IND vs PAK: ಕೊಹ್ಲಿಯಲ್ಲ, ಈತನೇ ಡೇಂಜರಸ್…ಪಾಕ್ ತಂಡಕ್ಕೆ ಮಾಜಿ ನಾಯಕ ಎಚ್ಚರಿಕೆ
Asia Cup 2022: ಈ ಹಿಂದೆ ಸೂರ್ಯಕುಮಾರ್ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುವಾಗ ನಾನು ಅವರನ್ನು ಗಮನಿಸಿದ್ದೆ. ಅಂದು ನಂ. 7 ಮತ್ತು 8 ರಲ್ಲಿ ಬ್ಯಾಟಿಂಗ್‌ನಲ್ಲಿ ಒಂದೆರಡು ಪಂದ್ಯಗಳನ್ನು ಆಡಿದ್ದರು.

ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿರುವ ಏಷ್ಯಾಕಪ್ (Asia Cup 2022) ಆಗಸ್ಟ್ 27 ರಿಂದ ಶುರುವಾಗಲಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ್ ಮುಖಾಮುಖಿಯಾದರೆ, ಆಗಸ್ಟ್ 28 ರಂದು ನಡೆಯಲಿರುವ 2ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ್ (India vs Pakistan) ಸೆಣಸಲಿದೆ. ಅತ್ತ 2021 ರ ಟಿ20 ವಿಶ್ವಕಪ್ನಲ್ಲಿ ಭಾರತದ ವಿರುದ್ದ ಪಾಕಿಸ್ತಾನ್ ಭರ್ಜರಿ ಜಯ ಸಾಧಿಸಿರುವ ಕಾರಣ, ಈ ಬಾರಿ ಯಾರು ಗೆಲ್ಲಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಇನ್ನೊಂದೆಡೆ ಕಳೆದ ಬಾರಿಯ ಗೆಲುವಿನಿಂದ ಬೀಗುತ್ತಿರುವ ಪಾಕ್ ತಂಡಕ್ಕೆ ಮಾಜಿ ನಾಯಕ ವಾಸಿಂ ಅಕ್ರಮ್ ಎಚ್ಚರಿಕೆಯೊಂದನ್ನು ರವಾನಿಸಿದ್ದಾರೆ. ಅದು ಕೂಡ ಬ್ಯಾಟ್ಸ್ಮನ್ವೊಬ್ಬರ ಬಗ್ಗೆ ಎಚ್ಚರಿಕೆಯಿಂದಿರಿ ಎಂಬ ಸಂದೇಶದ ಮೂಲಕ ಎಂಬುದು ವಿಶೇಷ.
ಆದರೆ ವಾಸಿಂ ಅಕ್ರಮ್ ಇಲ್ಲಿ ಉಲ್ಲೇಖಿಸಿರುವುದು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಅಥವಾ ಹಾರ್ದಿಕ್ ಪಾಂಡ್ಯ ಅವರ ಹೆಸರನ್ನಲ್ಲ. ಬದಲಾಗಿ ಸೂರ್ಯಕುಮಾರ್ ಯಾದವ್ ಅವರನ್ನು ಎಂಬುದೇ ವಿಶೇಷ. ಅಂದರೆ ಪಾಕ್ ಪಾಲಿಗೆ ಸೂರ್ಯಕುಮಾರ್ ಅವರ ವಿಕೆಟ್ ನಿರ್ಣಾಯಕವಾಗಿರಲಿದೆ. ಅವರು ವಿರಾಟ್ ಕೊಹ್ಲಿಗಿಂತ ಡೇಂಜರಸ್ ಬ್ಯಾಟ್ಸ್ಮನ್ ಆಗಿ ಕಾಣಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎಂದು ವಾಸಿಂ ಅಕ್ರಮ್ ತಿಳಿಸಿದ್ದಾರೆ.
23 ಟಿ20 ಪಂದ್ಯಗಳನ್ನು ಆಡಿರುವ ಸೂರ್ಯಕುಮಾರ್ ಐದು ಅರ್ಧಶತಕಗಳೊಂದಿಗೆ 672 ರನ್ಗಳನ್ನು ಸಿಡಿಸಿದ್ದಾರೆ. ಅಲ್ಲದೆ ಕೆಲವೇ ಪಂದ್ಯಗಳ ಮೂಲಕ ಇದೀಗ ಐಸಿಸಿ ಟಿ20 ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ 2ನೇ ಶ್ರೇಯಾಂಕದಲ್ಲಿದ್ದಾರೆ. ಈ ಎಲ್ಲಾ ಕಾರಣಗಳಿಂದ ಸೂರ್ಯಕುಮಾರ್ ಟೀಮ್ ಇಂಡಿಯಾ ಪಾಲಿಗೆ ಟ್ರಂಪ್ ಕಾರ್ಡ್ ಆಗಲಿದ್ದಾರೆ.
