ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ 73ರ ಹರೆಯದ ಸುನಿಲ್ ಗವಾಸ್ಕರ್ ವಿಶ್ವ ಕ್ರಿಕೆಟ್‌ನಲ್ಲಿ ಚಿರಪರಿಚಿತ ವ್ಯಕ್ತಿ. ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಗಳಿಸಿದ ಮೊದಲ ಆಟಗಾರ ಎಂಬ ದಾಖಲೆ ಲಿಟ್ಲ್ ಮಾಸ್ಟರ್ ಗವಾಸ್ಕರ್ ಹೆಸರಿನಲ್ಲಿದೆ. ಇದಲ್ಲದೇ ಇಂತಹ ಹಲವು ದಾಖಲೆಗಳು ಅವರ ಹೆಸರಿನಲ್ಲಿದ್ದು, ಹೀಗಾಗಿಯೇ ಕ್ರಿಕೆಟ್ ಜಗತ್ತು ಇಂದಿಗೂ ಅವರ ಬಗ್ಗೆ ಹೆಮ್ಮೆ ಪಡುತ್ತಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತೀಯ ದಂತಕಥೆಯ ಈ ಸಾಧನೆಯನ್ನು ಗಮನದಲ್ಲಿಟ್ಟುಕೊಂಡು, ಇಂಗ್ಲೆಂಡ್ನ ಲೀಸೆಸ್ಟರ್ ಕ್ರಿಕೆಟ್ ಕ್ಲಬ್ ಸುನಿಲ್ ಗವಾಸ್ಕರ್ ಅವರಿಗೆ ವಿಶೇಷ ಗೌರವ ಸಲ್ಲಿಸಲು ಮುಂದಾಗಿದೆ. ಅದು ಅಂತಿಂಥ ಗೌರವವಲ್ಲ, ಬದಲಾಗಿ ಲೀಸೆಸ್ಟರ್ ಕ್ಲಬ್ ತನ್ನ ಸ್ಟೇಡಿಯಂಗೆ ಗವಾಸ್ಕರ್ ಹೆಸರಿಡಲಿದ್ದಾರೆ. ಇಂಗ್ಲೆಂಡಿನ ಇತಿಹಾಸದಲ್ಲಿ ಭಾರತೀಯ ಕ್ರಿಕೆಟಿಗರೊಬ್ಬರ ಹೆಸರನ್ನು ಕ್ರೀಡಾಂಗಣಕ್ಕೆ ಇಡುತ್ತಿರುವುದು ಇದೇ ಮೊದಲು.
ಲೀಸೆಸ್ಟರ್ ಸ್ಟೇಡಿಯಂಗೆ ಗವಾಸ್ಕರ್ ಹೆಸರಿಡುವ ಅಭಿಯಾನ ಆರಂಭಿಸಿದ್ದು, ಭಾರತೀಯ ಮೂಲದ ಇಂಗ್ಲೆಂಡ್ನ ಸಂಸತ್ತು ಸದಸ್ಯ ರಾಹೆ ಕೀತ್ ವಾಜ್. ಇವರು ಸುದೀರ್ಘ ಕಾಲದಿಂದಲೂ ಸಂಸದರಾಗಿ ಲೀಸೆಸ್ಟರ್ ಅನ್ನು ಪ್ರತಿನಿಧಿಸುತ್ತಿದ್ದಾರೆ. ಇದೀಗ ಲೀಸೆಸ್ಟರ್ ಭಾರತದ ಕ್ರಿಕೆಟ್ ದಂತಕಥೆಗೆ ಗೌರವ ಸೂಚಿಸಲು ಕ್ರೀಡಾಂಗಣದ ಹೆಸರನ್ನೇ ಬದಲಿಸಲು ಮುಂದಾಗಿದೆ.
