Asia Cup 2022: ಕ್ರಿಕೆಟ್ ಇತಿಹಾಸದ ಕಳಪೆ ದಾಖಲೆ: ಒಂದೇ ಓವರ್ನಲ್ಲಿ 17 ಎಸೆತ ಎಸೆದ ವೇಗಿ
Asia Cup 2022: ಕಳೆದ ಹದಿನಾಲ್ಕು ಸೀಸನ್ ಏಷ್ಯಾಕಪ್ನಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿವೆ. ಹಲವುಗಳಲ್ಲಿ ಕೆಲವು ಭರ್ಜರಿ ದಾಖಲೆಗಳಾದರೆ, ಇನ್ನು ಕೆಲವು ಅತ್ಯಂತ ಕಳಪೆ ದಾಖಲೆಗಳು.

15ನೇ ಸೀಸನ್ ಏಷ್ಯಾಕಪ್ಗಾಗಿ ದಿನಗಣನೆ ಶುರುವಾಗಿದೆ. ಈಗಾಗಲೇ ಭಾರತ, ಪಾಕಿಸ್ತಾನ್ ಆಟಗಾರರು ಯುಎಇಗೆ ಪ್ರಯಾಣ ಬೆಳೆಸಿದ್ದಾರೆ. ಅದರಂತೆ ಆಗಸ್ಟ್ 27 ರಿಂದ ಶುರುವಾಗಲಿರುವ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಆಗಸ್ಟ್ 28 ರಂದು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿರುವ ಭಾರತ-ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಹಾಗೆಯೇ ಸೆಪ್ಟೆಂಬರ್ 11 ರಂದು ಏಷ್ಯಾಕಪ್ ಫೈನಲ್ ಪಂದ್ಯ ಜರುಗಲಿದೆ.
ಇನ್ನು ಕಳೆದ ಹದಿನಾಲ್ಕು ಸೀಸನ್ ಏಷ್ಯಾಕಪ್ನಲ್ಲಿ ಹಲವು ದಾಖಲೆಗಳು ನಿರ್ಮಾಣವಾಗಿವೆ. ಹಲವುಗಳಲ್ಲಿ ಕೆಲವು ಭರ್ಜರಿ ದಾಖಲೆಗಳಾದರೆ, ಇನ್ನು ಕೆಲವು ಅತ್ಯಂತ ಕಳಪೆ ದಾಖಲೆಗಳು. ಅಂತಹದೊಂದು ಕಳಪೆ ದಾಖಲೆ ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಸಮಿ ಹೆಸರಿನಲ್ಲಿದೆ.
ಆ ದಾಖಲೆ ಎಂದರೆ ಅತ್ಯಂತ ದೀರ್ಘಾವಧಿಯ ಓವರ್. ಅಂದರೆ ಒಂದೇ ಓವರ್ನಲ್ಲಿ ಸಮಿ ಬರೋಬ್ಬರಿ 17 ಎಸೆತಗಳನ್ನು ಎಸೆದಿದ್ದರು. 2004 ರಲ್ಲಿ ನಡೆದ ಏಷ್ಯಾಕಪ್ ಬಾಂಗ್ಲಾದೇಶ್ ವಿರುದ್ದದ ಪಂದ್ಯದಲ್ಲಿ ಈ ಹೀನಾಯ ದಾಖಲೆ ನಿರ್ಮಾಣವಾಗಿತ್ತು. ಬಾಂಗ್ಲಾ ವಿರುದ್ದ ಬೌಲಿಂಗ್ ಮಾಡಿದ್ದ ಮೊಹಮ್ಮದ್ ಸಮಿ ಮೊದಲ ಬಾಲ್ ನೋಬಾಲ್ ಎಸೆದಿದ್ದರು. ಆ ಬಳಿಕ ವೈಡ್ ಎಸೆದರು. ಇದಾದ ಬಳಿಕ ಒಂದು ರನ್ ನೀಡಿದರು.
ಆ ಬಳಿಕ ಮತ್ತೆ ನೋ ಬಾಲ್ ಎಸೆದರು. ಇದರ ನಂತರ ಬ್ಯಾಕ್ ಟು ಬ್ಯಾಕ್ 2 ವೈಡ್ ಎಸೆದರು. ಆ ನಂತರ ಒಂದು ಡಾಟ್ ಬಾಲ್ ಮಾಡಿದರು. ಎಲ್ಲರೂ ಸಮಿ ಲಯಕ್ಕೆ ಮರಳಿದರೂ ಅಂದುಕೊಳ್ಳುವಷ್ಟರಲ್ಲಿ ಮತ್ತೆ ನೋ ಬಾಲ್ ಎಸೆದರು. ಇದಾದ ಬಳಿಕ ವೈಡ್ ಬಾಲ್ ಮಾಡಿದರು. ಹೀಗೆ ಅಂದು 7 ವೈಡ್ಗಳು ಹಾಗೂ ನಾಲ್ಕು ನೋಬಾಲ್ಗಳನ್ನು ಹೆಚ್ಚುವರಿಯಾಗಿ ನೀಡಿದ ಸಮಿ ಒಟ್ಟು 17 ಎಸೆತಗಳನ್ನು ಎಸೆದರು. ಅಲ್ಲದೆ 22 ರನ್ ನೀಡುವ ಮೂಲಕ ದುಬಾರಿ ಬೌಲರ್ ಎನಿಸಿಕೊಂಡರು.
ವಿಶೇಷ ಎಂದರೆ ಇದು ಏಷ್ಯಾಕಪ್ನಲ್ಲಿ ಮಾತ್ರವಲ್ಲದೆ, ಏಕದಿನ ಕ್ರಿಕೆಟ್ ಇತಿಹಾಸದ ಅತ್ಯಂತ ದೀರ್ಘಾವಧಿಯ ಓವರ್ ಕೂಡ ಆಗಿದೆ. ಇದೀಗ 15ನೇ ಸೀಸನ್ ಏಷ್ಯಾಕಪ್ ಬೆನ್ನಲ್ಲೇ 18 ವರ್ಷಗಳ ಹಳೆಯ ಮೊಹಮ್ಮದ್ ಸಮಿ ಅವರ 17 ಎಸೆತಗಳ ಓವರ್ನ ಕಳಪೆ ದಾಖಲೆ ಮತ್ತೆ ಮುನ್ನೆಲೆಗೆ ಬಂದಿದೆ.




