ಇಶಾನ್ ಕಿಶನ್ ಔಟ್, ಭಾರತ ತಂಡಕ್ಕೆ ಹೊಸ ಆಟಗಾರ ಎಂಟ್ರಿ..!

ಇಶಾನ್ ಕಿಶನ್ ಗಾಯದಿಂದಾಗಿ ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಯುವ ವಿಕೆಟ್‌ಕೀಪರ್ ಬ್ಯಾಟರ್ ಕುಮಾರ್ ಕುಶಾಗ್ರ ಭಾರತ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಕುಶಾಗ್ರ ಈಗಾಗಲೇ ಭಾರತ 'ಎ' ತಂಡದ ಭಾಗವಾಗಿದ್ದು, ನ್ಯೂಜಿಲೆಂಡ್‌ನಲ್ಲಿರುವಾಗಲೇ ಹಿರಿಯರ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದಾಗ್ಯೂ ಎರಡನೇ ಪಂದ್ಯದಲ್ಲಿ ಅವರ ಆಡುವಿಕೆ ಬಗ್ಗೆ ಅನಿಶ್ಚಿತತೆ ಇದೆ.

ಇಶಾನ್ ಕಿಶನ್ ಔಟ್, ಭಾರತ ತಂಡಕ್ಕೆ ಹೊಸ ಆಟಗಾರ ಎಂಟ್ರಿ..!
ಕುಮಾರ್ ಕುಶಾಗ್ರ, ಇಶಾನ್ ಕಿಶನ್
Image Credit source: PTI

Updated on: Oct 23, 2026 | 10:43 PM

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 226 ರನ್‌ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ ನಾಲ್ಕು ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಆದರೆ, ಈ ಪಂದ್ಯದಲ್ಲಿ ಭಾರತದ ವಿಕೆಟ್‌ಕೀಪರ್‌ ಬ್ಯಾಟರ್ ಇಶಾನ್ ಕಿಶನ್ ಗಾಯಗೊಂಡಿದ್ದರು. ಹೀಗಾಗಿ, ಅವರನ್ನು ಎರಡನೇ ಟಿ20 ಪಂದ್ಯದಿಂದ ಹೊರಗಿಡುವುದಾಗಿ ಬಿಸಿಸಿಐ ಈಗಾಗಲೇ ತಿಳಿಸಿತ್ತು. ಇದೀಗ ಅವರ ಬದಲಿಗೆ ಮತ್ತೊಬ್ಬ ಆಟಗಾರನನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಜಾರ್ಖಂಡ್‌ನ ಯುವ ವಿಕೆಟ್‌ಕೀಪರ್‌ ಬ್ಯಾಟರ್ ಕುಮಾರ್ ಕುಶಾಗ್ರ ಮೊದಲ ಬಾರಿಗೆ ಭಾರತ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇಶಾನ್ ಕಿಶನ್ ಎರಡನೇ ಪಂದ್ಯದಿಂದ ಹೊರಗುಳಿದ ಹಿನ್ನೆಲೆಯಲ್ಲಿ ಕುಶಾಗ್ರ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ. ಕುಮಾರ್ ಕುಶಾಗ್ರ ಅವರು ಭಾರತ ಎ ತಂಡದ ಪರ ಅನಧಿಕೃತ ಟೆಸ್ಟ್ ಪಂದ್ಯವನ್ನಾಡಲು ಈಗಾಗಲೇ ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿದ್ದಾರೆ. ಹೀಗಾಗಿ, ಅಲ್ಲಿಯೇ ನಡೆಯಲಿರುವ ಎರಡನೇ ಟಿ20 ಪಂದ್ಯಕ್ಕೂ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಇಶಾನ್ ಕಿಶನ್‌ಗೆ ಆಗಿದ್ದೇನು?

