Asia Cup 2025: ಟೀಮ್ ಇಂಡಿಯಾ ಕುರಿತಾದ ಬಿಗ್ ಅಪ್​ಡೇಟ್

ಏಷ್ಯಾಕಪ್ ಟಿ20 ಟೂರ್ನಿಯು ಸೆಪ್ಟೆಂಬರ್ 9 ರಿಂದ ಶುರುವಾಗಲಿದೆ. ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ 2025ರ ಅಭಿಯಾನ ಆರಂಭಿಸಲಿದೆ. ಇನ್ನು ಭಾರತ ತಂಡವು ತನ್ನ ದ್ವಿತೀಯ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡವನ್ನು ಎದುರಿಸಲಿದೆ. ಈ ಮ್ಯಾಚ್ ಸೆಪ್ಟೆಂಬರ್ 14 ರಂದು ದುಬೈನಲ್ಲಿ ನಡೆಯಲಿದೆ. ಇದಾದ ಬಳಿಕ ಸೆಪ್ಟೆಂಬರ್ 19 ರಂದು ಭಾರತ ಮತ್ತು ಒಮಾನ್ ತಂಡಗಳು ಮುಖಾಮುಖಿಯಾಗಲಿದೆ.

Asia Cup 2025: ಟೀಮ್ ಇಂಡಿಯಾ ಕುರಿತಾದ ಬಿಗ್ ಅಪ್​ಡೇಟ್
Shubman Gill - Siraj

Updated on: Aug 18, 2025 | 7:26 AM

ಏಷ್ಯನ್ ರಾಷ್ಟ್ರಗಳ ಕ್ರಿಕೆಟ್ ಕದನ ಏಷ್ಯಾಕಪ್​ಗಾಗಿ ಈಗಾಗಲೇ ಪಾಕಿಸ್ತಾನ್ ಮತ್ತು ಅಫ್ಘಾನಿಸ್ತಾನ್ ತಮ್ಮ ತಂಡಗಳನ್ನು ಪ್ರಕಟಿಸಿದೆ. ಇತ್ತ ಭಾರತ ತಂಡವನ್ನು ಇದೇ ವಾರ ಘೋಷಿಸುವ ಸಾಧ್ಯತೆಯಿದೆ. ಅದಕ್ಕೂ ಮುನ್ನ ಟೀಮ್ ಇಂಡಿಯಾ ಕುರಿತಾದ ಬಿಗ್ ಅಪ್​ಡೇಟ್​ವೊಂದು ಹೊರಬಿದ್ದಿದೆ. ಈ ಅಪ್​ಡೇಟ್ ಪ್ರಕಾರ ಮುಂಬರುವ ಏಷ್ಯಾಕಪ್​ನಿಂದ ಭಾರತ ತಂಡದ ಪ್ರಮುಖ ಆಟಗಾರರು ಹೊರಗುಳಿಯಲಿದ್ದಾರೆ.

ಕ್ರಿಕ್​ಬಝ್​ ಮುಂದಿಟ್ಟಿರುವ ಮಾಹಿತಿ ಪ್ರಕಾರ, ಏಷ್ಯಾಕಪ್​ 2025ರ ತಂಡದಲ್ಲಿ ಶುಭ್​​ಮನ್ ಗಿಲ್ ಹಾಗೂ ಮೊಹಮ್ಮದ್ ಸಿರಾಜ್ ಕಾಣಿಸಿಕೊಳ್ಳುವುದಿಲ್ಲ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಇಬ್ಬರನ್ನು ಆಯ್ಕೆ ಮಾಡದಿರಲು ಬಿಸಿಸಿಐ ನಿರ್ಧರಿಸಿದೆ.

ಇನ್ನು ಏಷ್ಯಾಕಪ್​ನಲ್ಲಿ ಟೀಮ್ ಇಂಡಿಯಾ ಪರ ಇನಿಂಗ್ಸ್ ಆರಂಭಿಸುವುದು ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ. ಇಂಗ್ಲೆಂಡ್ ಹಾಗೂ ಸೌತ್ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಈ ಇಬ್ಬರು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು, ಹೀಗಾಗಿ ಇವರಿಬ್ಬರನ್ನೇ ಆರಂಭಿಕರಾಗಿ ಮುಂದುವರೆಸಲು ನಿರ್ಧರಿಸಲಾಗಿದೆ.

