ಕೃನಾಲ್ ಪಾಂಡ್ಯ ಅಲ್ಲೇ ಸಾಯಬೇಕಿತ್ತು… ಇದೆಂತಹ ನೀಚತನ..!
S. Badrinath Controversey: ಮೈದಾನದಲ್ಲಿ ಆಟಗಾರರ ಗಾಯ ಮತ್ತು ನೋವು ವಿಜಯದ ಹಾದಿಯಲ್ಲಿ ಅಡ್ಡಿಯಾಗಬಹುದು, ಆದರೆ ಅದು ಎಂದಿಗೂ ಹಾಸ್ಯದ ವಸ್ತುವಾಗಬಾರದು. ಐಪಿಎಲ್ 2026ರ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಕಾದಾಟದಲ್ಲಿ ಎಲ್ಲರ ಗಮನ ಸೆಳೆಯಬೇಕಿದ್ದದ್ದು ಕೃನಾಲ್ ಪಾಂಡ್ಯ ಅವರ ಅಪ್ರತಿಮ ಹೋರಾಟ. ಆದರೆ, ದುರದೃಷ್ಟವಶಾತ್ ಇಂದು ಚರ್ಚೆಯಾಗುತ್ತಿರುವುದು ಮಾಜಿ ಕ್ರಿಕೆಟಿಗ ಎಸ್. ಬದರಿನಾಥ್ ಅವರ ಅಮಾನವೀಯ ಹೇಳಿಕೆ.

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಮುಂಬೈ ಇಂಡಿಯನ್ಸ್ (MI) ನಡುವಿನ ಪಂದ್ಯವು ಕೇವಲ ಆಟದ ಕಾರಣಕ್ಕಷ್ಟೇ ಅಲ್ಲದೆ, ಕಾಮೆಂಟರಿ ಬಾಕ್ಸ್‌ನಿಂದ ಬಂದ ಒಂದು ವಿವಾದಾತ್ಮಕ ಹೇಳಿಕೆಯಿಂದಾಗಿ ಸುದ್ದಿಯಲ್ಲಿದೆ. ಆರ್‌ಸಿಬಿ ಆಟಗಾರ ಕೃನಾಲ್ ಪಾಂಡ್ಯ ಅವರ ಗಾಯದ ಬಗ್ಗೆ ತಮಾಷೆ ಮಾಡಿದ ಮಾಜಿ ಕ್ರಿಕೆಟಿಗ ಸುಬ್ರಮಣ್ಯಂ ಬದರಿನಾಥ್ ಅವರು ಈಗ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಘಟನೆಯ ವಿವರ:
ಮೇ 10 ರಂದು ನಡೆದ ನಿರ್ಣಾಯಕ ಪಂದ್ಯದಲ್ಲಿ ಆರ್‌ಸಿಬಿ ಪರ ಬ್ಯಾಟಿಂಗ್ ಮಾಡುತ್ತಿದ್ದ ಕೃನಾಲ್ ಪಾಂಡ್ಯ ತೀವ್ರ ಕಾಲು ಸೆಳೆತದಿಂದ ಬಳಲುತ್ತಿದ್ದರು. ಈ ಸಂದರ್ಭದಲ್ಲಿ ಎದುರಾಳಿ ತಂಡದ ವಿಕೆಟ್ ಕೀಪರ್ ರಯಾನ್ ರಿಕೆಲ್ಟನ್ ಅವರು ಕೃನಾಲ್ ಸಹಾಯಕ್ಕೆ ಧಾವಿಸಿ ಕ್ರೀಡಾ ಮನೋಭಾವ ಮೆರೆದಿದ್ದರು.
ಈ ದೃಶ್ಯಕ್ಕೆ ಕಾಮೆಂಟೇಟರ್ ಬದರಿನಾಥ್, ಸೆಳೆತ ಅಲ್ಲ, ಮುಂಬೈ ಇಂಡಿಯನ್ಸ್ ತಂಡವರು ನೀ ಅಲ್ಲೇ ಸಾಯಿ ಎಂದರೂ ಪರವಾಗಿಲ್ಲ ಎಂಬಾರ್ಥದಲ್ಲಿ ಕಾಮೆಂಟ್ರಿ ಮಾಡಿದ್ದಾರೆ. ಈ ಆಕ್ಷೇಪಾರ್ಹ ಕಾಮೆಂಟ್ರಿ ಇದೀಗ ವಿವಾದಕ್ಕೆ ಕಾರಣವಾಗಿದೆ.
