ಕೆರಿಬಿಯನ್ನರ ನಾಡಿಗೆ ಪ್ರವಾಸ ಬೆಳೆಸಿ ಟೆಸ್ಟ್ ಸರಣಿಯನ್ನು ಆಡುತ್ತಿರುವ ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ (West Indies vs England) ವಿರುದ್ಧದ ಎರಡನೇ ಟೆಸ್ಟ್ನಲ್ಲಿ ಕೂಡ ಡ್ರಾ ಸಾಧಿಸಿದೆ. ಮೊದಲ ಟೆಸ್ಟ್ ಡ್ರಾ ಆದ ರೀತಿಯಲ್ಲೆ ದ್ವಿತೀಯ ಟೆಸ್ಟ್ ಕೂಡ ಡ್ರಾ ಆಗಿದೆ. ಬಾರ್ಬಡೊಸ್ನ (Barbados) ಕೆನ್ಸಿಂಗ್ಟಾನ್ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 282 ರನ್ಗಳ ಟಾರ್ಗೆಟ್ ಬೆನ್ನಟ್ಟಲು ಹೋಗಿ ಅಂತಿಮ ದಿನದಾಟದ ಅಂತ್ಯಕ್ಕೆ ವೆಸ್ಟ್ ಇಂಡೀಸ್ 135 ರನ್ ಗಳಿಸಲಷ್ಟೆ ಶಕ್ತವಾದ ಪರಿಣಾಮ ಪಂದ್ಯ ಡ್ರಾ ಎಂದು ಘೋಷಿಸಲಾಯಿತು. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನಾಯಕ ಕ್ರೇಗ್ ಬ್ರಾಥ್ ವೈಟ್ (Kraigg Brathwaite) ಅವರು ಟೆಸ್ಟ್ ಪಂದ್ಯವೊಂದರಲ್ಲಿ ತಮ್ಮ ದೇಶದ ಪರ ಅತಿ ಹೆಚ್ಚು ಚೆಂಡುಗಳನ್ನು ಎದಿರಿಸಿದ್ದ ದಿಗ್ಗಜ ಬ್ರಿಯನ್ ಲಾರ (582 ಬಾಲ್) ದಾಖಲೆಯನ್ನು ಅಳಿಸಿ ಹಾಕಿದರು. ಈ ಪಂದ್ಯದಲ್ಲಿ ಬ್ರಾಥ್ ವೈಟ್ ಬರೋಬ್ಬರಿ 673 ಬಾಲ್ ಆಡಿದರು.
A truly remarkable landmark as a Test batsman.??
@K_Brathwaite has now faced more balls in a Test match than both @BrianLara & Sir Garry Sobers.??#WIvENG #MenInMaroon pic.twitter.com/2VepDlpIzX— Windies Cricket (@windiescricket) March 20, 2022
ದ್ವಿತೀಯ ಟೆಸ್ಟ್ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ನಾಯಕ ಜೋ ರೂಟ್ ಅವರ 153 ರನ್ ಹಾಗೂ ಬೆನ್ ಸ್ಟೋಕ್ಸ್ ಅವರ 120 ರನ್ಗಳ ನೆರವಿನಿಂದ ಮೊದಲ ಇನ್ನಿಂಗ್ಸ್ನಲ್ಲಿ 507 ರನ್ಗೆ ಡಿಕ್ಲೇರ್ ಘೋಷಿಸಿತು. ಬಳಿಕ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ದ್ವಿತೀಯ ದಿನದಾಟದ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 71 ರನ್ ಕಲೆಹಾಕಿತ್ತು. ಬಳಿಕ ಮೂರನೇ ದಿನದಾಟದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 288 ರನ್ ಕಲೆಹಾಕಿತು. ವೆಸ್ಟ್ ಇಂಡೀಸ್ ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ನಾಯಕ ಕ್ರೇಗ್ ಬ್ರಾಥ್ ವೈಟ್ ಅಜೇಯ 109 ರನ್ ಮತ್ತಯ ಜರ್ಮೈನ್ ಬ್ಲ್ಯಾಕ್ ವುಡ್ 102 ರನ್ ಗಳಿಸಿ ತಂಡಕ್ಕೆ ನೆರವಾದರು. ನಾಲ್ಕನೇ ದಿನದಾಟದಲ್ಲಿ ಆಂಗ್ಲರು ಮೇಲುಗೈ ಸಾಧಿಸಿದರು. ಬ್ರಾಥ್ವೈಟ್ 489 ಎಸೆತಗಳಲ್ಲಿ 17 ಫೋರ್ನೊಂದಿಗೆ 160 ರನ್ಗೆ ಔಟಾದರೆ, ಬಳಿಕ ಬಂದ ಬ್ಯಾಟರ್ಗಳ ಪೈಕಿ ಜೋಶ್ವಾ ಸಿಲ್ವ 33 ರನ್ ಗಳಿಸಿದ್ದೇ ಹೆಚ್ಚು.