ಹಾಗೆಯೇ ಹೆಚ್ಚುವರಿ ಆರಂಭಿಕನಾಗಿ ಯಶಸ್ವಿ ಜೈಸ್ವಾಲ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ. ಅಂದರೆ ಜೈಸ್ವಾಲ್ ತಂಡದಲ್ಲಿ ಕಾಣಿಸಿಕೊಂಡರೂ ಆರಂಭಿಕ ಪಂದ್ಯಗಳ ವೇಳೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಥಾನ ಪಡೆಯುವುದು ಅನುಮಾನ.

ಇತ್ತ ಮೊಹಮ್ಮದ್ ಸಿರಾಜ್ ತಂಡದಲ್ಲಿ ಸ್ಥಾನ ಪಡೆಯದಿರುವ ಕಾರಣ ಹರ್ಷಿತ್ ರಾಣಾ ಅಥವಾ ಪ್ರಸಿದ್ಧ್ ಕೃಷ್ಣಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಲಭಿಸಲಿದೆ ಎಂದು ಕ್ರಿಕ್​ಬಝ್ ವರದಿಯಲ್ಲಿ ತಿಳಿಸಲಾಗಿದೆ.

ಮತ್ತೊಂದೆಡೆ ಟೀಮ್ ಇಂಢಿಯಾದ 2ನೇ ವಿಕೆಟ್ ಕೀಪರ್ ಆಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಜಿತೇಶ್ ಶರ್ಮಾ ಆಯ್ಕೆಯಾಗಲಿದ್ದಾರೆ ಎಂದು ಸ್ಪೋರ್ಟ್ಸ್​​ಸ್ಟಾರ್ ವರದಿ ಮಾಡಿದೆ. ಅಂದರೆ ಇಲ್ಲಿ ಮೊದಲ ವಿಕೆಟ್ ಕೀಪರ್  ಆಗಿ ಸಂಜು ಸ್ಯಾಮ್ಸನ್ ಕಾಣಿಸಿಕೊಂಡರೆ ಜಿತೇಶ್ ಶರ್ಮಾ ದ್ವಿತೀಯ ಕೀಪರ್ ಆಗಿ ಭಾರತ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.

ಇನ್ನು ಮಧ್ಯಮ ಕ್ರಮಾಂಕಕ್ಕಾಗಿ ಶ್ರೇಯಸ್ ಅಯ್ಯರ್ ಅವರನ್ನು ಪರಿಗಣಿಸಲು ಆಯ್ಕೆ ಸಮಿತಿ ನಿರ್ಧರಿಸಿದ್ದು, ಇದರಿಂದ ರಿಂಕು ಸಿಂಗ್ ಅಥವಾ ಶಿವಂ ದುಬೆ ತಂಡದಿಂದ ಹೊರಬೀಳುವ ಸಾಧ್ಯತೆಯನ್ನು ಸಹ ತಳ್ಳಿ ಹಾಕುವಂತಿಲ್ಲ ಎಂದು ಸ್ಪೋರ್ಟ್ಸ್​​ಸ್ಟಾರ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: IPL 2026: ಇಬ್ಬರ ಡೀಲ್… ಸಂಜು ಸ್ಯಾಮ್ಸನ್ ಮೇಲೆ KKR ಕಣ್ಣು

ಒಟ್ಟಿನಲ್ಲಿ ಈ ಬಾರಿಯ ಏಷ್ಯಾಕಪ್​ಗೆ ಟೀಮ್ ಇಂಡಿಯಾ ಆಯ್ಕೆಯು ಬಿಸಿಸಿಐ ಆಯ್ಕೆ ಸಮಿತಿಗೆ ಕಗ್ಗಂಟಾಗಿ ಪರಿಣಮಿಸಿದ್ದು, ಅಂತಿಮವಾಗಿ ಭಾರತ ತಂಡದಲ್ಲಿ ಕಾಣಿಸಿಕೊಳ್ಳಲಿರುವ 15 ಸದಸ್ಯರು ಯಾರೆಲ್ಲಾ ಎಂಬುದು ಇದೇ ವಾರದೊಳಗೆ ಗೊತ್ತಾಗಲಿದೆ.