
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 14ನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ಶಿವಮೊಗ್ಗ ಲಯನ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಹುಬ್ಬಳ್ಳಿ ಟೈಗರ್ಸ್ ಮೊದಲು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು.
ಅದರಂತೆ ಮೊದಲ ಇನಿಂಗ್ಸ್ನಲ್ಲಿ ಬ್ಯಾಟ್ ಬೀಸಿದ ಶಿವಮೊಗ್ಗ ಲಯನ್ಸ್ ತಂಡವು ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಆಟಗಾರ ನಿಹಾಲ್ ಉಳ್ಳಾಲ್ (3) ರನೌಟ್ ಆದರೆ, ರೋಹನ್ ಕದಮ್ (14) ಕೆಸಿ ಕಾರ್ಯಪ್ಪ ಎಸೆತದಲ್ಲಿ ಔಟಾದರು.
ಇನ್ನು ರೋಹನ್ ನವೀನ್ 18 ರನ್ಗಳಿಸಿದರೆ, ರೋಹಿತ್ ಕುಮಾರ್ 3 ರನ್ ಬಾರಿಸಿ ಮನ್ವಂತ್ ಕುಮಾರ್ಗೆ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ಶ್ರೇಯಸ್ ಗೋಪಾಲ್ (10) ಐದನೇ ವಿಕೆಟ್ ಆಗಿ ನಿರ್ಗಮಿಸಿದರೆ, ಇದರ ಬೆನ್ನಲ್ಲೇ ಕ್ರಾಂತಿ ಕುಮಾರ್ ಶೂನ್ಯಕ್ಕೆ ಔಟಾದರು.
ಈ ಹಂತದಲ್ಲಿ ಕಣಕ್ಕಿಳಿದ ಅಭಿನವ್ ಮನೋಹರ್ (10) ಅವರನ್ನು ಮನ್ವಂತ್ ಕುಮಾರ್ ಪೆವಿಲಿಯನ್ಗೆ ಕಳುಹಿಸಿದರು. ಆದರೆ 8ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಪ್ರಣವ್ ಭಾಟಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
ಹುಬ್ಬಳ್ಳಿ ಟೈಗರ್ಸ್ ಬೌಲರ್ಗಳ ವಿರುದ್ಧ ಅಬ್ಬರಿಸಿದ ಪ್ರಣವ್ ಭಾಟಿಯಾ 4 ಭರ್ಜರಿ ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 30 ಎಸೆತಗಳಲ್ಲಿ ಅಜೇಯ 46 ರನ್ ಸಿಡಿಸಿದರು. ಈ ಅಮೂಲ್ಯ ಕಾಣಿಕೆಯೊಂದಿಗೆ ಶಿವಮೊಗ್ಗ ಲಯನ್ಸ್ ತಂಡವು 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 138 ರನ್ ಕಲೆಹಾಕಿತು.
139 ರನ್ಗಳ ಸುಲಭ ಗುರಿ ಬೆನ್ನತ್ತಿದ ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ಲವ್ನೀತ್ ಸಿಸೋಡಿಯಾ ಹಾಗೂ ಮೊಹಮ್ಮದ್ ತಾಹ ಸ್ಪೋಟಕ ಆರಂಭ ಒದಗಿಸಿದ್ದರು. 9.4 ಓವರ್ಗಳಲ್ಲಿ 85 ರನ್ ಪೇರಿಸಿದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಶ್ರೇಯಸ್ ಗೋಪಾಲ್ ಯಶಸ್ವಿಯಾದರು.
37 ರನ್ಗಳಿಸಿ ತಾಹ ಔಟಾದರೂ, ಮತ್ತೊಂದೆಡೆ ಲವ್ನೀತ್ ಸಿಸೋಡಿಯಾ ಅಬ್ಬರ ಮುಂದುವರೆದಿತ್ತು. 46 ಎಸೆತಗಳನ್ನು ಎದುರಿಸಿದ ಸಿಸೋಡಿಯಾ 2 ಭರ್ಜರಿ ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ 69 ರನ್ ಚಚ್ಚಿ ವಿಕೆಟ್ ಒಪ್ಪಿಸಿದರು.
ಇನ್ನು ನಾಗ ಭರತ್ ಅಜೇಯ 23 ಹಾಗೂ ಕೃಷ್ಣನ್ ಶ್ರೀಜಿತ್ ಅಜೇಯ 7 ರನ್ಗಳಿಸುವ ಮೂಲಕ 16.2 ಓವರ್ಗಳಲ್ಲಿ ತಂಡವನ್ನು 139 ರನ್ಗಳ ಗುರಿ ಮುಟ್ಟಿಸಿದರು. ಇದರೊಂದಿಗೆ ಹುಬ್ಬಳ್ಳಿ ಟೈಗರ್ಸ್ ತಂಡವು 8 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿತು.
ಈ ಬಾರಿಯ ಮಹಾರಾಜ ಟ್ರೋಫಿಯಲ್ಲಿ ಮನೀಶ್ ಪಾಂಡೆ ನಾಯಕತ್ವದ ಹುಬ್ಬಳ್ಳಿ ಟೈಗರ್ಸ್ ತಂಡವು ಭರ್ಜರಿ ಪ್ರದರ್ಶನ ನೀಡುತ್ತಿದೆ. ಇದುವರೆಗೆ ಆಡಿದ 5 ಪಂದ್ಯಗಳಲ್ಲೂ ಗೆಲುವು ದಾಖಲಿಸುವ ಮೂಲಕ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಇನ್ನು ಐದು ಪಂದ್ಯಗಳಲ್ಲಿ 3 ಜಯಗಳಿಸಿರುವ ಮೈಸೂರು ವಾರಿಯರ್ಸ್ ತಂಡ 2ನೇ ಸ್ಥಾನದಲ್ಲಿದೆ.