ವಿರಾಟ್ ಕೊಹ್ಲಿ ಜೊತೆಗಿನ ಜಗಳದ ಬಗ್ಗೆ ಮೌನ ಮುರಿದ ಮೇಯರ್ಸ್

Virat Kohli vs Kyle Mayers: ಮೇ 1 ರಂದು ಲಕ್ನೋದಲ್ಲಿ ನಡೆದ ಆರ್​ಸಿಬಿ ವಿರುದ್ಧ ನಡೆದ ಪಂದ್ಯದ ವೇಳೆ ಲಕ್ನೋ ವೇಗಿ ನವೀನ್ ಉಲ್ ಹಾಗೂ ವಿರಾಟ್ ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದಿತ್ತು.

ವಿರಾಟ್ ಕೊಹ್ಲಿ ಜೊತೆಗಿನ ಜಗಳದ ಬಗ್ಗೆ ಮೌನ ಮುರಿದ ಮೇಯರ್ಸ್
Kyle Mayers - Virat Kohli
Edited By:

Updated on: Aug 06, 2023 | 8:32 PM

ಐಪಿಎಲ್ 2023 ರಲ್ಲಿ ಆರ್​ಸಿಬಿ ಆಟಗಾರ ವಿರಾಟ್ ಕೊಹ್ಲಿ (Virat Kohli) ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಮೈದಾನದಲ್ಲೇ ವಾಕ್ಸಮರಕ್ಕೆ ಇಳಿದಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಣ ಪಂದ್ಯದ ವೇಳೆ ನಡೆದ ಈ ಅಹಿತಕರ ಘಟನೆಯಲ್ಲಿ ಕೈಲ್ ಮೇಯರ್ಸ್ ಕೂಡ ಕಾಣಿಸಿಕೊಂಡಿದ್ದರು. ಈ ಪಂದ್ಯದ ಬಳಿಕ ನಡೆದ ಜಗಳದ ನಡುವೆ ಕೈಲ್ ಮೇಯರ್ಸ್​ ವಿರಾಟ್ ಕೊಹ್ಲಿಯನ್ನು ಪ್ರಶ್ನಿಸುತ್ತಿರುವುದು ಕಂಡು ಬಂದಿತ್ತು. ತಕ್ಷಣವೇ ಮಧ್ಯ ಪ್ರವೇಶಿಸಿದ ಗೌತಮ್ ಗಂಭೀರ್, ಮೇಯರ್ಸ್ ಅವರನ್ನು ಪಕ್ಕಕ್ಕೆ ಕರೆದೊಯ್ದಿದ್ದರು. ಇದೀಗ ಈ ಘಟನೆಯ ಬಗ್ಗೆ ವೆಸ್ಟ್ ಇಂಡೀಸ್ ಆಟಗಾರ ಮೊದಲ ಬಾರಿಗೆ ಮಾತನಾಡಿದ್ದಾರೆ.

ಫ್ಯಾನ್ ಕೋಡ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮೇಯರ್ಸ್, ವಿರಾಟ್ ಕೊಹ್ಲಿಯನ್ನು ಹಾಡಿ ಹೊಗಳಿದ್ದಾರೆ. ಆ ಘಟನೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ವಿಂಡೀಸ್ ದಾಂಡಿಗ, ಕೆಲವೊಮ್ಮೆ ಎದುರಾಳಿ ತಂಡದ ಮೇಲೆ ಒತ್ತಡವನ್ನು ಸೃಷ್ಟಿಸುವ ಅವಶ್ಯಕತೆಯಿರುತ್ತದೆ. ಅವರನ್ನು ಪಂದ್ಯದಿಂದ ಹೊರಹಾಕಲು ಕೆಲ ಅವಕಾಶಗಳನ್ನು ಸೃಷ್ಟಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಆಕ್ರಮಣಶೀಲತೆ ಯಾವಾಗಲೂ ಒಳ್ಳೆಯದು ಎಂದಿದ್ದಾರೆ.

