
ಭಾರತ ಕ್ರಿಕೆಟ್ ತಂಡವನ್ನು ಹಿಂದೆಂದಿಗಿಂತಲೂ ಹೆಚ್ಚು ಕಠಿಣ ಹಾಗೂ ಬಲಿಷ್ಠ ತಂಡವನ್ನಾಗಿ ರೂಪಿಸುವಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ 2018ರಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ವೇಳೆ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಟೆಸ್ಟ್ ಪಂದ್ಯವನ್ನು ನೆನಪಿಸಿಕೊಂಡಿರುವ ಫಾಫ್, ವಿರಾಟ್ ನಾಯಕತ್ವದ ಗುಣವನ್ನು ಕೊಂಡಾಡಿದ್ದಾರೆ.
ಕ್ರಿಕ್‌ಇನ್ಫೋದಲ್ಲಿ ಪ್ರಸಾರವಾದ ‘ಕ್ರಿಕೆಟರ್ಸ್ ಆನ್ ಕ್ರಿಕೆಟರ್ಸ್’ ಕಾರ್ಯಕ್ರಮದಲ್ಲಿ ಮಾತನಾಡಿದ ಫಾಫ್ ಡು ಪ್ಲೆಸಿಸ್, 2018ರ ಭಾರತ-ದಕ್ಷಿಣ ಆಫ್ರಿಕಾ ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದ ಅನುಭವವನ್ನು ಹಂಚಿಕೊಂಡಿದ್ದಾರೆ. ‘2018ರ ಭಾರತ-ದಕ್ಷಿಣ ಆಫ್ರಿಕಾ ಸರಣಿಯಲ್ಲಿ ನನಗೆ ಇಂದಿಗೂ ನೆನಪಿರುವುದು ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯ. ಆ ಪಂದ್ಯ ಹಾಗೂ ನಂತರದ ಸರಣಿಯಲ್ಲಿ ವಿರಾಟ್ ನಾಯಕತ್ವದಿಂದ ಭಾರತೀಯ ತಂಡ ಹೆಚ್ಚು ಕಠಿಣ ಮತ್ತು ಬಲಿಷ್ಠವಾಗಿರುವುದನ್ನು ಸ್ಪಷ್ಟವಾಗಿ ಗಮನಿಸಿದ್ದೆ’ ಎಂದು ಫಾಫ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಡೇಲ್ ಸ್ಟೇನ್ ಕೂಡ 2018ರ ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದ ಬಗ್ಗೆ ಮಾತನಾಡಿದ್ದು, ‘ಜೋಹಾನ್ಸ್‌ಬರ್ಗ್ ಪಂದ್ಯದಲ್ಲಿ ಡೀನ್ ಎಲ್ಗರ್ ಅವರ ತಲೆಗೆ ಚೆಂಡು ಬಡಿದಿತ್ತು. ಭಾರತೀಯ ಬ್ಯಾಟರ್‌ಗಳಿಗೂ ಚೆಂಡು ಕೈಗವಸು ಹಾಗೂ ದೇಹಕ್ಕೆ ಹಲವು ಬಾರಿ ಬಡಿದಿತ್ತು. ಆದರೂ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ. ಅಂಪೈರ್‌ಗಳ ಬಳಿಯೂ ದೂರು ನೀಡಲಿಲ್ಲ. ಏಕೆಂದರೆ ಅವರು ಪಂದ್ಯದಲ್ಲಿ ಮುನ್ನಡೆಯಲ್ಲಿದ್ದರು. ದಕ್ಷಿಣ ಆಫ್ರಿಕಾಕ್ಕೆ ಬಂದಿದ್ದ ಅತ್ಯಂತ ಕಠಿಣ ಮನೋಭಾವದ ಭಾರತೀಯ ತಂಡ ಅದಾಗಿತ್ತು.
ನಾವು ಅಂಪೈರ್‌ಗಳಿಗೆ ಪಿಚ್ ಅಪಾಯಕಾರಿಯಾಗಿದೆ ಎಂದು ಹೇಳುತ್ತಿದ್ದೆವು. ಆದರೆ ಭಾರತೀಯ ಆಟಗಾರರು ಯಾವುದೇ ದೂರು ನೀಡುತ್ತಿರಲಿಲ್ಲ. ನಾವು ಪಂದ್ಯದಲ್ಲಿ ಹಿನ್ನಡೆಯಲ್ಲಿದ್ದ ಕಾರಣ ಪಿಚ್ ಬಗ್ಗೆ ಹೆಚ್ಚು ಚಿಂತಿಸುತ್ತಿದ್ದೆವು. ಆದರೆ ಭಾರತೀಯರು ಚೆಂಡು ಕೈಗವಸುಗಳಿಗೆ ಬಡಿದರೂ ಸುಮ್ಮನಿದ್ದರು’ ಎಂದು ಸ್ಟೇನ್ ವಿವರಿಸಿದ್ದಾರೆ.
ಭಾರತದ ಈ ಗೆಲುವಿನ ಹಿಂದೆ ವಿರಾಟ್ ಕೊಹ್ಲಿಯ ಹೋರಾಟದ ಮನೋಭಾವ ಹಾಗೂ ಅವರ ದೃಢ ನಾಯಕತ್ವ ಪ್ರಮುಖ ಕಾರಣ ಎಂದು ಫಾಫ್ ಹಾಗೂ ಸ್ಟೇನ್ ಅಭಿಪ್ರಾಯಪಟ್ಟಿದ್ದಾರೆ. ‘ಭಾರತ ತಂಡದಲ್ಲಿ ಫಿಟ್ನೆಸ್ ಸಂಸ್ಕೃತಿಯನ್ನು ಆರಂಭಿಸಿದವರು ವಿರಾಟ್ ಕೊಹ್ಲಿ ಎಂದರೆ ತಪ್ಪಾಗಲಾರದು. ನಾನು ಅವರನ್ನು ಮೊದಲ ಬಾರಿ ಭೇಟಿಯಾದಾಗ ಅವರು ದುಂಡುಮುಖದ ಯುವ ಆಟಗಾರನಾಗಿದ್ದರು. ಆದರೆ ಇಂದು ಫಿಟ್ನೆಸ್ ವಿಚಾರದಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರಿಂದ ಪ್ರೇರಣೆ ಪಡೆದು ತಂಡದ ಇತರ ಆಟಗಾರರೂ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ’ ಎಂದು ಹೇಳಿದ್ದಾರೆ.
ರನ್ ಚೇಸ್ ಅಂದರೆ ವಿರಾಟ್ ಕೊಹ್ಲಿಯದ್ದೇ ಸಾಮ್ರಾಜ್ಯ; ಸಚಿನ್ ದಾಖಲೆ ಈಗ ಕಿಂಗ್ ಪಾಲು!
2014ರಿಂದ 2022ರವರೆಗೆ ಭಾರತ ಟೆಸ್ಟ್ ತಂಡದ ಪೂರ್ಣಾವಧಿ ನಾಯಕನಾಗಿದ್ದ ವಿರಾಟ್ ಕೊಹ್ಲಿ, ಒಟ್ಟು 68 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 40 ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದಾರೆ. ಕೇವಲ 17 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ.