ಭಾರತದ ವಿರುದ್ಧದ 4ನೇ ಪಂದ್ಯಕ್ಕೂ ಮುನ್ನ 3 ವೇಗಿಗಳು ಔಟ್!
ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಐದು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯವು ನಾಳೆ (ಅಕ್ಟೋಬರ್ 30) ಆಕ್ಲೆಂಡ್‌ನ ಈಡನ್ ಪಾರ್ಕ್ ಮೈದಾನದಲ್ಲಿ ಜರುಗಲಿದೆ. ಈ ಮಹತ್ವದ ಪಂದ್ಯಕ್ಕೂ ಮುನ್ನ ನ್ಯೂಝಿಲೆಂಡ್ ತಂಡದ ಮೂವರು ಪ್ರಮುಖ ವೇಗಿಗಳು ಅಲಭ್ಯರಾಗಿದ್ದಾರೆ. ಬಲಿಷ್ಠ ಬೌಲರ್‌ಗಳ ಕೊರತೆಯಿಂದ ಕಿವೀಸ್ ಪಡೆ ಕಂಗಾಲಾಗಿದ್ದು, ನಾಳಿನ ಪಂದ್ಯದಲ್ಲೂ ಟೀಮ್ ಇಂಡಿಯಾ ಬ್ಯಾಟರ್‌ಗಳಿಂದ ಪ್ರಚಂಡ ಬ್ಯಾಟಿಂಗ್ ಪ್ರದರ್ಶನವನ್ನು ನಿರೀಕ್ಷಿಸಬಹುದಾಗಿದೆ.

ಟೀಮ್ ಇಂಡಿಯಾ ವಿರುದ್ಧ ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆಯಲಿರುವ 4ನೇ ಟಿ20 ಪಂದ್ಯಕ್ಕೂ ಮುನ್ನ ಆತಿಥೇಯ ನ್ಯೂಝಿಲೆಂಡ್ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ಬ್ಲ್ಯಾಕ್‌ಕ್ಯಾಪ್ಸ್ ಪಡೆಯ ಇಬ್ಬರು ಪ್ರಮುಖ ವೇಗದ ಬೌಲರ್ಗಳು ಗಾಯದ ಕಾರಣದಿಂದ ಮುಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದರೆ, ಮತ್ತೊರ್ವ ಸ್ಟಾರ್ ವೇಗಿ ಕಾರ್ಯಭಾರ ನಿರ್ವಹಣೆಗಾಗಿ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಹೀಗೆ ನಾಲ್ಕನೇ ಮ್ಯಾಚ್ಗೂ ಹೊರಗುಳಿದಿರುವ ಪ್ರಮುಖ ವೇಗಿಗಳ ಪಟ್ಟಿ ಈ ಕೆಳಗಿನಂತಿದೆ…
ಲಾಕಿ ಫರ್ಗುಸನ್ : ಎರಡನೇ ಟಿ20 ಪಂದ್ಯದ ವೇಳೆ ಬಲಗಾಲಿನ ಸ್ನಾಯು ಗಾಯಕ್ಕೆ ಒಳಗಾಗಿದ್ದ ಲಾಕಿ ಫರ್ಗುಸನ್, ಸರಣಿಯ ಉಳಿದ ಪಂದ್ಯಗಳಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಅವರಿಗೆ ಕನಿಷ್ಠ ಒಂದು ವಾರ ವಿಶ್ರಾಂತಿ ಅಗತ್ಯವಿದೆ.
ಮ್ಯಾಟ್ ಹೆನ್ರಿ: ಕಿವೀಸ್ ಪಡೆಯ ಪ್ರಮುಖ ವೇಗಿ ಮ್ಯಾಟ್ ಹೆನ್ರಿ ಕೂಡ ಎರಡನೇ ಪಂದ್ಯದಲ್ಲೇ ತೊಡೆಯ ಸ್ನಾಯು ಸೆಳೆತದ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಹೀಗಾಗಿ ಅವರು ಸಹ ಮುಂದಿನ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.
ಕೈಲ್ ಜೇಮಿಸನ್: ನ್ಯೂಝಿಲೆಂಡ್ ತಂಡದ ಅನುಭವಿ ಜೇಮಿಸನ್ ಅವರಿಗೆ ಯಾವುದೇ ಗಾಯವಾಗಿಲ್ಲ. ಆದರೆ ಮುಂಬರುವ ಏಕದಿನ ಸರಣಿಯ ದೃಷ್ಟಿಯಿಂದ ಹಾಗೂ ಕಾರ್ಯಭಾರ ನಿರ್ವಹಣೆಗಾಗಿ ಟಿ20 ಸರಣಿಯಿಂದ ಹೊರಗುಳಿದಿದ್ದಾರೆ.
ಇದನ್ನೂ ಓದಿ: ಹೊಸ ಚರಿತ್ರೆ… RCB ಅಲ್ಲ, ಮುಂಬೈ ಇಂಡಿಯನ್ಸ್ ನಂಬರ್ 1
ನ್ಯೂಝಿಲೆಂಡ್ ಟಿ20 ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಡೆವೊನ್ ಕಾನ್ವೇ, ಜೇಕಬ್ ಡಫಿ, ಜ್ಯಾಕ್ ಫೌಲ್ಕ್ಸ್, ಬೆವನ್ ಜೇಕಬ್ಸ್, ಆ್ಯಡಮ್ ಮಿಲ್ನ್, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಟಿಮ್ ಸೈಫರ್ಟ್, ಬ್ಲೇರ್ ಟಿಕ್ನರ್, ನಾಥನ್ ಸ್ಮಿತ್, ಮ್ಯಾಟ್ ಫಿಶರ್.
ಸರಣಿ ಸೋತ ಕಿವೀಸ್ ಪಡೆ:
ಭಾರತ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು ನ್ಯೂಝಿಲೆಂಡ್ ತಂಡವು ಈಗಾಗಲೇ ಕೈಚೆಲ್ಲಿದೆ. ಮೊದಲ ಎರಡು ಪಂದ್ಯಗಳಲ್ಲಿ ತಲಾ 4 ವಿಕೆಟ್‌ಗಳ ಗೆಲುವು ದಾಖಲಿಸಿದ್ದ ಟೀಮ್ ಇಂಡಿಯಾ, ಮೂರನೇ ಪಂದ್ಯದಲ್ಲೂ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಇದೀಗ ಇನ್ನುಳಿದ 4ನೇ ಮತ್ತು 5ನೇ ಪಂದ್ಯಗಳನ್ನೂ ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಇರಾದೆಯಲ್ಲಿದೆ ಭಾರತ.
ಅತ್ತ ವೈಟ್ ವಾಶ್ ಮುಖಭಂಗದಿಂದ ತಪ್ಪಿಸಿಕೊಳ್ಳಲು ಕಿವೀಸ್ ಪಡೆ ಕೊನೆಯ ಎರಡು ಪಂದ್ಯಗಳಲ್ಲಿ ಹೇಗಾದರೂ ಮಾಡಿ ಗೆಲುವು ದಾಖಲಿಸುವ ಹಂಬಲದಲ್ಲಿದೆ. ಹೀಗಾಗಿ ಮುಂಬರುವ ಎರಡೂ ಪಂದ್ಯಗಳಲ್ಲಿ ತೀವ್ರ ಪೈಪೋಟಿಯನ್ನು ನಿರೀಕ್ಷಿಸಬಹುದು.




