
ಐಪಿಎಲ್ 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಮ್ಯಾಚ್-ವಿನ್ನರ್ ಆಗಿ ಹೊರಹೊಮ್ಮುತ್ತಿರುವ ಕೃನಾಲ್ ಪಾಂಡ್ಯ, ರಾಷ್ಟ್ರೀಯ ತಂಡಕ್ಕೆ ಮರಳುವ ಇಚ್ಛೆಯನ್ನು ಬಹಿರಂಗಪಡಿಸಿದ್ದಾರೆ. 2027ರಲ್ಲಿ ಆಫ್ರಿಕಾ ಮಣ್ಣಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವುದೇ ನನ್ನ ಪರಮ ಗುರಿ ಎಂದು ಘೋಷಿಸಿರುವ ಅವರ ಈ ಹೇಳಿಕೆ ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಮಾತನಾಡಿದ ಕೃನಾಲ್ ಪಾಂಡ್ಯ, ನನಗೆ 6-7 ವಯಸ್ಸಿದ್ದಾಗಿನಿಂದಲೂ ದೇಶಕ್ಕಾಗಿ ಆಡುವ ಕನಸು ಕಂಡಿದ್ದೆ. ಆ ಕನಸು ಇಂದಿಗೂ ಬದಲಾಗಿಲ್ಲ. ದೇಶಕ್ಕಾಗಿ ಆಡುವುದು ನನ್ನ ಏಕೈಕ ಗುರಿ. ಅದರಂತೆ 2027ರ ಏಕದಿನ ವಿಶ್ವಕಪ್ ತಂಡದಲ್ಲಿ ಚಾನ್ಸ್ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.
ಕೃನಾಲ್ ಪಾಂಡ್ಯ 2021ರ ಜುಲೈನಲ್ಲಿ ಕೊನೆಯ ಬಾರಿಗೆ ಭಾರತ ತಂಡದ ಪರ ಆಡಿದ್ದರೂ, ರಾಷ್ಟ್ರೀಯ ತಂಡಕ್ಕೆ ಮರಳುವ ಹಂಬಲ ಅವರಲ್ಲಿ ಇನ್ನೂ ಬಲವಾಗಿದೆ. ಈ ಹಂಬಲಕ್ಕೆ ಬೆಂಬಲವಾಗಿ ಅವರ ಐಪಿಎಲ್ ಪ್ರದರ್ಶನ ನಿಂತಿದೆ.
ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2026ರಲ್ಲಿ ಕೃಣಾಲ್ ಪಾಂಡ್ಯ ಆರ್‌ಸಿಬಿ ಪರ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಈ ಫಾರ್ಮ್ನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಇದನ್ನೂ ಓದಿ: ಕೃನಾಲ್ ಪಾಂಡ್ಯ ಅಲ್ಲೇ ಸಾಯಬೇಕಿತ್ತು… ಇದೆಂತಹ ನೀಚತನ..!
2027ರ ವಿಶ್ವಕಪ್ ವೇಳೆಗೆ ಕೃನಾಲ್ ಪಾಂಡ್ಯ ಅವರಿಗೆ 36-37 ವರ್ಷ ವಯಸ್ಸಾಗಲಿದ್ದು, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರಂತಹ ಅನುಭವಿಗಳ ಜೊತೆ ಸ್ಪರ್ಧಿಸಬೇಕಾಗುತ್ತದೆ. ಆದಾಗ್ಯೂ, ಆರ್‌ಸಿಬಿ 2025ರಲ್ಲಿ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೃನಾಲ್, ಒತ್ತಡದ ಸಮಯದಲ್ಲಿ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ.
“ಮುಂದಿನ ವರ್ಷ ವಿಶ್ವಕಪ್ ಬರುತ್ತಿದೆ. ನಾನು ಉತ್ತಮ ಪ್ರದರ್ಶನ ಮುಂದುವರಿಸುತ್ತೇನೆ ಎಂದು ನಂಬಿದ್ದೇನೆ. ಅವಕಾಶ ಸಿಕ್ಕರೆ ಅದು ನನಗೆ ಮತ್ತು ನನ್ನ ಕುಟುಂಬಕ್ಕೆ ವಿಶೇಷ ಕ್ಷಣವಾಗಿರಲಿದೆ” ಎಂದು ಕೃನಾಲ್ ಪಾಂಡ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.