ಗಂಭೀರ್ ಒಬ್ಬ ಕಪಟಿ; ಸಂಚಲನ ಸೃಷ್ಟಿಸಿದ ಮಾಜಿ ಟೀಂ ಇಂಡಿಯಾ ಆಟಗಾರನ ಹೇಳಿಕೆ
Manoj Tiwari Slams Gautam Gambhir: ಭಾರತದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ, ಆಸ್ಟ್ರೇಲಿಯಾ ವಿರುದ್ಧದ ಸರಣಿ ಸೋಲಿಗೆ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರನ್ನು ಹೊಣೆಗಾರರೆಂದು ಆರೋಪಿಸಿದ್ದಾರೆ. ಗಂಭೀರ್ ಅವರ ಕೆಲಸದ ಶೈಲಿ ಮತ್ತು ರೋಹಿತ್ ಶರ್ಮಾ ಜೊತೆಗಿನ ಸಂಬಂಧವನ್ನು ಟೀಕಿಸಿದ ತಿವಾರಿ, ಗಂಭೀರ್ ಅವರನ್ನು "ದೋಗ್ಲಾ" ಎಂದೂ ಕರೆದಿದ್ದಾರೆ. ಕೋಚಿಂಗ್ ಸಿಬ್ಬಂದಿಯ ಆಯ್ಕೆ ಪ್ರಕ್ರಿಯೆ ಮತ್ತು ಹಿಂದಿನ ಯಶಸ್ಸಿನ ಕ್ರೆಡಿಟ್ ಹಂಚಿಕೆಯ ಬಗ್ಗೆಯೂ ಅವರು ಪ್ರಶ್ನೆ ಎತ್ತಿದ್ದಾರೆ.
ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ ತಂಡ ಹೀನಾಯ ಸೋಲನ್ನು ಎದುರಿಸಬೇಕಾಯಿತು. ರೋಹಿತ್ ಪಡೆ 1-3 ಅಂತರದಲ್ಲಿ ಸರಣಿ ಸೋಲುವುದರೊಂದಿಗೆ ಡಬ್ಲ್ಯುಟಿಸಿ ಫೈನಲ್ನಿಂದಲೂ ಹೊರಬಿದ್ದಿತು. ಇದೀಗ ಭಾರತದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಭಾರತದ ಈ ಪ್ರದರ್ಶನವನ್ನು ತೀವ್ರವಾಗಿ ಟೀಕಿಸಿದ್ದಾರೆ. ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ವಿರುದ್ಧ ಮಾತಿನ ದಾಳಿ ನಡೆಸಿ ಸೋಲಿಗೆ ಅವರೇ ಹೊಣೆ ಎಂದು ಆರೋಪಿಸಿದ್ದಾರೆ. ಅದರಲ್ಲೂ ಗಂಭೀರ್ ಅವರನ್ನು ‘ದೋಗ್ಲಾ’ ಎಂದು ಕರೆದು ಸಂಚಲನ ಮೂಡಿಸಿದ್ದಾರೆ. ಇದರ ಜೊತೆಗೆ ಗಂಭೀರ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಮನೋಜ್ ತಿವಾರಿ ವಾಗ್ದಾಳಿ
ಗೌತಮ್ ಗಂಭೀರ್ ಬಂದ 6 ತಿಂಗಳಲ್ಲಿ ಭಾರತ ತಂಡ ಹಲವು ಮುಜುಗರದ ಸೋಲುಗಳನ್ನು ಎದುರಿಸಿದೆ. ಮೊದಲು ಶ್ರೀಲಂಕಾ ವಿರುದ್ಧದ ಏಕದಿನ ಸರಣಿ, ನಂತರ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮತ್ತು ಇದೀಗ ಆಸ್ಟ್ರೇಲಿಯಾ ವಿರುದ್ಧದ ಇತ್ತೀಚಿನ ಸೋಲಿನ ನಂತರ ಮನೋಜ್ ತಿವಾರಿ, ಗಂಭೀರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗೌತಮ್ ಗಂಭೀರ್ ಒಬ್ಬ ಕಪಟಿ, ಅವರು ಹೇಳಿದ್ದನ್ನು ನಿಜವಾಗಿ ಮಾಡುವುದಿಲ್ಲ. ಟೆಸ್ಟ್ ಸರಣಿಯ ಸೋಲಿನ ನಂತರ ರೋಹಿತ್ ಶರ್ಮಾ ಅವರನ್ನು ಮಾತ್ರ ದೂರಲಾಗುತ್ತಿದೆ. ಆದರೆ ಮುಖ್ಯ ಕೋಚ್ ಕೂಡ ಈ ಸೋಲಿಗೆ ರೂವಾರಿಗಳು ಎಂದಿದ್ದಾರೆ.
