ಬಂಗಾಳ ಸರ್ಕಾರದ ಬಂಗಾರದಂತ ನಿರ್ಧಾರ; ಹೊಸ ಕ್ರಿಕೆಟ್ ಕ್ರೀಡಾಂಗಣಕ್ಕೆ ರಿಚಾ ಘೋಷ್ ಹೆಸರು

Richa Ghosh Honored: ಭಾರತ ಮಹಿಳಾ ಕ್ರಿಕೆಟ್ ತಂಡ 2025ರ ವಿಶ್ವಕಪ್ ಗೆದ್ದು ಇತಿಹಾಸ ಸೃಷ್ಟಿಸಿದೆ. ಈ ಗೆಲುವಿನ ಭಾಗವಾಗಿದ್ದ ವಿಕೆಟ್‌ಕೀಪರ್ ರಿಚಾ ಘೋಷ್‌ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಶೇಷ ಗೌರವ ಸಲ್ಲಿಸಿದ್ದಾರೆ. ಡಾರ್ಜಿಲಿಂಗ್‌ನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಕ್ರಿಕೆಟ್ ಕ್ರೀಡಾಂಗಣಕ್ಕೆ ರಿಚಾ ಘೋಷ್ ಹೆಸರಿಡಲು ನಿರ್ಧರಿಸಲಾಗಿದೆ. ಇದು ರಿಚಾ ಅವರ ಸಾಧನೆಯನ್ನು ಗುರುತಿಸುವುದಲ್ಲದೆ, ಯುವ ಆಟಗಾರರಿಗೆ ಪ್ರೇರಣೆ ನೀಡಲಿದೆ.

ಬಂಗಾಳ ಸರ್ಕಾರದ ಬಂಗಾರದಂತ ನಿರ್ಧಾರ; ಹೊಸ ಕ್ರಿಕೆಟ್ ಕ್ರೀಡಾಂಗಣಕ್ಕೆ ರಿಚಾ ಘೋಷ್ ಹೆಸರು
Richa Ghosh

Updated on: Nov 10, 2025 | 10:29 PM

ಭಾರತೀಯ ಮಹಿಳಾ ತಂಡ ಇತ್ತೀಚೆಗೆ ನಡೆದಿದ್ದ 2025 ರ ಮಹಿಳಾ ವಿಶ್ವಕಪ್ (Women’s World Cup 2025)​ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 52 ರನ್​ಗಳಿಂದ ಮಣಿಸಿ ಐತಿಹಾಸಿಕ ಗೆಲುವು ದಾಖಲಿಸಿತ್ತು. ಭಾರತ ಮಹಿಳಾ ತಂಡದ ಈ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜೊತೆಗೆ ಆಟಗಾರ್ತಿಯರ ಮೇಲೆ ಪ್ರಶಸ್ತಿಗಳ ಸುರಿಮಳೆಯೇ ಹರಿದು ಬರುತ್ತಿದೆ. ಏತನ್ಮಧ್ಯೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದು, ಡಾರ್ಜಿಲಿಂಗ್‌ನಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಕ್ರಿಕೆಟ್ ಕ್ರೀಡಾಂಗಣಕ್ಕೆ 2025 ರ ಮಹಿಳಾ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ವಿಕೆಟ್​ಕೀಪರ್ ಬ್ಯಾಟರ್ ರಿಚಾ ಘೋಷ್ (Richa Ghosh) ಅವರ ಹೆಸರಿಡಲು ನಿರ್ಧರಿಸಿದ್ದಾರೆ.

