IPL 2024: ಎಷ್ಟೇ ಮಳೆ ಬರಲಿ, 15 ನಿಮಿಷದಲ್ಲಿ ಪಂದ್ಯ ಆರಂಭ; ಚಿನ್ನಸ್ವಾಮಿಯಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನದ ವಿಡಿಯೋ ನೋಡಿ

|

Updated on: May 17, 2024 | 9:46 PM

IPL 2024: ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಎಷ್ಟೇ ಮಳೆಬಂದರೂ ಪಂದ್ಯವನ್ನು ಕೇವಲ 15 ನಿಮಿಷಗಳಲ್ಲಿ ಆರಂಭಿಸುವ ತಂತ್ರಜ್ಞಾನವನ್ನು ಚಿನ್ನಸ್ವಾಮಿ ಮೈದಾನದಲ್ಲಿ ಅಳವಡಿಸಲಾಗಿದೆ ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.

IPL 2024: ಎಷ್ಟೇ ಮಳೆ ಬರಲಿ, 15 ನಿಮಿಷದಲ್ಲಿ ಪಂದ್ಯ ಆರಂಭ; ಚಿನ್ನಸ್ವಾಮಿಯಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನದ ವಿಡಿಯೋ ನೋಡಿ
ಎಂ ಚಿನ್ನಸ್ವಾಮಿ ಕ್ರೀಡಾಂಗಣ
Follow us on

ಐಪಿಎಲ್ 2024ರ (IPL 2024) 68 ನೇ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, ಚೆನ್ನೈ ಸೂಪರ್ ಕಿಂಗ್ಸ್ (RCB vs CSK) ತಂಡವನ್ನು ಎದುರಿಸಲಿದೆ . ಈ ಪಂದ್ಯ ಆರ್‌ಸಿಬಿಯ ತವರು ಮೈದಾನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium) ನಡೆಯಲಿದೆ . ಪ್ಲೇ ಆಫ್​ಗೇರಲು ಉಭಯ ತಂಡಗಳಿಗೂ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಈಗಾಗಲೇ 3 ತಂಡಗಳು ಪ್ಲೇ ಆಫ್‌ಗೆ ಅರ್ಹತೆ ಪಡೆದಿವೆ. ಉಳಿದಿರುವ ಏಕೈಕ ಸ್ಥಾನಕ್ಕಾಗಿ ಆರ್​ಸಿಬಿ ಹಾಗೂ ಸಿಎಸ್​ಕೆ ನಡುವೆ ಹಣಾಹಣಿ ಏರ್ಪಟ್ಟಿದೆ. ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲುತ್ತದೋ ಆ ತಂಡ ಪ್ಲೇ ಆಫ್​ಗೇರಲಿದೆ. ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದರೆ ಸಿಎಸ್​ಕೆ ಪ್ಲೇ ಆಫ್​ಗೇರಲಿದ್ದು, ಆರ್​ಸಿಬಿ ಲೀಗ್​​ನಿಂದ ಹೊರಬೀಳಲಿದೆ. ಇದು ಆರ್​ಸಿಬಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಆದರೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಎಷ್ಟೇ ಮಳೆಬಂದರೂ ಪಂದ್ಯವನ್ನು ಕೇವಲ 15 ನಿಮಿಷಗಳಲ್ಲಿ ಆರಂಭಿಸುವ ತಂತ್ರಜ್ಞಾನವನ್ನು ಚಿನ್ನಸ್ವಾಮಿ ಮೈದಾನದಲ್ಲಿ ಅಳವಡಿಸಲಾಗಿದೆ ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಒಳಚರಂಡಿ ವ್ಯವಸ್ಥೆ