ಹಾಗೆಯೇ ಆ ಪಂದ್ಯದ ವೇಳೆ ವಿರಾಟ್ ಕೊಹ್ಲಿಯ ನಡೆಯು ತಂಡದ ಮೇಲಿನ ಅವರ ಪ್ರೀತಿಯನ್ನು ತೋರಿಸುತ್ತದೆ. ಹೀಗಾಗಿ ಎದುರಾಳಿಗಳ ವಿರುದ್ಧ ಇಂತಹ ಆಕ್ರಮಣಶೀಲತೆಯು ನಡೆಯು ಕೆಲವೊಮ್ಮೆ ಒಳ್ಳೆಯದು ಎಂದು ಕೈಲ್ ಮೇಯರ್ಸ್ ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಯಾರ ವಿಕೆಟ್ ಹೆಚ್ಚು ಮಹತ್ವದ್ದಾಗಿದೆ ಎಂಬ ಪ್ರಶ್ನೆಯನ್ನೂ ಕೂಡ ಕೇಳಲಾಯಿತು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೇಯರ್ಸ್, ಕೊಹ್ಲಿಯ ವಿಕೆಟ್ ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.

ಏಕೆಂದರೆ ವಿಶ್ವದ ಪ್ರತಿಯೊಬ್ಬ ಬೌಲರ್ ವಿರಾಟ್ ಕೊಹ್ಲಿಯ ವಿಕೆಟ್ ಪಡೆಯಲು ಬಯಸುತ್ತಾನೆ. ಅವರು ಮೂರು ಮಾದರಿಯ ಕ್ರಿಕೆಟ್​ನಲ್ಲೂ ಅತ್ಯುತ್ತಮ ಆಟಗಾರ. ಹೀಗಾಗಿ ರೋಹಿತ್ ಶರ್ಮಾಗಿಂತ ವಿರಾಟ್ ಕೊಹ್ಲಿ ವಿಕೆಟ್ ಹೆಚ್ಚು ಮಹತ್ವದ್ದಾಗಿದೆ ಎಂದು ಮೇಯರ್ಸ್ ತಿಳಿಸಿದರು.

ಘಟನೆ ಹಿನ್ನಲೆ:

ಮೇ 1 ರಂದು ಲಕ್ನೋದಲ್ಲಿ ನಡೆದ ಆರ್​ಸಿಬಿ ವಿರುದ್ಧ ನಡೆದ ಪಂದ್ಯದ ವೇಳೆ ಲಕ್ನೋ ವೇಗಿ ನವೀನ್ ಉಲ್ ಹಾಗೂ ವಿರಾಟ್ ಕೊಹ್ಲಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಆ ಬಳಿಕ ಹಸ್ತಲಾಘವ ಮಾಡುವ ವೇಳೆ ನವೀನ್ ಕಿಂಗ್ ಕೊಹ್ಲಿಯ ಕೈ ಎಳೆದಿದ್ದರು. ಇದಾದ ಬಳಿಕವಷ್ಟೇ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವಣ ಜಗಳ ಶುರುವಾಗಿತ್ತು.

ಇದನ್ನೂ ಓದಿ: Virat Kohli: ಭರ್ಜರಿ ಸೆಂಚುರಿ ಸಿಡಿಸಿ 8 ದಾಖಲೆ ಬರೆದ ಕಿಂಗ್ ಕೊಹ್ಲಿ

ಈ ಜಗಳದ ನಡುವೆ ಕೈಲ್ ಮೇಯರ್ಸ್ ಕೂಡ ವಿರಾಟ್ ಕೊಹ್ಲಿ ಜೊತೆ ಮಾತಿಗಿಳಿದಿದ್ದರು. ಇದೇ ವೇಳೆ ವಿಂಡೀಸ್ ಆಟಗಾರನ್ನು ಗಂಭೀರ್ ಪಕ್ಕಕ್ಕೆ ಕರೆದೊಯ್ದಿದ್ದರು. ಈ ಅತಿರೇಕದ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಐಪಿಎಲ್ ಆಡಳಿತ ಮಂಡಳಿ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್​ಗೆ ಪಂದ್ಯದ ಶೇ.100 ರಷ್ಟು ಹಾಗೂ ನವೀನ್ ಉಲ್ ಹಕ್​ಗೆ ಪಂದ್ಯ ಶುಲ್ಕದ ಶೇ.50 ರಷ್ಟು ದಂಡ ವಿಧಿಸಿತ್ತು.