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ್ದಾಗಲೂ ಇದೇ ರೀತಿಯ ಸಂಭ್ರಮಾಚರಣೆ ಮಾಡಿದ್ದರು. ಇದೀಗ ಈ ಸಂಭ್ರಮಾಚರಣೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

IND vs SA: ಏಕದಿನದಲ್ಲಿ ನಾಯಕನಾಗಿ ಕೆಎಲ್ ರಾಹುಲ್ ಪ್ರದರ್ಶನ ಹೇಗಿದೆ?

ತಂಡದ ಟ್ರಬಲ್ ಶೂಟರ್ ರಾಹುಲ್

ಮೇಲೆ ಹೇಳಿದಂತೆ ಕೆಎಲ್ ರಾಹುಲ್ ಕ್ರೀಸ್‌ಗೆ ಬಂದಾಗ, ಟೀಂ ಇಂಡಿಯಾ ಸಂಕಷ್ಟದಲ್ಲಿತ್ತು. ಭಾರತೀಯ ತಂಡ ರೋಹಿತ್, ವಿರಾಟ್ ಮತ್ತು ಅಯ್ಯರ್ ಅವರಂತಹ ಆಟಗಾರರ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ನಂತರ ರಾಹುಲ್ 5 ನೇ ಸ್ಥಾನದಲ್ಲಿ ಬಂದು ಜಡೇಜಾ ಅವರೊಂದಿಗೆ 88 ಎಸೆತಗಳಲ್ಲಿ 73 ರನ್‌ಗಳ ಜೊತೆಯಾಟ ನಡೆಸಿದರು. ಗಮನಾರ್ಹವಾಗಿ, ಜಡೇಜಾ ಈ ಪಾಲುದಾರಿಕೆಯಲ್ಲಿ 44 ಎಸೆತಗಳಲ್ಲಿ ಕೇವಲ 27 ರನ್‌ಗಳನ್ನು ಮಾತ್ರ ನೀಡಿದರು, ಆದರೆ ರಾಹುಲ್ ಮಧ್ಯಮ ಓವರ್‌ಗಳಲ್ಲಿ ವೇಗವಾಗಿ ಬ್ಯಾಟಿಂಗ್ ಮಾಡಿ 44 ಎಸೆತಗಳಲ್ಲಿ 46 ರನ್‌ಗಳನ್ನು ಗಳಿಸಿದರು. ನಂತರ ರಾಹುಲ್ 49 ಎಸೆತಗಳಲ್ಲಿ ನಿತೀಶ್ ಕುಮಾರ್ ರೆಡ್ಡಿ ಅವರೊಂದಿಗೆ 57 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. 52 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಾಹುಲ್ ಮುಂದಿನ 35 ಎಸೆತಗಳಲ್ಲಿ ಶತಕ ಬಾರಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:09 pm, Wed, 14 January 26