IND vs ENG: ಇಂಗ್ಲೆಂಡ್ ಪ್ರವಾಸದಲ್ಲಿ ಕಿವೀಸ್, ವಿಂಡೀಸ್ ತಂಡಗಳ ದಾಖಲೆ ಮುರಿದ ಭಾರತ
India's Record-Breaking Sixes in England: ಭಾರತ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿ ಹೊಸ ದಾಖಲೆ ನಿರ್ಮಿಸಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಈಗಾಗಲೇ 36 ಸಿಕ್ಸರ್‌ಗಳನ್ನು ಬಾರಿಸಿ ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್‌ಗಳ ಹಿಂದಿನ ದಾಖಲೆಯನ್ನು ಮೀರಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಎರಡೂ ತಂಡಗಳು 387 ರನ್ ಗಳಿಸಿವೆ.

ಭಾರತ ಮತ್ತು ಇಂಗ್ಲೆಂಡ್ (India England) ನಡುವಿನ ಮೂರನೇ ಟೆಸ್ಟ್ ಪಂದ್ಯ ಪ್ರಸ್ತುತ ಲಾರ್ಡ್ಸ್‌ನಲ್ಲಿ (Lords Test ) ನಡೆಯುತ್ತಿದೆ. ಈ ಟೆಸ್ಟ್ ಪಂದ್ಯದಲ್ಲಿ, ಶುಭ್ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ (Team India) ಕೇವಲ ಮೂರು ಟೆಸ್ಟ್‌ಗಳಲ್ಲಿ ಎರಡು ಬಲಿಷ್ಠ ತಂಡಗಳ ದಾಖಲೆಯನ್ನು ಮುರಿದಿದೆ. ಮೂರನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಇನ್ನೂ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಬಂದಿಲ್ಲ. ಆದಾಗ್ಯೂ ಭಾರತ ತಂಡ, ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್‌ನಂತಹ ತಂಡಗಳ ದೊಡ್ಡ ದಾಖಲೆಯನ್ನು ಮುರಿದಿದೆ. ವಿದೇಶಿ ನೆಲದಲ್ಲಿ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ತಂಡ ಎಂಬ ಹೆಗ್ಗಳಿಕೆಗೆ ಟೀಂ ಇಂಡಿಯಾ ಪಾತ್ರವಾಗಿದೆ. ಭಾರತ ಇದುವರೆಗೆ ಸರಣಿಯಲ್ಲಿ ಐದು ಬಾರಿ ಬ್ಯಾಟಿಂಗ್ ಮಾಡಿದ್ದು, ಒಟ್ಟು 36 ಸಿಕ್ಸರ್‌ಗಳನ್ನು ಬಾರಿಸಿದೆ.
ಸಿಕ್ಸರ್‌ಗಳ ದಾಖಲೆ ಮುರಿದ ಟೀಂ ಇಂಡಿಯಾ
ಈ ಹಿಂದೆ, ವಿದೇಶಿ ನೆಲದಲ್ಲಿ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಹೊಂದಿದ್ದವು. 2014/15 ರಲ್ಲಿ ಯುಎಇಯಲ್ಲಿ ಪಾಕಿಸ್ತಾನ ವಿರುದ್ಧ ಕಿವೀಸ್ 32 ಸಿಕ್ಸರ್‌ಗಳನ್ನು ಬಾರಿಸಿತ್ತು. ಆಗ ಯುಎಇ ಪಾಕಿಸ್ತಾನದ ತವರು ಮೈದಾನವಾಗಿತ್ತು. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ 32 ಸಿಕ್ಸರ್‌ಗಳನ್ನು ಬಾರಿಸಿತ್ತು. ಅದಕ್ಕೂ ಮೊದಲು 1974/75 ರಲ್ಲಿ ಭಾರತ ಪ್ರವಾಸದಲ್ಲಿ ವೆಸ್ಟ್ ಇಂಡೀಸ್ 32 ಸಿಕ್ಸರ್‌ಗಳನ್ನು ಬಾರಿಸಿತ್ತು. ಇದೀಗ ಇಂಗ್ಲೆಂಡ್ ವಿರುದ್ಧದ ಪ್ರಸ್ತುತ ಸರಣಿಯ ಅರ್ಧದಷ್ಟು ಪ್ರಯಾಣದಲ್ಲಿ ಭಾರತ 36 ಸಿಕ್ಸರ್‌ಗಳನ್ನು ಬಾರಿಸಿದೆ.
ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ಐದು ವಿಕೆಟ್‌ಗಳಿಂದ ಗೆದ್ದುಕೊಂಡರೆ, ಭಾರತ ಎರಡನೇ ಟೆಸ್ಟ್ ಪಂದ್ಯವನ್ನು 336 ರನ್‌ಗಳಿಂದ ಗೆದ್ದುಕೊಂಡಿತು. ಈ ಮೂಲಕ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಟೀಂ ಇಂಡಿಯಾ ಮೊದಲ ಟೆಸ್ಟ್ ಪಂದ್ಯ ಗೆದ್ದ ದಾಖಲೆ ಬರೆದಿತ್ತು. ಈಗ ಭಾರತ ತಂಡವು ಲಾರ್ಡ್ಸ್‌ನಲ್ಲಿ ಗೆಲ್ಲುವ ಮೂಲಕ ಸರಣಿಯಲ್ಲಿ ಮುನ್ನಡೆ ಸಾಧಿಸಲು ಬಯಸುತ್ತಿದೆ.
ಮೊದಲ ಇನ್ನಿಂಗ್ಸ್ ಹೀಗಿತ್ತು
ಇನ್ನು ಲಾರ್ಡ್ಸ್ ಪಂದ್ಯದ ಬಗ್ಗೆ ಹೇಳುವುದಾದರೆ.. ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 387 ರನ್‌ಗಳಿಗೆ ಆಲೌಟ್ ಆಯಿತು. ಅನುಭವಿ ಬ್ಯಾಟ್ಸ್‌ಮನ್ ಜೋ ರೂಟ್ ತಂಡದ ಪರ 104 ರನ್ ಗಳಿಸಿದರೆ, ಉಳಿದ ಆಟಗಾರರು ಸಹ ತಮ್ಮ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದರು. ಭಾರತದ ಪರ ಜಸ್ಪ್ರೀತ್ ಬುಮ್ರಾ 5 ವಿಕೆಟ್ ಪಡೆದರು. ಇತ್ತ ಭಾರತ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 387 ರನ್‌ಗಳಿಗೆ ಆಲೌಟ್ ಆಯಿತು. ಆರಂಭಿಕ ಕೆಎಲ್ ರಾಹುಲ್ ತಂಡದ ಪರ 100 ರನ್ ಗಳಿಸಿದರೆ, ರಿಷಭ್ ಪಂತ್ 74 ರನ್ಗಳ ಕೊಡುಗೆ ನೀಡಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