ಹೊಸ ಕ್ರೀಡಾಂಗಣಕ್ಕೆ ರಿಚಾ ಘೋಷ್ ಹೆಸರು

ಡಾರ್ಜಿಲಿಂಗ್‌ನಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಕ್ರಿಕೆಟ್ ಕ್ರೀಡಾಂಗಣಕ್ಕೆ 2025 ರ ಮಹಿಳಾ ವಿಶ್ವಕಪ್ ವಿಜೇತೆ ರಿಚಾ ಘೋಷ್ ಅವರ ಹೆಸರನ್ನು ಇಡಲಾಗುವುದು ಎಂದು ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಈ ಕ್ರಮವು ರಿಚಾ ಅವರನ್ನು ಗೌರವಿಸುವುದಲ್ಲದೆ, ಯುವ ಆಟಗಾರರಿಗೂ ಸ್ಫೂರ್ತಿ ನೀಡುತ್ತದೆ. ರಿಚಾ ಘೋಷ್ ಸಿಲಿಗುರಿಯವರಾಗಿದ್ದು, ಡಾರ್ಜಿಲಿಂಗ್‌ನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಕೇವಲ 22 ವರ್ಷ ವಯಸ್ಸಿನಲ್ಲಿ, ಅವರು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಸದಸ್ಯರಾಗಿದ್ದು, ಈ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ್ದರು.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಮಮತಾ ಬ್ಯಾನರ್ಜಿ, ‘ರಿಚಾ ಕೇವಲ 22 ವರ್ಷ ವಯಸ್ಸಿನಲ್ಲಿ ವಿಶ್ವ ಚಾಂಪಿಯನ್ ಆಗುವ ಮೂಲಕ ಇತಿಹಾಸ ನಿರ್ಮಿಸಿದರು. ಪಶ್ಚಿಮ ಬಂಗಾಳದ ಪರವಾಗಿ ನಾವು ಅವರನ್ನು ಗೌರವಿಸಿದ್ದೇವೆ. ಆದರೀಗ ನಾನು ಅದಕ್ಕಿಂತ ಹೆಚ್ಚಿನದನ್ನು ಮಾಡಲು ಬಯಸುತ್ತೇನೆ. ಡಾರ್ಜಿಲಿಂಗ್‌ನಲ್ಲಿ 27 ಎಕರೆ ಭೂಮಿ ಇದ್ದು, ಅಲ್ಲಿ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸಲು ಯೋಜನೆಯನ್ನು ಅಭಿವೃದ್ಧಿಪಡಿಸಲು ನಾನು ಮೇಯರ್ ಅವರನ್ನು ಕೇಳಿದ್ದೇನೆ. ಅಲ್ಲದೆ ಜನರು ರಿಚಾ ಅವರ ಹೆಸರನ್ನು ನೆನಪಿಸಿಕೊಳ್ಳುವಂತೆ ಮತ್ತು ಭವಿಷ್ಯದ ಪೀಳಿಗೆಗಳು ಅದರಿಂದ ಸ್ಫೂರ್ತಿ ಪಡೆಯುವಂತೆ ಮಾಡಲು ನೂತನ ಕ್ರೀಡಾಂಗಣಕ್ಕೆ ರಿಚಾ ಕ್ರಿಕೆಟ್ ಕ್ರೀಡಾಂಗಣ ಎಂದು ಹೆಸರಿಡಲು ಸೂಚಿಸಿದ್ದೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Womens World Cup 2025: ಅತಿ ಹೆಚ್ಚು ವೀಕ್ಷಣೆ; ಇತಿಹಾಸ ಸೃಷ್ಟಿಸಿದ ಮಹಿಳಾ ವಿಶ್ವಕಪ್

ರಿಚಾ ಘೋಷ್ ಮೇಲೆ ಪ್ರಶಸ್ತಿಗಳ ಸುರಿಮಳೆ

ಭಾರತ ಮಹಿಳಾ ತಂಡದ ವಿಕೆಟ್ ಕೀಪರ್-ಬ್ಯಾಟರ್ ರಿಚಾ ಘೋಷ್ ಶುಕ್ರವಾರ ತಮ್ಮ ತವರು ಸಿಲಿಗುರಿಗೆ ಆಗಮಿಸಿದಾಗ ಅವರಿಗೆ ಭವ್ಯ ಸ್ವಾಗತ ದೊರೆಯಿತು. ಇದರ ನಂತರ, ನವೆಂಬರ್ 8 ರಂದು, ಪಶ್ಚಿಮ ಬಂಗಾಳ ಸರ್ಕಾರ ಮತ್ತು ಬಂಗಾಳ ಕ್ರಿಕೆಟ್ ಸಂಘ ವಿಶೇಷ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಿ ಬಹುಮಾನ ನೀಡಿತು. CAB ಅಧ್ಯಕ್ಷ ಸೌರವ್ ಗಂಗೂಲಿ ಸಂಘದ ಪರವಾಗಿ ರಿಚಾಗೆ 3.4 ಕೋಟಿ ರೂ. ಬಹುಮಾನವನ್ನು ನೀಡಿದ್ದರು. ಹಾಗೆಯೇ ರಿಚಾ ಅವರಿಗೆ ಡಿಎಸ್‌ಪಿ ಹುದ್ದೆಯನ್ನು ನೀಡಲಾಗಿತ್ತು. ಇದರ ಜೊತೆಗೆ ರಾಜ್ಯದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಬಂಗ ಭೂಷಣವನ್ನು ಸಹ ಪ್ರದಾನ ಮಾಡಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