Scum of highest order @s_badrinath enna da pechu idhellam pic.twitter.com/6byzR8pl2f
— Sunil (@Hitting_Middle) May 11, 2026
ಅಭಿಮಾನಿಗಳ ಆಕ್ರೋಶ:
ಈ ಕಾಮೆಂಟ್ರಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬದರಿನಾಥ್ ವಿರುದ್ಧ ಟೀಕೆಗಳ ಸುರಿಮಳೆಯೇ ಹರಿದುಬಂದಿದೆ. “ಒಬ್ಬ ಕ್ರೀಡಾಪಟುವಾಗಿ ಮತ್ತೊಬ್ಬ ಆಟಗಾರನ ನೋವಿನ ಬಗ್ಗೆ ಇಷ್ಟು ಕೀಳಾಗಿ ಮಾತನಾಡುವುದು ಸರಿಯಲ್ಲ” ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೆ ಒಬ್ಬ ಆಟಗಾರನನ್ನು ಅಲ್ಲೇ ಸಾಯಬೇಕಿತ್ತು ಎಂದೇಳುವ ನೀನೆಷ್ಟು ನೀಚ ಎಂದು ಸಿಎಸ್ಕೆ ತಂಡದ ಮಾಜಿ ಆಟಗಾರನನ್ನು ಕ್ರಿಕೆಟ್ ಪ್ರೇಮಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದರ ಜೊತೆಗೆ ಇನ್ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟ್ಟರ್) ನಲ್ಲಿ ಅನೇಕರು ಬಿಸಿಸಿಐ ಮತ್ತು ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆಗಳನ್ನು ಟ್ಯಾಗ್ ಮಾಡಿ, ಇಂತಹ “ಟಾಕ್ಸಿಕ್” ಕಾಮೆಂಟೇಟರ್‌ಗಳನ್ನು ಪ್ಯಾನಲ್‌ನಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿದ್ದಾರೆ.
ಅಂದಹಾಗೆ ಕ್ರೀಡೆ ಎಂಬುದು ಕೇವಲ ಗೆಲುವು-ಸೋಲಿನಾಟವಲ್ಲ, ಅದು ಪರಸ್ಪರ ಗೌರವ ಮತ್ತು ಮಾನವೀಯತೆಯ ಪ್ರತೀಕ. ಕಾಮೆಂಟರಿ ಬಾಕ್ಸ್‌ನಲ್ಲಿ ಕುಳಿತು ಪಂದ್ಯವನ್ನು ವಿಶ್ಲೇಷಿಸುವ ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಆಟಗಾರನೊಬ್ಬನ ದೈಹಿಕ ನೋವನ್ನು ಕಂಡು ಇಂತಹ ಅಮಾನವೀಯ ಹೇಳಿಕೆ ನೀಡುವುದು ಕ್ರೀಡಾ ಸ್ಫೂರ್ತಿಗೆ ಎಸಗಿದ ದ್ರೋಹ.
ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ವಿರುದ್ಧ ‘ಅಸಭ್ಯ’ವಾಗಿ ಸಂಭ್ರಮಿಸಿದ ಟಿಮ್ ಡೇವಿಡ್
ಎಸ್. ಬದರಿನಾಥ್ ಅವರ ಈ ಮಾತುಗಳು ಕೇವಲ ಅವರ ವ್ಯಕ್ತಿತ್ವವನ್ನು ಕುಗ್ಗಿಸುವುದಲ್ಲದೆ, ಕ್ರೀಡಾ ಪ್ರಸಾರ ಲೋಕಕ್ಕೇ ಒಂದು ಕಪ್ಪು ಚುಕ್ಕೆಯಾಗಿದೆ. ಇಂತಹ ವಿಷಕಾರಿ ಮಾತುಗಳಿಗೆ ಕಡಿವಾಣ ಬೀಳದಿದ್ದರೆ, ಕಾಮೆಂಟರಿ ಬಾಕ್ಸ್‌ಗಳು ಕ್ರೀಡಾ ವಿಶ್ಲೇಷಣೆಯ ಬದಲಿಗೆ ಕೇವಲ ‘ಅಸಹ್ಯದ ಅಡ್ಡೆ’ಗಳಾಗಿ ಬದಲಾಗುವುದರಲ್ಲಿ ಸಂಶಯವಿಲ್ಲ.”




