KSCA ಹೊಸ ಟಿ20 ಲೀಗ್: ಬ್ಯಾಟ್ ಬೀಸಲಿದ್ದಾರೆ ಪಡಿಕ್ಕಲ್, ಮಯಾಂಕ್, ಮನೀಷ್ ಪಾಂಡೆ

| Updated By: ಝಾಹಿರ್ ಯೂಸುಫ್

Updated on: Jul 17, 2022 | 3:59 PM

Maharaja Trophy T20: 2009 ರಲ್ಲಿ ಕರ್ನಾಟಕ ಕ್ರಿಕೆಟ್ ಸಂಸ್ಥೆಯು ಕರ್ನಾಟಕ ಪ್ರೀಮಿಯರ್ ಲೀಗ್​ ಟೂರ್ನಿಯನ್ನು ಪ್ರಾರಂಭಿಸಿತ್ತು. ಆದರೆ 2019 ರಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಟೂರ್ನಿಯನ್ನು ಸ್ಥಗಿತಗೊಳಿಸಲಾಯಿತು.

KSCA ಹೊಸ ಟಿ20 ಲೀಗ್: ಬ್ಯಾಟ್ ಬೀಸಲಿದ್ದಾರೆ ಪಡಿಕ್ಕಲ್, ಮಯಾಂಕ್, ಮನೀಷ್ ಪಾಂಡೆ
Pandey-Padikkal-Mayank
Follow us on

ಕರ್ನಾಟಕ ಕ್ರಿಕೆಟ್ ಸಂಸ್ಥೆ (KSCA) ಮತ್ತೊಮ್ಮೆ ಟಿ20 ಲೀಗ್ ಆಯೋಜಿಸಲು ಮುಂದಾಗಿದೆ. ಹೊಸ ಲೀಗ್​ಗೆ ಮೈಸೂರಿನ ಮಹಾರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಸ್ಮರಣಾರ್ಥ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿ ಎಂದು ಹೆಸರಿಡಲಾಗಿದೆ. ಈ ಟೂರ್ನಿಯು ಆಗಸ್ಟ್‌ 7 ರಿಂದ ಶುರುವಾಗಲಿದ್ದು, ಆಗಸ್ಟ್‌ 26ರ ವರೆಗೆ ನಡೆಯಲಿದೆ. ಈಗಾಗಲೇ ಒಟ್ಟು 6 ತಂಡಗಳನ್ನು ಘೋಷಿಸಲಾಗಿದ್ದು, ಅದರಂತೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ, ರಾಯಚೂರು ಮತ್ತು ಮಂಗಳೂರು ತಂಡಗಳು ಕಣಕ್ಕಿಳಿಯಲಿದೆ. ವಿಶೇಷ ಎಂದರೆ ಈ ಟೂರ್ನಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಎಲ್ಲಾ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.

ಅದರಂತೆ ಕರ್ನಾಟಕದ ಪ್ರಮುಖ ಆಟಗಾರರಾದ ದೇವದತ್ ಪಡಿಕ್ಕಲ್, ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆ, ಶ್ರೇಯಸ್ ಗೋಪಾಲ್, ಕೆ ಗೌತಮ್, ಜಗದೀಶ್ ಸುಚಿತ್, ಕರುಣ್ ನಾಯರ್ ಮತ್ತು ಅಭಿಮನ್ಯು ಮಿಥುನ್ ಸೇರಿದಂತೆ ಸ್ಟಾರ್ ಆಟಗಾರರು  ಕಣಕ್ಕಿಳಿಯಲಿದ್ದಾರೆ. ಈ ಟೂರ್ನಿಯಲ್ಲಿ 35 ವರ್ಷದವರೆಗಿನ ಎಲ್ಲಾ ಪ್ರಮುಖ ಆಟಗಾರರು ಭಾಗವಹಿಸಬಹುದು ಎಂದು ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಹೇಳಿದ್ದಾರೆ.

