ಶ್ರೀಲಂಕಾದಲ್ಲಿ ನಡೆದ ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಬಿ-ಲವ್ ಕ್ಯಾಂಡಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಡಂಬುಲ್ಲಾ ಔರಾ ಹಾಗೂ ಬಿ-ಲವ್ ಕ್ಯಾಂಡಿ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಡಂಬುಲ್ಲಾ ಔರಾ ಮೊದಲು ಬ್ಯಾಟಿಂಗ್ ಮಾಡಿದ್ದರು.
ಆದರೆ ಡಂಬುಲ್ಲಾ ಔರಾ ತಂಡವು ನಿರೀಕ್ಷಿತ ಪಡೆದಿರಲಿಲ್ಲ. ಆರಂಭಿಕ ಆಟಗಾರ ಅವಿಷ್ಕಾ ಫರ್ನಾಂಡೊ 5 ರನ್ಗಳಿಸಿ ವಿಕೆಟ್ ಒಪ್ಪಿಸಿದರೆ, ಕುಸಾಲ್ ಮೆಂಡಿಸ್ 22 ರನ್ಗಳಿಸಲಷ್ಟೇ ಶಕ್ತರಾದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸಮರವಿಕ್ರಮ 30 ಎಸೆತಳನ್ನು ಎದುರಿಸಿ ಕಲೆಹಾಕಿದ್ದು ಕೇವಲ 36 ರನ್ ಮಾತ್ರ. ಹಾಗೆಯೇ ಕುಸಾಲ್ ಪೆರೆರಾ 25 ಎಸೆತಗಳಲ್ಲಿ 31 ರನ್ ಬಾರಿಸಿದರು.
ಇದಾಗ್ಯೂ ಅಂತಿಮ ಹಂತದಲ್ಲಿ ಅಬ್ಬರಿಸಿದ ಧನಂಜಯ ಡಿಸಿಲ್ವಾ 29 ಎಸೆತಗಳಲ್ಲಿ 40 ರನ್ ಚಚ್ಚಿದರು. ಈ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಡಂಬುಲ್ಲಾ ಔರಾ ತಂಡವು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 147 ರನ್ ಕಲೆಹಾಕಿತು.
148 ರನ್ಗಳ ಗುರಿ ಪಡೆದ ಬಿ-ಲವ್ ಕ್ಯಾಂಡಿ ತಂಡಕ್ಕೆ ಮೊಹಮ್ಮದ್ ಹ್ಯಾರಿಸ್ (26) ಹಾಗೂ ಕಾಮಿಂದು ಮೆಂಡಿಸ್ (44) ಉತ್ತಮ ಆರಂಭ ಒದಗಿಸಿದ್ದರು. ಆ ಬಳಿಕ ಬಂದ ದಿನೇಶ್ ಚಂಡಿಮಲ್ 24 ರನ್ಗಳ ಕೊಡುಗೆ ನೀಡಿದರು.
ಆದರೆ ಮಧ್ಯಮ ಕ್ರಮಾಂಕದಲ್ಲಿ ಉಂಟಾದ ದಿಢೀರ್ ಕುಸಿತದಿಂದ ಒಂದು ಹಂತದಲ್ಲಿ ಡಂಬುಲ್ಲಾ ಔರ ಬೌಲರ್ಗಳು ಮೇಲುಗೈ ಸಾಧಿಸಿದರು. ಈ ವೇಳೆ ತಮ್ಮ ಅನುಭವವನ್ನು ಧಾರೆಯೆರೆದ ಏಂಜೆಲೊ ಮ್ಯಾಥ್ಯೂಸ್ ಅಜೇಯ 25 ರನ್ ಬಾರಿಸುವ ಮೂಲಕ 19.5 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಬಿ-ಲವ್ ಕ್ಯಾಂಡಿ ತಂಡವು 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
B-Love Kandy defeats Dambulla Aura in a thrilling final match.#LPL2023 #LiveTheAction pic.twitter.com/eLzwYosOYZ
— LPL – Lanka Premier League (@LPLT20) August 20, 2023
ಡಂಬುಲ್ಲಾ ಔರ ಪ್ಲೇಯಿಂಗ್ 11: ಅವಿಷ್ಕಾ ಫೆರ್ನಾಂಡೋ , ಕುಸಾಲ್ ಮೆಂಡಿಸ್ (ನಾಯಕ) , ಸದೀರ ಸಮರವಿಕ್ರಮ , ಕುಸಲ್ ಪೆರೇರಾ , ಧನಂಜಯ ಡಿ ಸಿಲ್ವಾ , ಅಲೆಕ್ಸ್ ರಾಸ್ , ಹೇಡನ್ ಕೆರ್ , ದುಶನ್ ಹೇಮಂತ , ಬಿನೂರ ಫರ್ನಾಂಡೋ , ನೂರ್ ಅಹ್ಮದ್ , ಪ್ರಮೋದ್ ಮಧುಶನ್.
ಇದನ್ನೂ ಓದಿ: ಟೀಮ್ ಇಂಡಿಯಾಗೆ ಶ್ರೇಯಸ್ ಅಯ್ಯರ್ ಆಯ್ಕೆ ಬಹುತೇಕ ಖಚಿತ
ಬಿ-ಲವ್ ಕ್ಯಾಂಡಿ ಪ್ಲೇಯಿಂಗ್ 11: ಮೊಹಮ್ಮದ್ ಹ್ಯಾರಿಸ್ , ದಿನೇಶ್ ಚಂಡಿಮಲ್ (ವಿಕೆಟ್ ಕೀಪರ್) , ಅಶೆನ್ ಬಂಡಾರ , ಏಂಜೆಲೊ ಮ್ಯಾಥ್ಯೂಸ್ (ನಾಯಕ) , ಕಾಮಿಂದು ಮೆಂಡಿಸ್ , ಚತುರಂಗ ಡಿ ಸಿಲ್ವಾ , ಆಸಿಫ್ ಅಲಿ , ಲಹಿರು ಮಧುಶಂಕ , ಮೊಹಮ್ಮದ್ ಹಸ್ನೈನ್ , ಮುಜೀಬ್ ಉರ್ ರೆಹಮಾನ್ , ನುವಾನ್ ಪ್ರದೀಪ್.