ಹವಾಮಾನ ಇಲಾಖೆ ವರದಿ ಪ್ರಕಾರ ನಾಳೆ ಅಂದರೆ ಮೇ 18 ರಂದು ನಗರದಲ್ಲಿ ಭಾರಿ ಮಳೆಯಾಗುವ ಸೂಚನೆ ಸಿಕ್ಕಿದೆ. ಇಂತಹ ಪರಿಸ್ಥಿತಿಯಲ್ಲಿ ಮಳೆಯಿಂದಾಗಿ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ 1 ಅಂಕ ನೀಡಲಾಗುತ್ತದೆ. ಇದರಿಂದ ಆರ್‌ಸಿಬಿಯ ಪ್ಲೇ ಆಫ್‌ ಕನಸು ಭಗ್ನವಾಗಲಿದೆ. ಆದರೆ, ಪಂದ್ಯದ ಆರಂಭದಲ್ಲಿ ಅಥವಾ ಮಧ್ಯದಲ್ಲಿ ಮಳೆ ಬಂದು ಸ್ವಲ್ಪ ಸಮಯದ ನಂತರ ನಿಂತರೆ, ಓವರ್‌ಗಳನ್ನು ಕಡಿತಗೊಳಿಸಿ ಪಂದ್ಯವನ್ನು ಮರು ಆರಂಭಿಸಲಾಗುತ್ತದೆ. ಅದಾಗ್ಯೂ ಈ ಹಿಂದೆ ನಡೆದ ಕೆಲವು ಪಂದ್ಯಗಳು ಸಂಪೂರ್ಣ ಮಳೆಗಾಹುತಿಯಾದರೆ, ಇನ್ನು ಕೆಲವು ಪಂದ್ಯಗಳು ಪಿಚ್ ಹಾಗೂ ಮೈದಾನ ಹೆಚ್ಚು ಒದ್ದೆಯಾದ ಕಾರಣ ಸ್ಥಗಿತಗೊಂಡಿದ್ದವು. ಆದರೆ ಈ ರೀತಿಯಾಗಿ ಪಂದ್ಯ ರದ್ದಾಗುವ ಸಾಧ್ಯತೆಗಳು ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವುದಿಲ್ಲ. ಏಕೆಂದರೆ ಈ ಮೈದಾನದಲ್ಲಿ ಎಷ್ಟೇ ಮಳೆ ಬಂದರೂ ಪಂದ್ಯವನ್ನು ಕೆಲವೇ ನಿಮಿಷಗಳಲ್ಲಿ ಆರಂಭಿಸುವ ಅತ್ಯಾಧುನಿಕ ತಂತ್ರಜ್ಞಾನವಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಮಳೆಯ ಆತಂಕದ ನಡುವೆ ಪಂದ್ಯಕ್ಕೆ ಒಂದು ದಿನ ಮುಂಚಿತವಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಒಳಚರಂಡಿ ವ್ಯವಸ್ಥೆಯನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಒಳಚರಂಡಿ ವ್ಯವಸ್ಥೆ ವಿಶ್ವದಲ್ಲೇ ಎಷ್ಟು ಅತ್ಯುತ್ತಮವಾಗಿದೆ ಎಂಬುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಇಲ್ಲಿ ಮಳೆ ನಿಂತ ಕೆಲವೇ ನಿಮಿಷಗಳಲ್ಲಿ ನೆಲ ಒಣಗುತ್ತದೆ. ಅಲ್ಲದೆ, ಮೈದಾನದಲ್ಲಿ ಸಂಗ್ರಹವಾದ ನೀರು ಕೂಡ ಬಹಳ ಬೇಗನೆ ಮೈದಾನದಲ್ಲಿ ಇಂಗಿ ಹೋಗುತ್ತದೆ.

15 ನಿಮಿಷಗಳಲ್ಲಿ ಪಿಚ್ ಸಿದ್ದ

ಚಿನ್ನಸ್ವಾಮಿ ಕ್ರೀಡಾಂಗಣವು ಉತ್ತಮ ಗುಣಮಟ್ಟದ ಒಳಚರಂಡಿ ವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಸಬ್‌ಏರ್ ವ್ಯವಸ್ಥೆಯಿಂದಾಗಿ ಮಳೆ ನಿಂತ ಕೇವಲ 15 ನಿಮಿಷಗಳಲ್ಲಿ ಪಂದ್ಯವನ್ನು ಆರಂಭಿಸಬಹುದಾಗಿದೆ. ಎಷ್ಟೇ ಭಾರೀ ಮಳೆಯಾದರೂ ಆಟಕ್ಕೆ ಮೈದಾನವನ್ನು ಸಿದ್ಧಗೊಳಿಸಬಹುದು. ನಿರ್ವಾತ ಚಾಲಿತ ಒಳಚರಂಡಿ ವ್ಯವಸ್ಥೆಯು ಪ್ರತಿ ನಿಮಿಷಕ್ಕೆ 10,000 ಲೀಟರ್ ನೀರನ್ನು ಪಿಚ್​ನಿಂದ ಹೊರಹಾಕುತ್ತದೆ. ಕಳೆದ ಐಪಿಎಲ್​ನಲ್ಲಿ ಆರ್​ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತ್ತು. ಭಾರಿ ಮಳೆಯ ನಡುವೆಯೂ ಸಂಪೂರ್ಣ ಪಂದ್ಯವನ್ನು ನಡೆಸಲಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:43 pm, Fri, 17 May 24