ಇಂದು ವೆಲ್ಲಿಂಗ್‌ಟನ್‌ನಲ್ಲಿ ನಡೆಯಬೇಕಾಗಿದ್ದ ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವಿನ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದಾಗಿದೆ. ಭಾರೀ ಮಳೆಯಿಂದಾಗಿ ಈ ಪಂದ್ಯದ ಟಾಸ್ ಕೂಡ ನಡೆಯಲಿಲ್ಲ. ಸುದೀರ್ಘ ಕಾಯುವಿಕೆಯ ನಂತರ ಅಂಪೈರ್ಗಳು ಪಂದ್ಯವನ್ನು ರದ್ದುಗೊಳಿಸಲು ನಿರ್ಧರಕ್ಕೆ ಬಂದಿದ್ದಾರೆ. ವೆಲ್ಲಿಂಗ್‌ಟನ್‌ನಲ್ಲಿ ಟಾಸ್ ನಡೆಯುವ ವೇಳೆಗೆ ಮಳೆ ಸುರಿಯಲಾರಂಭಿಸಿತು. ಆಗ ಆರಂಭವಾದ ಮಳೆ ನಿಲ್ಲುವ ಮುನ್ಸೂಚನೆಯನ್ನೇ ನೀಡಲಿಲ್ಲ. ಹೀಗಾಗಿ ಪಂದ್ಯವನ್ನು ರದ್ದುಗೊಳಿಸಲಾಗಿದೆ.
ಒಂದು ಹಂತದಲ್ಲಿ ಮಳೆ ಕೊಂಚ ವಿರಾಮ ತೆಗೆದುಕೊಂಡಿದ್ದರಿಂದ ಆಟ ಶುರುವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಮತ್ತೆ ಸುರಿಯಲಾರಂಭಿಸಿದ ಮಳೆ ಎಲ್ಲ ನಿರೀಕ್ಷೆಗಳನ್ನು ಧ್ವಂಸ ಮಾಡಿತು. ಹಾಗೆಯೇ ಬಿಡುವಿಲ್ಲದ ಸುರಿದ ಭಾರೀ ಮಳೆಯಿಂದಾಗಿ ಕ್ರೀಡಾಂಗಣದ ಹೊರಭಾಗದ ಹಲವೆಡೆ ನೀರು ತುಂಬಿತ್ತು.
ಟಿ20 ವಿಶ್ವಕಪ್‌ನಲ್ಲಿ ಉಭಯ ತಂಡಗಳ ಪಯಣ ಸೆಮಿಫೈನಲ್‌ನಲ್ಲಿ ಕೊನೆಗೊಂಡಿದ್ದರಿಂದ ಎಲ್ಲರ ಕಣ್ಣುಗಳು ಈ ಮೊದಲ ಟಿ20 ಪಂದ್ಯದ ಮೇಲಿತ್ತು. ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್, ಪಾಕಿಸ್ತಾನದ ಎದುರು ಸೋತು ಪಂದ್ಯಾವಳಿಯಿಂದ ಹೊರಬಿದ್ದರೆ, ಟೀಂ ಇಂಡಿಯಾ, ಇಂಗ್ಲೆಂಡ್ ಎದುರು 10 ವಿಕೆಟ್‌ಗಳಿಂದ ಸೋತು ಮುಜುಗರದೊಂದಿಗೆ ವಿಶ್ವಕಪ್ಗೆ ವಿದಾಯ ಹೇಳಿತ್ತು.
ಯುವಕರಿಗೆ ಅವಕಾಶ
ಈ ಪ್ರವಾಸದಲ್ಲಿ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಅವರಿಗೆ ವಿಶ್ರಾಂತಿ ನೀಡಿ ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಶುಭಮನ್ ಗಿಲ್, ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್ಗೆ ಈ ಪಂದ್ಯದಲ್ಲಿ ಅವಕಾಶ ಸಿಗುವ ನಿರೀಕ್ಷೆ ಇತ್ತು. ಅಲ್ಲದೆ ಗಿಲ್ ಕೂಡ ಟಿ20 ತಂಡದಲ್ಲಿ ಚೊಚ್ಚಲ ಪ್ರವೇಶಕ್ಕಾಗಿ ಕಾಯುತ್ತಿದ್ದರು. ಆದರೆ ಮಳೆಯು ಅವರ ಕಾಯುವಿಕೆಯನ್ನು ಮತ್ತಷ್ಟು ವಿಸ್ತರಿಸಿದೆ. ಇದೀಗ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ 3 ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯ ನವೆಂಬರ್ 20 ರಂದು ನಡೆಯಲಿದೆ.
ಟಿ20 ಸರಣಿಗೆ ಉಭಯ ತಂಡಗಳು
ನ್ಯೂಜಿಲೆಂಡ್ ಟಿ20 ತಂಡ: ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಲಾಕಿ ಫರ್ಗುಸನ್, ಡ್ಯಾರಿಲ್ ಮಿಚೆಲ್, ಆಡಮ್ ಮಿಲ್ನೆ, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಇಶ್ ಸೋಧಿ, ಬ್ಲೇರ್ ಟಿಕ್ನರ್.
ಟಿ20 ಸರಣಿಗೆ ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರಿಷಬ್ ಪಂತ್ (ಉಪನಾಯಕ/ ವಿಕೆಟ್‌ಕೀಪರ್), ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್.
Published On - 1:50 pm, Fri, 18 November 22