IND vs ENG: 4 ಎಸೆತಗಳಲ್ಲಿ ಇಬ್ಬರು ಆರಂಭಿಕರನ್ನು ಪೆವಿಲಿಯನ್​ಗಟ್ಟಿದ ನಿತೀಶ್ ರೆಡ್ಡಿ; ವಿಡಿಯೋ ನೋಡಿ

Nitish Reddy's Magical Over: ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರರನ್ನು ಬೇಗನೆ ಔಟ್ ಮಾಡುವಲ್ಲಿ ಯುವ ಆಲ್‌ರೌಂಡರ್ ನಿತೀಶ್ ರೆಡ್ಡಿ ಯಶಸ್ವಿಯಾಗಿದ್ದಾರೆ. ನಿತೀಶ್ ಒಂದೇ ಓವರ್‌ನಲ್ಲಿ ಬೆನ್ ಡಕೆಟ್ ಮತ್ತು ಜ್ಯಾಕ್ ಕ್ರೌಲಿ ವಿಕೆಟ್ ಪಡೆದರು. ಕಳೆದ ಪಂದ್ಯದಲ್ಲಿ ನಿರಾಶೆಗೊಳಿಸಿದ್ದ ನಿತೀಶ್ ಈ ಪಂದ್ಯದಲ್ಲಿ ತಮ್ಮ ಕೌಶಲ್ಯವನ್ನು ಸಾಬೀತುಪಡಿಸಿದ್ದಾರೆ.

IND vs ENG: 4 ಎಸೆತಗಳಲ್ಲಿ ಇಬ್ಬರು ಆರಂಭಿಕರನ್ನು ಪೆವಿಲಿಯನ್​ಗಟ್ಟಿದ ನಿತೀಶ್ ರೆಡ್ಡಿ; ವಿಡಿಯೋ ನೋಡಿ
Nitish Reddy

Updated on: Jul 10, 2025 | 5:41 PM

ಲಾರ್ಡ್ಸ್ ಟೆಸ್ಟ್​ನಲ್ಲಿ (Lords Test) ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಇಂಗ್ಲೆಂಡ್‌ ತಂಡ ಬಹು ಬೇಗನೇ ಆರಂಭಿಕರಿಬ್ಬರನ್ನು ಕಳೆದುಕೊಂಡಿದೆ. ಟೀಂ ಇಂಡಿಯಾ ಪರ ಬುಮ್ರಾ, ಸಿರಾಜ್, ಆಕಾಶ್​ರಿಂದ ಮಾಡಲು ಸಾಧ್ಯವಾಗದ ಕೆಲಸವನ್ನು ಯುವ ಆಲ್ ರೌಂಡರ್ ನಿತೀಶ್ ರೆಡ್ಡಿ ಮಾಡಿದ್ದು, ಗಿಲ್ ಚಾಣಾಕ್ಯ ನಾಯಕತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ವಾಸ್ತವವಾಗಿ ಮೊದಲು ಬೌಲಿಂಗ್ ಮಾಡುತ್ತಿರುವ ಟೀಂ ಇಂಡಿಯಾ (Team India) ವೇಗಿಗಳು ಆಂಗ್ಲ ಆರಂಭಿಕರಿಗೆ ಮುಕ್ತವಾಗಿ ರನ್ ಕಲೆಹಾಕಲು ಅವಕಾಶ ನೀಡಲಿಲ್ಲ. ಆದರೆ ವಿಕೆಟ್ ತೆಗೆಯುವಲ್ಲಿ ವಿಫಲರಾದರು. ಹೀಗಾಗಿ ಶುಭ್​ಮನ್ ಗಿಲ್ (Shubman Gill) 14 ನೇ ಓವರ್ ಬೌಲ್ ಮಾಡುವ ಜವಾಬ್ದಾರಿಯನ್ನು ನಿತೀಶ್ ರೆಡ್ಡಿಗೆ ನೀಡಿದರು. ಗಿಲ್ ಅವರ ಈ ತಂತ್ರವನ್ನು ನೋಡಿ ಪ್ರೇಕ್ಷಕರು ಆಶ್ಚರ್ಯಚಕಿತರಾದರು. ಆದರೆ ನಿತೀಶ್ ರೆಡ್ಡಿ (Nitish Kumar Reddy) ತಮ್ಮ ಮ್ಯಾಜಿಕ್ ತೋರಿಸಿ, ಒಂದೇ ಓವರ್​ನಲ್ಲಿ ಬೆನ್ ಡಕೆಟ್ ಮತ್ತು ಜ್ಯಾಕ್ ಕ್ರೌಲಿಯ ವಿಕೆಟ್ ಪಡೆದರು.