ಭಾರತದ ವಿಕೆಟ್‌ಕೀಪರ್‌ ಬ್ಯಾಟರ್ ಇಶಾನ್ ಕಿಶನ್ ಮೊದಲ ಟಿ20 ಪಂದ್ಯದಲ್ಲಿ ಬಲ ತೊಡೆಯ ಸ್ನಾಯು ಸೆಳೆತದ ಸಮಸ್ಯೆಗೆ ಒಳಗಾಗಿದ್ದರು. ಹೀಗಾಗಿ, ಅವರನ್ನು ಎರಡನೇ ಪಂದ್ಯದಿಂದ ಕೈಬಿಡಲಾಗಿದೆ. ಮೂರನೇ ಟಿ20 ಪಂದ್ಯಕ್ಕೆ ಅವರು ಫಿಟ್ ಆಗುತ್ತಾರೆಯೇ ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಇನ್ನು ಕುಮಾರ್ ಕುಶಾಗ್ರ ತಂಡಕ್ಕೆ ಸೇರ್ಪಡೆಯಾಗಿದ್ದರೂ, ಎರಡನೇ ಪಂದ್ಯದಲ್ಲಿ ಅವರು ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಇಶಾನ್ ಕಿಶನ್ ಬದಲಿಗೆ ವೈಭವ್ ಸೂರ್ಯವಂಶಿಗೆ ಅವಕಾಶ ಸಿಗುವ ಸಾಧ್ಯತೆಯೂ ಇದೆ.

ಕುಮಾರ್ ಕುಶಾಗ್ರ ದಾಖಲೆ ಹೇಗಿದೆ?

ಕುಮಾರ್ ಕುಶಾಗ್ರ ಅವರಿಗೆ ಇದೇ ಮೊದಲ ಬಾರಿಗೆ ಭಾರತ ಟಿ20 ತಂಡದಲ್ಲಿ ಅವಕಾಶ ಸಿಕ್ಕಿದೆ. ಇದಕ್ಕೂ ಮೊದಲು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ನಾಲ್ಕನೇ ಮತ್ತು ಐದನೇ ಪಂದ್ಯಗಳಿಗೆ ಅವರನ್ನು ಆಯ್ಕೆ ಮಾಡಲಾಗಿತ್ತು. ಇದೀಗ ಶ್ರೇಯಸ್ ಅಯ್ಯರ್ ನಾಯಕತ್ವದ ಟಿ20 ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ದೇಶಿ ಕ್ರಿಕೆಟ್​ನಲ್ಲಿ ಅವರ ಪ್ರದರ್ಶನದ ಬಗ್ಗೆ ಹೇಳುವುದಾದರೆ.. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಆಡಿರುವ 38 ಪಂದ್ಯಗಳ 61 ಇನ್ನಿಂಗ್ಸ್‌ಗಳಲ್ಲಿ 2,507 ರನ್ ಬಾರಿಸಿರುವ ಕುಮಾರ್ ಇದರಲ್ಲಿ 7 ಶತಕ ಮತ್ತು 6 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಹಾಗೆಯೇ ಲಿಸ್ಟ್ ಎ ಕ್ರಿಕೆಟ್​ನಲ್ಲಿ ಆಡಿರುವ 40 ಪಂದ್ಯಗಳ 35 ಇನ್ನಿಂಗ್ಸ್‌ಗಳಲ್ಲಿ 2 ಶತಕ ಮತ್ತು 10 ಅರ್ಧಶತಕಗಳ ಸಹಿತ 1,387 ರನ್ ಕಲೆಹಾಕಿದ್ದರು. ಇನ್ನು ಟಿ20 ಕ್ರಿಕೆಟ್​ನಲ್ಲಿ ಆಡಿರುವ 31 ಇನ್ನಿಂಗ್ಸ್‌ಗಳಲ್ಲಿ 5 ಅರ್ಧಶತಕಗಳ ಸಹಿತ 694 ರನ್ ಸಿಡಿಸಿದ್ದಾರೆ.

ಕಿಶನ್ ಬದಲು ವೈಭವ್​ಗೆ ಚಾನ್ಸ್; 2ನೇ ಟಿ20ಗೆ ಭಾರತದ ಪ್ಲೇಯಿಂಗ್ 11

ಎರಡನೇ ಟಿ20 ಪಂದ್ಯಕ್ಕೆ ಭಾರತ ತಂಡ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ತಿಲಕ್ ವರ್ಮಾ (ಉಪನಾಯಕ), ಶ್ರೇಯಸ್ ಅಯ್ಯರ್ (ನಾಯಕ), ಶಿವಂ ದುಬೆ, ನಮನ್ ಧೀರ್, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್, ಭುವನೇಶ್ವರ್ ಕುಮಾರ್, ವೈಭವ್ ಸೂರ್ಯವಂಶಿ, ಕುಮಾರ್ ಕುಶಾಗ್ರ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:41 pm, Fri, 23 October 26

ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us