AB de Villiers: ಭಾರತದ ಬಡ ಮಕ್ಕಳ ನೆರವಿಗೆ ನಿಂತ ABD
AB de Villiers: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 11 ವರ್ಷಗಳ ಕಾಲ ಆಡಿದ್ದ ಎಬಿಡಿ ಹಲವು ಬಾರಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು.

ಕ್ರಿಕೆಟ್ ಅಂಗಳದಲ್ಲಿ 360 ಡಿಗ್ರಿಯಲ್ಲಿ ಬ್ಯಾಟ್ ಬೀಸಿ ಚಿತ್ತರ ಮೂಡಿಸಿದ್ದ ಎಬಿಡಿ ಅಲಿಯಾಸ್ ಅಬ್ರಹಾಂ ಬೆಂಜಮಿನ್ ಡಿವಿಲಿಯರ್ಸ್ (AB de Villiers) ಇದೀಗ ಸಾಮಾಜಿಕ ಕಾರ್ಯಗಳತ್ತ ಮುಖ ಮಾಡಿದ್ದಾರೆ. ಅದರಂತೆ ಭಾರತದ ಹಿಂದುಳಿದ ಮಕ್ಕಳ ಭವಿಷ್ಯಕ್ಕೆ ನೆರವಾಗಲು ಎಬಿಡಿ ಮುಂದಾಗಿದ್ದಾರೆ. ಇದಕ್ಕಾಗಿ ದೇಶದ ಪ್ರಮುಖ ಎನ್‌ಜಿಒ ಮೇಕ್ ಎ ಡಿಫರೆನ್ಸ್ (ಎಂಎಡಿ) ಜೊತೆ ಡಿವಿಲಿಯರ್ಸ್ ಕೈ ಜೋಡಿಸಿದ್ದು, ಈ ಮೂಲಕ ಇಬ್ಬರು ಭಾರತೀಯ ಮಕ್ಕಳ ಪಾಲಿನ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಲಿದ್ದಾರೆ.
ಅದರಂತೆ ಮುಂದಿನ ಆರು ತಿಂಗಳಲ್ಲಿ ಎಬಿ ಡಿವಿಲಿಯರ್ಸ್ ಲಕ್ನೋದ 18 ವರ್ಷದ ಅಯಾನ್ ಹಾಗೂ ಬೆಂಗಳೂರಿನ 21 ವರ್ಷ ವಯಸ್ಸಿನ ಅನಿತಾಗೆ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ವಿಶೇಷ ಎಂದರೆ ಅಯಾನ್ ಕ್ರಿಕೆಟಿಗನಾಗಲು ಬಯಸಿದ್ದಾರೆ. ಹೀಗಾಗಿ ಎಬಿಡಿ ಮಾರ್ಗದರ್ಶನದಲ್ಲಿ ಅಯಾನ್ ಮುಂದಿನ ತಯಾರಿಗಳನ್ನು ಆರಂಭಿಸಲಿದ್ದಾರೆ.
ಹಾಗೆಯೇ ಬೆಂಗಳೂರಿನ ಅನಿತಾ ಪತ್ರಿಕೋದ್ಯಮ ಓದುತ್ತಿದ್ದು, ಮುಂದೊಂದು ದಿನ ಟಿವಿ ನ್ಯೂಸ್ ಆ್ಯಂಕರ್ ಆಗಬೇಕೆಂಬ ಕನಸು ಹೊಂದಿದ್ದಾರೆ. ಇವರ ಈ ಮಹತ್ವದ ಕನಸಿಗೂ ಎಬಿಡಿ ಕೈ ಜೋಡಿಸಲಿದ್ದಾರೆ. ಈ ಮೂಲಕ ಈ ಇಬ್ಬರ ಮೆಂಟರ್ ಆಗಿ ಕಾರ್ಯ ನಿರ್ವಹಿಸಲಿದ್ದೇನೆ ಎಂದು ಡಿವಿಲಿಯರ್ಸ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಎಬಿಡಿ, ಭಾರತವು ಹಲವು ವರ್ಷಗಳಿಂದ ನನಗೆ ಬಹಳಷ್ಟು ಪ್ರೀತಿ ನೀಡಿದೆ. ಈಗ ಅದರ ಋಣ ತೀರಿಸುವ ಸಮಯ. ಹೀಗಾಗಿ ಎನ್‌ಜಿಒ ಜೊತೆಗೂಡಿ ಇಬ್ಬರು ಮಕ್ಕಳಿಗೆ ಮಾರ್ಗದರ್ಶನ ನೀಡಲಿದ್ದೇನೆ ಎಂದು ತಿಳಿಸಿದ್ದಾರೆ. ಭಾರತ ಪ್ರಮುಖ ಸೇವಾ ಸಂಸ್ಥೆ ಮೇಕ್ ಎ ಡಿಫರೆನ್ಸ್ (ಎಂಎಡಿ) ಹಲವು ವರ್ಷಗಳಿಂದ ಬಡ ಮಕ್ಕಳ ಆರೈಕೆ, ರಕ್ಷಣೆ, ವಿದ್ಯಾಭ್ಯಾಸಗಳನ್ನು ನೀಡುತ್ತಾ ಬರುತ್ತಿದೆ. ಇದೀಗ ಇಂತಹದೊಂದು ಸಂಸ್ಥೆಯೊಂದಿಗೆ ಆರ್ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಕೈ ಜೋಡಿಸುವ ಮೂಲಕ ಸೇವಾ ಮನೋಭಾವ ಮೆರೆದಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ 11 ವರ್ಷಗಳ ಕಾಲ ಆಡಿದ್ದ ಎಬಿಡಿ ಹಲವು ಬಾರಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. ಅಲ್ಲದೆ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಒಟ್ಟು 184 ಪಂದ್ಯಗಳಿಂದ ಒಟ್ಟು 5162 ರನ್ ಕಲೆಹಾಕಿದ್ದರು. ಈ ವೇಳೆ 3 ಭರ್ಜರಿ ಶತಕಗಳು, 40 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಅಲ್ಲದೆ ಆರ್ಸಿಬಿ ಪರ ಅತೀ ಹೆಚ್ಚು ಪಂದ್ಯವಾಡಿದ ಹಾಗೂ ಅತೀ ಹೆಚ್ಚು ಕಾಲ ಆಡಿದ ವಿದೇಶಿ ಆಟಗಾರ ಎಂಬ ದಾಖಲೆ ಕೂಡ ಎಬಿಡಿ ಹೆಸರಿನಲ್ಲಿದೆ.