ಇನ್ನು ಇಂಗ್ಲೆಂಡ್‌ನಲ್ಲಿ ಸಿಕ್ಕಿರುವ ಈ ವಿಶೇಷ ಗೌರವದಿಂದ ಗವಾಸ್ಕರ್ ಕೂಡ ತುಂಬಾ ಸಂತೋಷಗೊಂಡಿದ್ದಾರೆ. ಲೀಸೆಸ್ಟರ್‌ನಲ್ಲಿ ನನ್ನ ಹೆಸರನ್ನು ಒಂದು ಕ್ರೀಡಾಂಗಣಕ್ಕೆ ಇಡುತ್ತಿರುವುದು ನನಗೆ ತುಂಬಾ ಸಂತೋಷ ಮತ್ತು ಗೌರವವಾಗಿದೆ. ಲೀಸೆಸ್ಟರ್ ಪ್ರಬಲ ಕ್ರೀಡಾ ಅಭಿಮಾನಿಗಳನ್ನು ಹೊಂದಿರುವ ನಗರವಾಗಿದೆ. ವಿಶೇಷವಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿದ್ದಾರೆ. ಹಾಗಾಗಿ ಇದು ನಿಜಕ್ಕೂ ದೊಡ್ಡ ಗೌರವ ಎಂದು ಲಿಟ್ಲ್ ಮಾಸ್ಟರ್ ಹೇಳಿದ್ದಾರೆ.
ವಿಶೇಷ ಎಂದರೆ ಸುನಿಲ್ ಗವಾಸ್ಕರ್ ಹೆಸರನ್ನು ವಿದೇಶಗಳ ಕ್ರೀಡಾಂಗಣಕ್ಕೆ ಇಡುತ್ತಿರುವುದು ಇದೇ ಮೊದಲ ಬಾರಿಯಲ್ಲ. ಇದಕ್ಕೂ ಮುಂಚೆಯೇ ಅಮೇರಿಕದ ಕೆಂಟುಕಿ ಮತ್ತು ತಾಂಜಾನಿಯಾದ ಜಾನ್ಸಿಬಾರ್‌ನಲ್ಲಿ ಕ್ರೀಡಾಂಗಣಗಳಿಗೆ ಅವರ ಹೆಸರನ್ನು ಇಡಲಾಗಿದೆ.
ಟೆಸ್ಟ್ ಕ್ರಿಕೆಟ್ನ ಕಿಂಗ್:
ಕ್ರಿಕೆಟ್ ಲೋಕದಲ್ಲಿ ಲಿಟ್ಲ್ ಮಾಸ್ಟರ್ ಎಂದೇ ಖ್ಯಾತರಾದ ಸುನಿಲ್ ಗವಾಸ್ಕರ್ ಅವರು ಮಾರ್ಚ್ 7, 1987 ರಂದು ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಗಳಿಸಿದ ದಾಖಲೆ ಬರೆದಿದ್ದರು. ಈ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಇದಾದ ಬಳಿಕವಷ್ಟೇ ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ಜಾಕ್ವೆಸ್ ಕಾಲಿಸ್ ಮತ್ತು ಬ್ರಿಯಾನ್ ಲಾರಾ ಸೇರಿದಂತೆ ಅನೇಕ ಬ್ಯಾಟ್ಸ್‌ಮನ್‌ಗಳು ಈ ರನ್‌ಗಳ ಶಿಖರವನ್ನು ಮುಟ್ಟಿರುವುದು.
ಹೀಗಾಗಿಯೇ ಟೆಸ್ಟ್ ಕ್ರಿಕೆಟ್ನ ದಾಖಲೆಗಳ ಬಗ್ಗೆ ಚರ್ಚೆಗಳು ಬಂದಾಗೆಲ್ಲ ಸುನಿಲ್ ಗವಾಸ್ಕರ್ ಹೆಸರು ಕೂಡ ಕಾಣಿಸುತ್ತದೆ. ಇದೀಗ ಈ ಸಾಧನೆಯನ್ನು ಅಚ್ಚಾಗಿ ಉಳಿಸಲು ಲೀಸೆಸ್ಟರ್ ಕ್ರಿಕೆಟ್ ಕ್ಲಬ್ ಮುಂದಾಗಿದೆ. ಅಂದಹಾಗೆ ಇಂಗ್ಲೆಂಡ್ನ ಕ್ರಿಕೆಟ್ ಸ್ಟೇಡಿಯಂಗೆ ಭಾರತೀಯ ಆಟಗಾರನ ಹೆಸರು ಇಡುತ್ತಿರುವುದು ಇದೇ ಮೊದಲ ಬಾರಿಗೆ ಎಂಬುದು ಇಲ್ಲಿ ವಿಶೇಷ.