ಗಂಭೀರ್ ಮಾತ್ರವಲ್ಲದೆ ತಂಡದ ಸಹಾಯಕ ಕೋಚಿಂಗ್ ಸಿಬ್ಬಂದಿಗಳ ವಿರುದ್ಧವೂ ಸಿಡಿದಿರುವ ಮನೋಜ್ ತಿವಾರಿ, ‘ಮುಖ್ಯ ಕೋಚ್ ಹೇಳಿದ್ದನ್ನೆಲ್ಲಾ ಒಪ್ಪಿಕೊಳ್ಳುವ ಇಂತಹ ಬೌಲಿಂಗ್ ಕೋಚ್ನಿಂದ ಏನು ಪ್ರಯೋಜನ. ಮೋರ್ನೆ ಮೊರ್ಕೆಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಬಂದವರು. ಗಂಭೀರ್ ಕೂಡ ಅದೇ ತಂಡದಲ್ಲಿದ್ದವರು. ಆ ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸೇರಿಕೊಂಡ ಗಂಭೀರ್, ಅಲ್ಲಿದ್ದ ಅಭಿಷೇಕ್ ನಾಯರ್ ಅವರನ್ನು ಇದೀಗ ಕೋಚಿಂಗ್ ಸಿಬ್ಬಂದಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಈ ಇಬ್ಬರೂ ತನ್ನ ವಿರುದ್ಧ ಹೋಗುವುದಿಲ್ಲ ಎಂಬ ಕಾರಣಕ್ಕೆ ಗಂಭೀರ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.
ಗಂಭೀರ್ ವಿರುದ್ಧ ಕ್ರೆಡಿಟ್ ಕದ್ದ ಆರೋಪ
ಇಲ್ಲಿಗೆ ನಿಲ್ಲದ ಮನೋಜ್ ತಿವಾರಿ ಅವರು ಗೌತಮ್ ಗಂಭೀರ್ ವಿರುದ್ಧ ಕ್ರೆಡಿಟ್ ಕದ್ದ ಆರೋಪ ಹೊರಿಸಿದ್ದಾರೆ. ವಾಸ್ತವವಾಗಿ ಈ ಹಿಂದೆ ಗಂಭೀರ್ ತಮ್ಮ ನಾಯಕತ್ವದಲ್ಲಿ ಕೆಕೆಆರ್ ತಂಡವನ್ನು ಚಾಂಪಿಯನ್ ಮಾಡಿದ್ದರು. ಈ ಗೆಲುವಿನ ಕ್ರೆಡಿಟ್ ಅನ್ನು ಗಂಭೀರ್ ಅವರಿಗೆ ನೀಡಲಾಗಿತ್ತು. ಈ ಬಗ್ಗೆ ಅಸಮಾಧಾನಗೊಂಡಿರುವ ಮನೋಜ್, ‘ಗಂಭೀರ್ ಮಾತ್ರ ಕೆಕೆಆರ್ ಐಪಿಎಲ್ ಗೆಲ್ಲುವಂತೆ ಮಾಡಲಿಲ್ಲ. ನಾವೆಲ್ಲ ಒಗ್ಗಟ್ಟಾಗಿ ಪ್ರದರ್ಶನ ನೀಡಿದಾಗ ಮಾತ್ರ ಪ್ರಶಸ್ತಿ ಗೆದ್ದೆವು. ಜಾಕ್ವೆಸ್ ಕಾಲಿಸ್, ಸುನಿಲ್ ನರೈನ್ ಮತ್ತು ನಾನು ಪ್ರಮುಖ ಕೊಡುಗೆಗಳನ್ನು ನೀಡಿದ್ದೆವು. ಆದರೆ ಅವರಿಗೆ ಮಾತ್ರ ಕ್ರೆಡಿಟ್ ಸಿಕ್ಕಿತು ಎಂದಿದ್ದಾರೆ.
ರೋಹಿತ್-ಗಂಭೀರ್ ನಡುವೆ ಭಿರುಕು
ರೋಹಿತ್ ಶರ್ಮಾ ಮತ್ತು ಗೌತಮ್ ಗಂಭೀರ್ ನಡುವೆ ಎಲ್ಲವೂ ಸರಿಯಾಗಿಲ್ಲ ಎಂದು ಮನೋಜ್ ತಿವಾರಿ ಅಭಿಪ್ರಾಯಪಟ್ಟಿದ್ದಾರೆ. ಇಬ್ಬರ ನಡುವಿನ ಮನಸ್ತಾಪದಿಂದಾಗಿ ತಂಡದ ವಾತಾವರಣ ಹದಗೆಟ್ಟಿದೆ. ಇಬ್ಬರ ಯಶಸ್ಸಿನಲ್ಲಿ ಯಾವುದೇ ಹೋಲಿಕೆ ಇಲ್ಲ. ರೋಹಿತ್ ವಿಶ್ವಕಪ್ ಗೆದ್ದ ನಾಯಕ, ಆದರೆ ಗಂಭೀರ್ ಯಶಸ್ಸು ಕೇವಲ ಐಪಿಎಲ್ ಪ್ರಶಸ್ತಿ ಗೆಲ್ಲುವುದಕ್ಕೆ ಸೀಮಿತವಾಗಿದೆ. ಈ ಕಾರಣಕ್ಕಾಗಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ತಿವಾರಿ ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:34 pm, Thu, 9 January 25