
2025 ರ ಐಸಿಸಿ ಮಹಿಳಾ ವಿಶ್ವಕಪ್‌ನ ಎರಡನೇ ಸೆಮಿಫೈನಲ್ (Women’s World Cup 2025 semifinal) ಪಂದ್ಯ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುತ್ತಿದ್ದು, ತಂಡದ ಯುವ ಆರಂಭಿಕ ಆಟಗಾರ್ತಿ ಫೋಬೆ ಲಿಚ್‌ಫೀಲ್ಡ್ (Phoebe Litchfield) ಭಾರತದ ವಿರುದ್ಧ ಸ್ಫೋಟಕ ಶತಕ ಬಾರಿಸಿದ್ದಾರೆ. ಆರಂಭದಿಂದಲೂ ಭಾರತದ ಬೌಲರ್ಗಳ ಮೇಲೆ ಸವಾರಿ ಮಾಡಿದ ಲಿಚ್‌ಫೀಲ್ಡ್ ಕೇವಲ 77 ಎಸೆತಗಳಲ್ಲಿ ಚೊಚ್ಚಲ ವಿಶ್ವಕಪ್ ಶತಕ ಬಾರಿಸಿದರು. ತನ್ನ ಮೊದಲ ವಿಶ್ವಕಪ್‌ನಲ್ಲಿ ಆಡುತ್ತಿರುವ 22 ವರ್ಷದ ಲಿಚ್‌ಫೀಲ್ಡ್, ಟೀಂ ಇಂಡಿಯಾ ವಿರುದ್ಧ ಎರಡನೇ ಶತಕ ಬಾರಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ.
ಮೊದಲು ಬ್ಯಾಟಿಂಗ್ ಆಯ್ದುಕೊಂಡು ಕಣಕ್ಕಿಳಿದ ಆಸ್ಟ್ರೇಲಿಯಾಕ್ಕೆ ಇನ್ನಿಂಗ್ಸ್ನ ಐದನೇ ಓವರ್ನಲ್ಲೇ ಯುವ ವೇಗಿ ಕ್ರಾಂತಿ ಗೌಡ್ ಆಘಾತ ನೀಡಿ ಆಸೀಸ್ ನಾಯಕಿ ಅಲಿಸಾ ಹೀಲಿ ಅವರನ್ನು ಪೆವಿಲಿಯನ್ಗಟ್ಟಿದರು. ವಾಸ್ತವವಾಗಿ ಹೀಲಿ 3 ರನ್ ಗಳಿಸಿದ್ದಾಗ ಹರ್ಮನ್ಪ್ರೀತ್ ಕೌರ್ಗೆ ಸುಲಭ ಕ್ಯಾಚ್ ನೀಡಿದ್ದರು. ಆದರೆ ಹರ್ಮನ್ ಆ ಕ್ಯಾಚ್ ಕೈಚೆಲ್ಲಿದರು. ಆದರೆ ಈ ಜೀವದಾನದ ಲಾಭ ಪಡೆಯುವಲ್ಲಿ ವಿಫಲರಾದ ಹೀಲಿ ಕೇವಲ 5 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಈ ವಿಕೆಟ್ ಪತನದ ಹೊರತಾಗಿಯೂ ಆಸೀಸ್ ರನ್ ವೇಗಕ್ಕೆ ಕಡಿವಾಣ ಬೀಳಲಿಲ್ಲ. ಇದಕ್ಕೆ ಕಾರಣ ಲಿಚ್‌ಫೀಲ್ಡ್. ಭಾರತದ ಪ್ರತಿಯೊಬ್ಬ ಬೌಲರ್ಗಳ ಮೇಲೆ ದಾಳಿ ಮಾಡಿ ಬೌಂಡರಿಗಳ ಮಳೆ ಸುರಿಸಿದರು. ಅದರಲ್ಲೂ ಯುವ ವೇಗಿ ಕ್ರಾಂತಿ ಗೌಡ್ ಮತ್ತು ಅನುಭವಿ ಸ್ಪಿನ್ನರ್ ದೀಪ್ತಿ ಶರ್ಮಾ ಅವರನ್ನು ಗುರಿಯಾಗಿಸಿಕೊಂಡ ಲಿಚ್‌ಫೀಲ್ಡ್, ಕೇವಲ 45 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದಾಗ್ಯೂ ಅರ್ಧಶತಕ ಪೂರೈಸಿದ ಬೆನ್ನಲ್ಲೇ ಲಿಚ್‌ಫೀಲ್ಡ್, ಶಾರ್ಟ್ ಥರ್ಡ್-ಮ್ಯಾನ್ ಫೀಲ್ಡರ್ಗೆ ಕ್ಯಾಚ್ ನೀಡಿದ್ದರು. ಅಂಪೈರ್ ಕೂಡ ಔಟ್ ನೀಡಿದ್ದರು. ಆದರೆ ಮೂರನೇ ಅಂಪೈರ್ ಮಧ್ಯಪ್ರವೇಶಿಸಿ ಚೆಂಡು ಬ್ಯಾಟ್‌ಗೆ ಬಡಿದು ನಂತರ ಪಿಚ್‌ಗೆ ಬಡಿದು ಫೀಲ್ಡರ್ ಕೈ ಸೇರಿರುವುದನ್ನು ಖಚಿತಪಡಿಸಿದರು. ಹೀಗಾಗಿ ಔಟಾಗುವುದರಿಂದ ಪಾರಾದ ಲಿಚ್‌ಫೀಲ್ಡ್, ಸ್ಫೋಟಕ ಶತಕ ಬಾರಿಸುವಲ್ಲಿ ಯಶಸ್ವಿಯಾದರು.
ಕೇವಲ 77 ಎಸೆತಗಳಲ್ಲಿ ತಮ್ಮ ಮೂರನೇ ಏಕದಿನ ಶತಕ ಬಾರಿಸಿದ ಲಿಚ್‌ಫೀಲ್ಡ್ ತಮ್ಮ ಶತಕವನ್ನು ಬೌಂಡರಿಯೊಂದಿಗೆ ಪೂರ್ಣಗೊಳಿಸಿದರು. ಈ ಮೂಲಕ ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ವಿಶ್ವ ದಾಖಲೆಯನ್ನು ನಿರ್ಮಿಸಿದರು. ಇದಲ್ಲದೆ, ಕೇವಲ 22 ವರ್ಷ ಮತ್ತು 195 ದಿನಗಳ ವಯಸ್ಸಿನಲ್ಲಿ, ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಶತಕ ಗಳಿಸಿದ ವಿಶ್ವದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಮೇಲೆ ಹೇಳಿದಂತೆ ಭಾರತದ ವಿರುದ್ಧ ಇದು ಲಿಚ್‌ಫೀಲ್ಡ್ ಅವರ ಎರಡನೇ ಶತಕವಾಗಿದೆ. ಇದಕ್ಕೂ ಮೊದಲು ಅವರು ಜನವರಿ 2024 ರಲ್ಲಿ ಟೀಂ ಇಂಡಿಯಾ ವಿರುದ್ಧ ಶತಕ ಬಾರಿಸಿದ್ದರು. ಆ ಬಳಿಕ ಅವರಿಗೆ ಒಂದೇ ಒಂದು ಶತಕ ಬಾರಿಸಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲದ ನಂತರ, ಲಿಚ್‌ಫೀಲ್ಡ್ ತಮ್ಮ ಏಕದಿನ ಶತಕದ ಬರವನ್ನು ಕೊನೆಗೊಳಿಸಿದ್ದಾರೆ. ಇದು ಮಾತ್ರವಲ್ಲದೆ ಲಿಚ್‌ಫೀಲ್ಡ್, ಭಾರತದ ವಿರುದ್ಧ ಆಡಿರುವ ಒಂಬತ್ತು ಏಕದಿನ ಇನ್ನಿಂಗ್ಸ್‌ಗಳಲ್ಲಿ ಆರನೇ ಬಾರಿಗೆ ಐವತ್ತಕ್ಕೂ ಹೆಚ್ಚು ಸ್ಕೋರ್ ಕಲೆಹಾಕಿದ ಸಾಧನೆ ಮಾಡಿದ್ದಾರೆ. ಅಂತಿಮವಾಗಿ ಅವರು 93 ಎಸೆತಗಳಲ್ಲಿ 17 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 119 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:30 pm, Thu, 30 October 25