
ಒಂದೆಡೆ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವೆ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದರೆ, ಮತ್ತೊಂದೆಡೆ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ (Australia vs West Indies) ನಡುವೆಯೂ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಿದೆ. ಈಗಾಗಲೇ ಆಸ್ಟ್ರೇಲಿಯಾ ತಂಡ 2-0 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿದ್ದರೆ, ಇತ್ತ ವಿಂಡೀಸ್ ವೈಟ್ ವಾಶ್ ಮುಖಭಂಗದಿಂದ ಪಾರಾಗಲು ಎದುರು ನೋಡುತ್ತಿದೆ. ಹೀಗಾಗಿ ವಿಂಡೀಸ್ ತಂಡ ತನ್ನ ಆಡುವ ಹನ್ನೊಂದರ ಬಳಗದಲ್ಲಿ ಪ್ರಮುಖ ಬದಲಾವಣೆ ಮಾಡಿದ್ದು, ತಂಡದ ಅನುಭವಿ ಆರಂಭಿಕ ಕ್ರೇಗ್ ಬ್ರಾಥ್‌ವೈಟ್ (Kraigg Brathwaite) ಅವರನ್ನು ಈ ಪಂದ್ಯದಿಂದ ಹೊರಗಿಟ್ಟಿದೆ. ಈ ಮೂಲಕ ವೆಸ್ಟ್ ಇಂಡೀಸ್ ಪರ ಸತತ 90 ಟೆಸ್ಟ್ ಪಂದ್ಯಗಳನ್ನು ಆಡಿ ದಾಖಲೆ ಬರೆದಿದ್ದ ಬ್ರಾಥ್‌ವೈಟ್ ಅವರ ಓಟಕ್ಕೆ ಬ್ರೇಕ್ ಬಿದ್ದಿದೆ.
ಕ್ರೇಗ್ ಬ್ರಾಥ್‌ವೈಟ್ ವಿಂಡೀಸ್ ತಂಡದ ಪರ ಸತತ 90 ಟೆಸ್ಟ್ ಪಂದ್ಯಗಳನ್ನು ಆಡಿದ ಮೊದಲ ವೆಸ್ಟ್ ಇಂಡೀಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು, ವೆಸ್ಟ್ ಇಂಡೀಸ್‌ನಿಂದ ಯಾರೂ ಸತತ 90 ಟೆಸ್ಟ್ ಪಂದ್ಯಗಳನ್ನು ಆಡಿರಲಿಲ್ಲ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ಪರ ಸತತ 85 ಪಂದ್ಯಗಳನ್ನು ಆಡಿದ ಶ್ರೇಷ್ಠ ಆಲ್‌ರೌಂಡರ್ ಸರ್ ಗ್ಯಾರಿ ಸೋಬರ್ಸ್ ಇದ್ದಾರೆ. ಹಾಗೆಯೇ ಮಾಜಿ ಆರಂಭಿಕ ಆಟಗಾರ ಡೆಸ್ಮಂಡ್ ಹೇನ್ಸ್ ಸತತ 72 ಪಂದ್ಯಗಳನ್ನು ಆಡಿದರೆ, ಬ್ರಿಯಾನ್ ಲಾರಾ ಸತತ 64 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದರು.
ಇತ್ತೀಚೆಗೆ, ಕ್ರೇಗ್ ಬ್ರಾಥ್‌ವೈಟ್ ವೆಸ್ಟ್ ಇಂಡೀಸ್ ಪರ 100 ಟೆಸ್ಟ್ ಪಂದ್ಯಗಳನ್ನು ಆಡಿದ ದಾಖಲೆಯನ್ನು ಮಾಡಿದ್ದರು. ಈ ಮೂಲಕ ವೆಸ್ಟ್ ಇಂಡೀಸ್ ಪರ 100 ಟೆಸ್ಟ್ ಪಂದ್ಯಗಳನ್ನು ಆಡಿದ ಹತ್ತನೇ ಆಟಗಾರ ಎನಿಸಿಕೊಂಡಿದ್ದರು. ವಿಂಡೀಸ್ ಪರ ಅವರು 100 ಟೆಸ್ಟ್ ಪಂದ್ಯಗಳಲ್ಲಿ 32.51 ಸರಾಸರಿಯಲ್ಲಿ 5950 ರನ್ ಗಳಿಸಿದ್ದು, ಇದರಲ್ಲಿ ಅವರ ಅತ್ಯುತ್ತಮ ಸ್ಕೋರ್ 212 ರನ್ ಆಗಿದೆ.
ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ನಿರಾಶಾದಾಯಕ ಬ್ಯಾಟಿಂಗ್ ಪ್ರದರ್ಶಿಸಿದ ಕಾರಣ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಆಡುವ ಹನ್ನೊಂದರ ಬಳಗದಿಂದ ಕೈಬಿಡಲಾಗಿದೆ. ಬ್ರಾಥ್‌ವೈಟ್ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ ನಾಲ್ಕು ರನ್ ಗಳಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ನಾಲ್ಕು ರನ್ ಕಲೆಹಾಕಿದ್ದರು. ಎರಡನೇ ಟೆಸ್ಟ್ ಪಂದ್ಯದ ಬಗ್ಗೆ ಹೇಳುವುದಾದರೆ, ಬ್ರಾಥ್ವೈಟ್ಗೆ ಮೊದಲ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯಲಾಗಲಿಲ್ಲ. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ ಏಳು ರನ್ಗಳಿಸಲಷ್ಟೇ ಶಕ್ತರಾಗಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:00 pm, Sun, 13 July 25