ನಿತೀಶ್ ರೆಡ್ಡಿ ಮ್ಯಾಜಿಕ್

ನಿತೀಶ್ ರೆಡ್ಡಿ ಬೌಲ್ ಮಾಡಿದ ಈ ಓವರ್​ನ ಎರಡನೇ ಎಸೆತದಲ್ಲಿ ಬೆನ್ ಡಕೆಟ್ ಬೌಂಡರಿ ಬಾರಿಸಿದರು. ಮುಂದಿನ ಎಸೆತವನ್ನು ನಿತೀಶ್ ರೆಡ್ಡಿ ಶಾರ್ಟ್ ಬಾಲ್ ಬೌಲ್ ಮಾಡಿದರು. ಇದನ್ನು ನೋಡಿದ ಡಕೆಟ್ ಆ ಚೆಂಡನ್ನು ಎಳೆಯಲು ಪ್ರಯತ್ನಿಸಿದರಾದರೂ ಯಶಸ್ವಿಯಾಗಲಿಲ್ಲ. ಹೀಗಾಗಿ ಚೆಂಡು ಬ್ಯಾಟ್​ಗೆ ತಾಗಿ ವಿಕೆಟ್ ಕೀಪರ್​ ಪಂತ್‌ ಕೈಸೇರಿತು. ಇದಾದ ಬಳಿಕ ನಿತೀಶ್ ರೆಡ್ಡಿಗೆ ಸತತ ಎರಡನೇ ಎಸೆತದಲ್ಲಿ ಎರಡನೇ ವಿಕೆಟ್ ಪಡೆಯುವ ಅವಕಾಶವಿತ್ತು. ಆದರೆ ಗಲ್ಲಿಯಲ್ಲಿ ನಿಂತಿದ್ದ ಶುಭ್​ಮನ್ ಗಿಲ್, ಓಲಿ ಪೋಪ್ ಅವರ ಕ್ಯಾಚ್ ಅನ್ನು ಕೈಬಿಟ್ಟರು. ಗಿಲ್ ಕ್ಯಾಚ್ ಹಿಡಿದಿದ್ದರೆ, ಪೋಪ್ ಮೊದಲ ಎಸೆತದಲ್ಲೇ ಔಟಾಗುತ್ತಿದ್ದರು.

2 ವಿಕೆಟ್ ಉರುಳಿಸಿದ ನಿತೀಶ್

ಆದಾಗ್ಯೂ, ತಮ್ಮ ಕರಾರುವಕ್ಕಾದ ದಾಳಿಯನ್ನು ಮುಂದುವರೆಸಿದ ನಿತೀಶ್, ಓವರ್​ನ ಕೊನೆಯ ಎಸೆತದಲ್ಲಿ ಜ್ಯಾಕ್ ಕ್ರೌಲಿಯನ್ನು ಪೆವಿಲಿಯನ್​ಗಟ್ಟುವಲ್ಲಿ ಯಶಸ್ವಿಯಾದರು. ನಿತೀಶ್ ರೆಡ್ಡಿ ಬೌಲ್ ಮಾಡಿದ ಎಕ್ಸ್​ಟ್ರಾ ಬೌನ್ಸ್‌ ಎಸೆತವನ್ನು ಆಡುವ ಯತ್ನದಲ್ಲಿ ಕ್ರೌಲಿ, ರಿಷಭ್ ಪಂತ್​ಗೆ ಕ್ಯಾಚ್ ನೀಡಿ ಔಟಾದರು.

IND vs ENG: ಟಾಸ್ ಗೆದ್ದ ಇಂಗ್ಲೆಂಡ್‌ ಬ್ಯಾಟಿಂಗ್‌ ಆಯ್ಕೆ; ಬುಮ್ರಾ ಎಂಟ್ರಿ, ಕನ್ನಡಿಗನಿಗೆ ಕೋಕ್

ಕಳೆದ ಪಂದ್ಯದಲ್ಲಿ ನಿತೀಶ್ ವಿಫಲ

ಲಾರ್ಡ್ಸ್‌ನಲ್ಲಿ ಆರಂಭದಲ್ಲೇ ಮಿಂಚಿರುವ ನಿತೀಶ್ ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ನಿರಾಶೆ ಮೂಡಿಸಿದ್ದರು. ಬ್ಯಾಟಿಂಗ್‌ನಲ್ಲಿ ಕೇವಲ 2 ರನ್‌ ಮಾತ್ರ ಕಲೆಹಾಕಿದ್ದರು. ಬೌಲಿಂಗ್ ಬಗ್ಗೆ ಹೇಳುವುದಾದರೆ, ಎಡ್ಜ್‌ಬಾಸ್ಟನ್‌ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 6 ಓವರ್‌ಗಳನ್ನು ಬೌಲ್ ಮಾಡಿದ ನಿತೀಶ್​ಗೆ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವ ಅವಕಾಶ ಸಿಗಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:30 pm, Thu, 10 July 25