LPL 2023: ಭರ್ಜರಿ ಜಯದೊಂದಿಗೆ ಫೈನಲ್​ಗೆ ಪ್ರವೇಶಿಸಿದ ದಂಬುಲ್ಲಾ ಔರ

| Updated By: ಝಾಹಿರ್ ಯೂಸುಫ್

Updated on: Aug 17, 2023 | 7:23 PM

Lanka Premier League 2023: ಈ ಗೆಲುವಿನೊಂದಿಗೆ ದುಂಬುಲ್ಲಾ ಔರ ತಂಡ ಲಂಕಾ ಪ್ರೀಮಿಯರ್ ಲೀಗ್​ನ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಇನ್ನು ಸೋತಿರುವ ಗಾಲೆ ಟೈಟಾನ್ಸ್ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡದೊಡನೆ 2ನೇ ಕ್ವಾಲಿಫೈಯರ್ ಪಂದ್ಯವಾಡಲಿದೆ.

LPL 2023: ಭರ್ಜರಿ ಜಯದೊಂದಿಗೆ ಫೈನಲ್​ಗೆ ಪ್ರವೇಶಿಸಿದ ದಂಬುಲ್ಲಾ ಔರ
Dambulla Aura
Follow us on

ಶ್ರೀಲಂಕಾದಲ್ಲಿ ನಡೆಯುತ್ತಿರುವ ಲಂಕಾ ಪ್ರೀಮಿಯರ್ ಲೀಗ್​ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ದಂಬುಲ್ಲಾ ಔರ ತಂಡ ಭರ್ಜರಿ ಜಯ ಸಾಧಿಸಿದೆ. ಗಾಲೆ ಟೈಟಾನ್ಸ್ ವಿರುದ್ಧದ ಈ ಪಂದ್ಯದಲ್ಲಿ 6 ವಿಕೆಟ್​ಗಳ ಗೆಲುವು ದಾಖಲಿಸಿದ ದಂಬುಲ್ಲಾ ಔರ ತಂಡ ಫೈನಲ್​ಗೆ ಪ್ರವೇಶಿಸಿದೆ.

ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ದಂಬುಲ್ಲಾ ಔರ ತಂಡದ ನಾಯಕ ಕುಸಾಲ್ ಮೆಂಡಿಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗಾಲೆ ಟೈಟಾನ್ಸ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ.

ಆರಂಭಿಕ ಆಟಗಾರ ಭಾನುಕ ರಾಜಪಕ್ಸೆ ಮೊದಲ ಓವರ್​ನಲ್ಲೇ ಶೂನ್ಯಕ್ಕೆ ಔಟಾಗಿದ್ದರು. ಇದಾಗ್ಯೂ ಮತ್ತೋರ್ವ ಆರಂಭಿಕ ಆಟಗಾರ ಲಸಿತ್ ಕ್ರೂಸ್ಪುಲ್ಲೆ ಅತ್ಯುತ್ತಮ ಇನಿಂಗ್ಸ್ ಆಡಿದರು. 61 ಎಸೆತಗಳನ್ನು ಎದುರಿಸಿದ ಲಸಿತ್ 7 ಫೋರ್​ಗಳೊಂದಿಗೆ 80 ರನ್ ಬಾರಿಸಿದರು.

ಆದರೆ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅತ್ತ ಕರಾರುವಾಕ್ ದಾಳಿ ಸಂಘಟಿಸಿದ ಹೇಡನ್ ಕೆರ್ 3 ವಿಕೆಟ್ ಕಬಳಿಸಿದರು. ಪರಿಣಾಮ 20 ಓವರ್​ಗಳಲ್ಲಿ ಗಾಲೆ ಟೈಟಾನ್ಸ್​ ತಂಡವು 146 ರನ್​ಗಳಿಸಿ ಆಲೌಟ್ ಆಯಿತು.

147 ರನ್​ಗಳ ಸುಲಭ ಗುರಿ ಪಡೆದ ದಂಬುಲ್ಲಾ ಔರ ತಂಡಕ್ಕೆ ಅವಿಷ್ಕ ಫರ್ನಾಂಡೊ (24) ಹಾಗೂ ಕುಸಾಲ್ ಮೆಂಡಿಸ್ (49) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕುಸಾಲ್ ಪೆರೆರಾ ಭರ್ಜರಿ ಬ್ಯಾಟಿಂಗ್ ನಡೆಸಿದರು.

39 ಎಸೆತಗಳನ್ನು ಎದುರಿಸಿದ ಕುಸಾಲ್ ಪೆರೆರಾ 3 ಭರ್ಜರಿ ಸಿಕ್ಸ್ 4 ಫೋರ್​ಗಳೊಂದಿಗೆ 53 ರನ್​ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ 19.4 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ದಂಬುಲ್ಲಾ ಔರ ತಂಡವು ಗುರಿ ಮುಟ್ಟಿತು.

ಈ ಗೆಲುವಿನೊಂದಿಗೆ ದುಂಬುಲ್ಲಾ ಔರ ತಂಡ ಲಂಕಾ ಪ್ರೀಮಿಯರ್ ಲೀಗ್​ನ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಇನ್ನು ಸೋತಿರುವ ಗಾಲೆ ಟೈಟಾನ್ಸ್ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡದೊಡನೆ 2ನೇ ಕ್ವಾಲಿಫೈಯರ್ ಪಂದ್ಯವಾಡಲಿದೆ.

ದಂಬುಲ್ಲಾ ಔರ ಪ್ಲೇಯಿಂಗ್ 11: ಅವಿಷ್ಕಾ ಫೆರ್ನಾಂಡೋ , ಕುಸಾಲ್ ಮೆಂಡಿಸ್ (ನಾಯಕ) , ಸದೀರ ಸಮರವಿಕ್ರಮ , ಕುಸಾಲ್ ಪೆರೇರಾ , ಧನಂಜಯ ಡಿ ಸಿಲ್ವಾ , ಅಲೆಕ್ಸ್ ರಾಸ್ , ಹೇಡನ್ ಕೆರ್ , ದುಶನ್ ಹೇಮಂತ , ಹಸನ್ ಅಲಿ , ಬಿನೂರ ಫರ್ನಾಂಡೋ , ನೂರ್ ಅಹ್ಮದ್.

ಇದನ್ನೂ ಓದಿ: IPL 2024: ಮತ್ತೆ ಬದಲಾಗಲಿದೆಯಾ RCB ತಂಡದ ನಾಯಕತ್ವ..?

ಗಾಲೆ ಟೈಟಾನ್ಸ್ ಪ್ಲೇಯಿಂಗ್ 11: ಲಸಿತ್ ಕ್ರೂಸ್ಪುಲ್ಲೆ , ಲಿಟ್ಟನ್ ದಾಸ್ (ವಿಕೆಟ್ ಕೀಪರ್) , ಭಾನುಕಾ ರಾಜಪಕ್ಸೆ , ಶಕೀಬ್ ಅಲ್ ಹಸನ್ , ನಜಿಬುಲ್ಲಾ ಝದ್ರಾನ್ , ದಾಸುನ್ ಶನಕ (ನಾಯಕ) , ಲಹಿರು ಸಮರಕೋನ್ , ಸೀಕ್ಕುಗೆ ಪ್ರಸನ್ನ , ಕಸುನ್ ರಜಿತ , ಲಹಿರು ಕುಮಾರ , ತಬ್ರೈಝ್ ಶಮ್ಸಿ.