
ಮಹಾರಾಜ ಟಿ20 ಲೀಗ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಲ್ಬಾರ್ಗ ಮಿಸ್ಟಿಕ್ಸ್ ತಂಡವನ್ನು ಮಣಿಸಿ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಫೈನಲ್ಗೆ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮನೀಷ್ ಪಾಂಡೆ ನಾಯಕತ್ವದ ಗುಲ್ಬಾರ್ಗ ಮಿಸ್ಟಿಕ್ಸ್ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ಪರ ಎಲ್ಆರ್ ಚೇತನ್ ಹಾಗೂ ಮಯಾಂಕ್ ಅಗರ್ವಾಲ್ ಸ್ಪೋಟಕ ಬ್ಯಾಟಿಂಗ್ ನಡೆಸಿದರು.
ಮೊದಲ ವಿಕೆಟ್ಗೆ 162 ರನ್ಗಳ ಜೊತೆಯಾಟವಾಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಈ ವೇಳೆ 48 ಎಸೆತಗಳಲ್ಲಿ 80 ರನ್ ಬಾರಿಸಿದ್ದ ಚೇತನ್ ವಿದ್ವತ್ ಕಾವೇರಪ್ಪಗೆ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ಭರ್ಜರಿ ಇನಿಂಗ್ಸ್ ಮುಂದುವರೆಸಿದ ಮಯಾಂಕ್ ಅಗರ್ವಾಲ್ 61 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 9 ಫೋರ್ನೊಂದಿಗೆ ಅಜೇಯ 112 ರನ್ ಬಾರಿಸಿದರು. ಈ ಭರ್ಜರಿ ಶತಕದ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್ ತಂಡವು 3 ವಿಕೆಟ್ ನಷ್ಟಕ್ಕೆ 227 ರನ್ ಕಲೆಹಾಕಿತು.
228 ರನ್ಗಳ ಕಠಿಣ ಗುರಿ ಬೆನ್ನತ್ತಿದ ಗುಲ್ಬರ್ಗಾ ಪರ ರೋಹನ್ ಪಾಟೀಲ್ ಭರ್ಜರಿಯಾಗಿ ಬ್ಯಾಟ್ ಬೀಸಿದ್ದರು. ಬೆಂಗಳೂರು ಬ್ಲಾಸ್ಟರ್ಸ್ ಬೌಲರುಗಳ ಬೆಂಡೆತ್ತಿದ ಯುವ ಆಟಗಾರ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಈ ಮೂಲಕ ಕೇವಲ 42 ಎಸೆತಗಳಲ್ಲಿ ಭರ್ಜರಿ ಶತಕ ಬಾರಿಸಿದರು. ಆದರೆ ಉಳಿದ ಬ್ಯಾಟ್ಸ್ಮನ್ಗಳಿಂದ ನಿರೀಕ್ಷಿತ ಆಟ ಮೂಡಿಬಂದಿರಲಿಲ್ಲ. ಇದಾಗ್ಯೂ ಏಕಾಂಗಿಯಾಗಿ ಹೋರಾಟ ಮುಂದುವರೆಸಿದ್ದ ರೋಹನ್ ಪಾಟೀಲ್ 49 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 10 ಫೋರ್ನೊಂದಿಗೆ 108 ರನ್ ಬಾರಿಸಿದ್ದರು. 13 ಎಸೆತಗಳಲ್ಲಿ 45 ರನ್ಗಳ ಅವಶ್ಯಕತೆಯಿದ್ದ ವೇಳೆ ರೋಹನ್ ಪಾಟೀಲ್ ರನೌಟ್ಗೆ ಬಲಿಯಾದರು.
ಇತ್ತ ರೋಹನ್ ವಿಕೆಟ್ ಸಿಗುತ್ತಿದ್ದಂತೆ ಇತ್ತ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಗೆಲುವನ್ನು ಖಚಿತಪಡಿಸಿಕೊಂಡಿತು. ಅದರಂತೆ 18.2 ಓವರ್ಗಳಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ತಂಡವನ್ನು 183 ರನ್ಗಳಿಗೆ ಆಲೌಟ್ ಮಾಡಿ ಬೆಂಗಳೂರು ಬ್ಲಾಸ್ಟರ್ಸ್ 44 ರನ್ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಬೆಂಗಳೂರು ಬ್ಲಾಸ್ಟರ್ಸ್ ಫೈನಲ್ಗೆ ಎಂಟ್ರಿ ಕೊಟ್ಟಿದೆ. ಇನ್ನು ಸೋತಿರುವ ಮನೀಷ್ ಪಾಂಡೆ ನಾಯಕತ್ವದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದೊಡನೆ 2ನೇ ಕ್ವಾಲಿಫೈಯರ್ ಪಂದ್ಯವಾಡಲಿದೆ.