ಅಂತಿಮವಾಗಿ ವೆಸ್ಟ್ ಇಂಡೀಸ್ 187.5 ಓವರ್ನಲ್ಲಿ 411 ರನ್ಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಜ್ಯಾಕ್ ಲೀಚ್ 3 ವಿಕೆಟ್ ಕಿತ್ತರೆ, ಬೆನ್ ಸ್ಟೋಕ್ಸ್ ಹಾಗೂ ಸಕೀಬ್ ಮೊಹಮ್ಮದ್ ತಲಾ 2 ವಿಕೆಟ್ ಪಡೆದರು. ಬಳಿಕ ಅಲ್ಪ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ನಾಲ್ಕನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 40 ರನ್ ಬಾರಿಸಿ 136 ರನ್ಗಳ ಮುನ್ನಡೆಯಲ್ಲಿತ್ತು. ಅಂತಿಮ ದಿನದಾಟ ಆರಂಭಿಸಿದ ಇಂಗ್ಲೆಂಡ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿತು. ಜೊತೆಗೆ ವಿಕೆಟ್ಗಳನ್ನು ಕೂಡ ಕಳೆದುಕೊಂಡಿತು. ಲಾರೆನ್ಸ್ 39 ಎಸೆತಗಳಲ್ಲಿ 41ರನ್ ಸಿಡಿಸಿದರೆ ಜಾಕ್ ಕ್ರಾಲೇ 40 ರನ್ ಚಚ್ಚಿದರು. ಇಂಗ್ಲೆಂಡ್ ಭೋಜನಾ ವಿರಾಮದ ಹೊತ್ತಿಗೆ 36.5 ಓವರ್ನಲ್ಲಿ 185 ರನ್ಗೆ 6 ವಿಕೆಟ್ ಕಳೆದುಕೊಂಡಿದ್ದಾಗ ಡಿಕ್ಲೇರ್ ಘೋಷಿಸಿತು.
ಉತ್ತಮ ಮುನ್ನಡೆಯೊಂದಿಗೆ ವೆಸ್ಟ್ ಇಂಡೀಸ್ಗೆ ಗೆಲ್ಲಲು 282 ರನ್ಗಳ ಟಾರ್ಗೆಟ್ ನೀಡಿತು. ಎರಡನೇ ಇನ್ನಿಂಗ್ಸ್ನಲ್ಲೂ ಕೆರಿಬಿಯನ್ನರಿಗೆ ನಾಯಕ ಕ್ರೇಗ್ ಬ್ರಾಥ್ ವೈಟ್ ಆಸರೆಯಾದರು. ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ಗಳು ಉರುಳಿದರೆ ನಾಯಕ ಕ್ರೀಸ್ ಕಚ್ಚಿ ನಿಂತರು. ಇವರು 184 ಎಸೆತಗಳಲ್ಲಿ ಅಜೇಯ 56 ರನ್ ಗಳಿಸಿದರು. ಜೋಶ್ವಾ ಡಿ ಸಿಲ್ವಾ ಅಜೇಯ 30 ರನ್ ಗಳಿಸಿದರು. ಕೊನೆಯ ದಿನದಾಟದ ಅಂತ್ಯಕ್ಕೆ ವೆಸ್ಟ್ ಇಂಡೀಸ್ 5 ವಿಕೆಟ್ ಕಳೆದುಕೊಂಡು 135 ರನ್ ಅಷ್ಟೇ ಗಳಿಸಿದ ಪರಿಣಾಮ ಪಂದ್ಯ ಡ್ರಾ ಆಯಿತು.