ಈ ಹಿಂದೆ 2009 ರಲ್ಲಿ ಕರ್ನಾಟಕ ಕ್ರಿಕೆಟ್ ಸಂಸ್ಥೆಯು ಕರ್ನಾಟಕ ಪ್ರೀಮಿಯರ್ ಲೀಗ್​ ಟೂರ್ನಿಯನ್ನು ಪ್ರಾರಂಭಿಸಿತ್ತು. ಆದರೆ 2019 ರಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಟೂರ್ನಿಯನ್ನು ಸ್ಥಗಿತಗೊಳಿಸಲಾಯಿತು. ಇದೀಗ ಮಹರಾಜ ಟಿ20 ಲೀಗ್​ ಮೂಲಕ ಯುವ ಹಾಗೂ ಅರ್ಹ ಪ್ರತಿಭೆಗಳಿಗೆ ಅವಕಾಶ ನೀಡಲು ಕೆಎಸ್​ಸಿಎ ಮುಂದಾಗಿದೆ.

ಇದನ್ನೂ ಓದಿ
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್
Steve Smith: ಬರೋಬ್ಬರಿ 30 ಕೋಟಿ ಲಾಭ ಪಡೆದ ಸ್ಟೀವ್ ಸ್ಮಿತ್..!
Cricket Records: ಕ್ರಿಕೆಟ್ ಇತಿಹಾಸದ ಈ ಅದ್ಭುತ ದಾಖಲೆಗಳನ್ನು ಎಂದಿಗೂ ಮುರಿಯಲಾಗುವುದಿಲ್ಲ!
Team India: 1 ವರ್ಷದೊಳಗೆ 8 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ..!

ಮಹಾರಾಜ ಟ್ರೋಫಿ KSCA T20 ಮೈಸೂರಿನಲ್ಲಿ ಆಗಸ್ಟ್ 7 ರಂದು ಆರಂಭವಾಗಲಿದ್ದು, ಮೊದಲ ಲೆಗ್ ಪಂದ್ಯಗಳು ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆಯಲಿದೆ. ಮೈಸೂರಿನಲ್ಲಿ ಒಟ್ಟು 18 ಪಂದ್ಯಗಳು ನಡೆಯಲಿದ್ದು, ಫೈನಲ್ ಸೇರಿದಂತೆ ಒಟ್ಟು 16 ಪಂದ್ಯಗಳು ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಇನ್ನು ಈ ಟೂರ್ನಿಗಾಗಿ ಆಟಗಾರರನ್ನು ಡ್ರಾಫ್ಟ್ ಮೂಲಕ ಆಯ್ಕೆ ಮಾಡಲಿದ್ದು, ಜುಲೈ 30 ರಂದು ಡ್ರಾಫ್ಟ್ ಪ್ರಕ್ರಿಯೆ ನಡೆಯಲಿದೆ.

ಅಂದಹಾಗೆ ಮಹರಾಜ ಟಿ20 ಟೂರ್ನಿಯ ಎಲ್ಲಾ ಪಂದ್ಯಗಳ ನೇರ ಪ್ರಸಾರವನ್ನು ಟಿವಿಯಲ್ಲಿ ವೀಕ್ಷಿಸಬಹುದು. ಈಗಾಗಲೇ ಈ ಲೀಗ್‌ನ ನೇರ ಪ್ರಸಾರದ ಹಕ್ಕುಗಳನ್ನು ಸ್ಟಾರ್​ ನೆಟ್​ವರ್ಕ್​ ಪಡೆದಿದ್ದು, ಸ್ಟಾರ್ ಸ್ಪೋರ್ಟ್ಸ್ 2 ಮತ್ತು ಸ್ಟಾರ್ ಸ್ಪೋರ್ಟ್ಸ್ ಕನ್ನಡ ಚಾನೆಲ್​ನಲ್ಲಿ ವೀಕ್ಷಿಸಬಹುದು. ಇದಲ್ಲದೆ, ಫ್ಯಾನ್‌ಕೋಡ್‌ ಆ್ಯಪ್​ನಲ್ಲಿ ಲೈವ್ ಸ್ಟ್ರೀಮಿಂಗ್ ಇರಲಿದೆ.