ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಜಸ್​ಪ್ರೀತ್ ಬುಮ್ರಾ..!

ಹೈ ಡ್ರಾಮಾ… ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಜಸ್​ಪ್ರೀತ್ ಬುಮ್ರಾ..!

ಝಾಹಿರ್ ಯೂಸುಫ್
|

Updated on: Dec 29, 2024 | 1:20 PM

Australia vs India, 4th Test: ಎಂಸಿಜಿ ಮೈದಾನದಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 4ನೇ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ತಂಡವು 9 ವಿಕೆಟ್ ಕಳೆದುಕೊಂಡು 228 ರನ್ ಕಲೆಹಾಕಿದೆ. ಈ ಮೂಲಕ ಐದನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಕೊನೆಯ ದಿನದಾಟದಲ್ಲಿ ಭಾರತ ತಂಡಕ್ಕೆ ಬೃಹತ್ ಮೊತ್ತದ ಗುರಿ ನೀಡುವ ವಿಶ್ವಾಸದಲ್ಲಿದೆ.

ಮೆಲ್ಬೋರ್ನ್​ ಎಂಸಿಜಿ ಮೈದಾನದಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಈ ಹೋರಾಟದಲ್ಲಿ ಕೊನೆಗೂ ಮೇಲುಗೈ ಸಾಧಿಸಿದ್ದು ಆಸ್ಟ್ರೇಲಿಯಾ. ಇದಕ್ಕೆ ಒಂದು ಕಾರಣ ಟೀಮ್ ಇಂಡಿಯಾದ ದುರಾದೃಷ್ಟ ಎಂದರೆ ತಪ್ಪಾಗಲಾರದು. ಏಕೆಂದರೆ ದ್ವಿತೀಯ ಇನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ತಂಡವು 173 ರನ್​​ಗಳಿಗೆ 9 ವಿಕೆಟ್ ಕಳೆದುಕೊಂಡು ಇನ್ನೇನು ಆಲೌಟ್ ಆಗುವುದರಲ್ಲಿತ್ತು. ಆದರೆ 10ನೇ ವಿಕೆಟ್​ಗೆ ಜೊತೆಯಾದ ನಾಥನ್ ಲಿಯಾನ್ ಹಾಗೂ ಸ್ಕಾಟ್ ಬೋಲ್ಯಾಂಡ್ 55 ರನ್​ಗಳ ಅಮೋಘ ಜೊತೆಯಾಟವಾಡಿದರು.

ಇತ್ತ ಟೀಮ್ ಇಂಡಿಯಾ ಬೌಲರ್​​ಗಳು ಕೊನೆಯ ವಿಕೆಟ್ ಪಡೆಯಲು ಹರಸಾಹಸ ಪಟ್ಟರು. ಅದರಲ್ಲೂ ಜಸ್​ಪ್ರೀತ್ ಬುಮ್ರಾ ಎಸೆದ ನಾಲ್ಕನೇ ದಿನದಾಟದ ಕೊನೆಯ ಓವರ್​ನಲ್ಲಿ ನಾಥನ್ ಲಿಯಾನ್ ಸ್ಲಿಪ್​ನಲ್ಲಿದ್ದ ಕೆಎಲ್ ರಾಹುಲ್​ಗೆ ಕ್ಯಾಚ್ ನೀಡಿದರು. ಈ ಕ್ಯಾಚ್​ ಅನ್ನು ಹಿಡಿಯಲು ತಡಬಡಿಸಿದ ರಾಹುಲ್ ಕೊನೆಗೂ ಕಾಲಿನಲ್ಲಿ ಚೆಂಡನ್ನು ಬಂಧಿಸಿದರು.

ಅತ್ತ ಕೊನೆಯ ವಿಕೆಟ್ ಸಿಗುತ್ತಿದ್ದಂತೆ ಟೀಮ್ ಇಂಡಿಯಾ ಅಭಿಮಾನಿಗಳು ಹರ್ಷೋದ್ಘಾರ ಮುಗಿಲು ಮುಟ್ಟಿತು. ಆದರೆ ಕೆಲವೇ ಕ್ಷಣದಲ್ಲಿ ಅಂಪೈರ್ ನೋಬಾಲ್ ಕರೆದರು. ಹೌದು, ಅಂತಿಮ ಓವರ್​ನಲ್ಲಿ ನಾಥನ್ ಲಿಯಾನ್ ಔಟಾಗಿದ್ದರೂ, ಅದು ನೋಬಾಲ್ ಆಗಿತ್ತು.

ನೋಬಾಲ್ ಆಗಿರುವುದು ಗೊತ್ತಾಗುತ್ತಿದ್ದಂತೆ ಜಸ್​ಪ್ರೀತ್ ಬುಮ್ರಾ ನಿರಾಸೆಯೊಂದಿಗೆ ಮತ್ತೆ ಚೆಂಡೆಸೆಯಲು ಸಾಗಿದರು. ಇದಾದ ಬಳಿಕ ಮೂರು ಎಸೆತಗಳನ್ನು ಎಸೆದರೂ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಅದರಂತೆ ಆಸ್ಟ್ರೇಲಿಯಾ ತಂಡವು ನಾಲ್ಕನೇ ದಿನದಾಟ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 228 ರನ್ ಕಲೆಹಾಕಿದೆ. ಈ ಮೂಲಕ ಐದನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.