ಇದನ್ನೇ ಪ್ರಸ್ತಾಪಿಸಿರುವ ಪಾಕ್ ಮಾಜಿ ನಾಯಕ ಅಕ್ರಮ್, ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ ಅವರಂತಹ ಬ್ಯಾಟ್ಸ್ಮನ್ಗಳಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ನನ್ನ ನೆಚ್ಚಿನ ಆಟಗಾರನೆಂದರೆ ಸೂರ್ಯಕುಮಾರ್ ಯಾದವ್. ಅವರು ಚುಟುಕು ಕ್ರಿಕೆಟ್ ಸ್ವರೂಪದಲ್ಲಿ ಅಸಾಧಾರಣವಾಗಿ ಬ್ಯಾಟ್ ಬೀಸುತ್ತಿದ್ದಾರೆ.
ಈ ಹಿಂದೆ ಸೂರ್ಯಕುಮಾರ್ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುವಾಗ ನಾನು ಅವರನ್ನು ಗಮನಿಸಿದ್ದೆ. ಅಂದು ನಂ. 7 ಮತ್ತು 8 ರಲ್ಲಿ ಬ್ಯಾಟಿಂಗ್‌ನಲ್ಲಿ ಒಂದೆರಡು ಪಂದ್ಯಗಳನ್ನು ಆಡಿದ್ದ ಅವರು ತನ್ನ ಬ್ಯಾಟ್‌ನ ಮಧ್ಯದಿಂದ ಫೈನ್ ಲೆಗ್‌ಗೆ ಬಾರಿಸುತ್ತಿದ್ದರು. ನಿಜವಾಗಿಯೂ ಇದು ಅಸಾಮಾನ್ಯ ಮತ್ತು ಕಷ್ಟಕರವಾದ ಶಾಟ್ಗಳಾಗಿತ್ತು ಎಂದು ವಾಸಿಂ ಅಕ್ರಮ್ ತಿಳಿಸಿದರು.
ಇದೀಗ ಭರ್ಜರಿ ಫಾರ್ಮ್ನಲ್ಲಿರುವ ಸೂರ್ಯಕುಮಾರ್ ಪಾಕ್ ಪಾಲಿಗೆ ಕಂಟಕವಾಗಬಹುದು. ಹೀಗಾಗಿಯೇ ಭಾರತ-ಪಾಕಿಸ್ತಾನ್ ನಡುವಣ ಪಂದ್ಯದಲ್ಲಿ ಸೂರ್ಯಕುಮಾರ್ ವಿಕೆಟ್ ಪಾಕಿಸ್ತಾನ್ ತಂಡಕ್ಕೆ ನಿರ್ಣಾಯಕ ಎಂದು ಭಾವಿಸುತ್ತೇನೆ. ಏಕೆಂದರೆ ಆತ ಅಪಾಯಕಾರಿ ಬ್ಯಾಟ್ಸ್ಮನ್. ಹಾಗಾಗಿ ವಿರಾಟ್ ಕೊಹ್ಲಿಗಿಂತ ಪಾಕ್ ತಂಡವನ್ನು ಹೆಚ್ಚು ಕಾಡುವ ಸಾಮರ್ಥ್ಯ ಸೂರ್ಯಕುಮಾರ್ ಯಾದವ್ಗಿದೆ ಎಂದು ವಾಸಿಂ ಅಕ್ರಮ್ ಬಾಬರ್ ಆಜಂ ಪಡೆಗೆ ಎಚ್ಚರಿಕೆ ರವಾನಿಸಿದ್ದಾರೆ.
ಏಷ್ಯಾಕಪ್ಗಾಗಿ ಉಭಯ ತಂಡಗಳು ಹೀಗಿವೆ:
ಪಾಕಿಸ್ತಾನ್ ತಂಡ ಹೀಗಿದೆ: ಬಾಬರ್ ಆಜಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್, ವಾಸಿಮ್ ಜೂನಿಯರ್, ನಸೀಮ್ ಶಾ, ಶಾನವಾಜ್ ದಹಾನಿ, ಉಸ್ಮಾನ್ ಖಾದಿರ್, ಮೊಹಮ್ಮದ್ ಹಸ್ನೈನ್
ಟೀಮ್ ಇಂಡಿಯಾ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
ಮೀಸಲು ಆಟಗಾರರು: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್ ಹಾಗೂ ದೀಪಕ್ ಚಹರ್.




