ದಕ್ಷಿಣ ಆಫ್ರಿಕಾ ಪ್ರವಾಸವನ್ನು ಭಾರತ (India vs South Africa) ಭರ್ಜರಿ ಆಗಿ ಆರಂಭಿಸಿದಂತಿದೆ. ಮೊದಲ ಟೆಸ್ಟ್ನ ಮೊದಲ ದಿನವೇ ಪ್ರಾಬಲ್ಯ ಮೆರೆದ ಟೀಮ್ ಇಂಡಿಯಾ (Team India) ದೊಡ್ಡ ಮೊತ್ತದತ್ತ ಸಾಗುತ್ತಿದೆ. ಪ್ರಮುಖವಾಗಿ ಕೆಎಲ್ ರಾಹುಲ್ (KL Rahul) ಮನಮೋಹಕ ಶತಕ ಸಿಡಿಸಿ ತಂಡದ ರನ್ ಗತಿ ಏರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಬ್ಯಾಟಿಂಗ್ ಆರಂಭಿಸಿದ ಭಾರತ ತಂಡದ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಗೆ (Mayank Agarwal) ಮೊದಲ ಒಂದು ಗಂಟೆಯ ಆಟ ಬಹಳ ಕಠಿಣವಾಗಿತ್ತು. ದಕ್ಷಿಣ ಆಫ್ರಿಕಾದ ವೇಗದ ಬೌಲಿಂಗ್ ಜೋಡಿ ಕಗಿಸೋ ರಬಾಡ (Kagiso Rabada) ಹಾಗೂ ಲುಂಗಿ ಎನ್ ಗಿಡಿ (Lungi Ngidi) ಭಾರತದ ಆರಂಭಿಕರ ತಾಳ್ಮೆಯನ್ನು ಪರೀಕ್ಷೆ ಮಾಡಿದರು. ಆದರೆ, ರನ್ ಗಳಿಸುವ ಅವಕಾಶ ಇದ್ದಾಗಲೆಲ್ಲಾ, ಆಕ್ರಮಣಕಾರಿ ಆಟವಾಡುವ ಮೂಲಕ ಸ್ಕೋರ್ ಬೋರ್ಡ್ ಚಾಲ್ತಿಯಲ್ಲಿಟ್ಟಿದ್ದರು.
ಪದಾರ್ಪಣೆ ಪಂದ್ಯವಾಡಿದ ಮಾರ್ಕೋ ಜಾನ್ಸೆನ್ ರನ್ನು ಗುರಿಯಾಗಿಸಿಕೊಂಡು ಮಯಾಂಕ್ ರನ್ ಗಳಿಸಿದರು. ಮೊದಲ ಅವಧಿಯಲ್ಲಿ ಎಚ್ಚರಿಕೆಯ ಆಟವಾಡಿದ ಜೋಡಿ ಮೊದಲ ವಿಕೆಟ್ ಗೆ 117 ರನ್ ಜೊತೆಯಾಟವಾಡಿದರು. ಇದು ಏಷ್ಯಾದ ಹೊರಗೆ ಹಾಲಿ ವರ್ಷದಲ್ಲಿ ಭಾರತದ ಆರಂಭಿಕರ 7ನೇ ಶತಕದ ಜೊತೆಯಾಟವಾಡಿದೆ. ಇದು ದಾಖಲೆ ಕೂಡ ಹೌದು. ರೋಹಿತ್ ಶರ್ಮಾ ಅನುಪಸ್ಥಿತಿ ಕಾಡದಂತೆ ಈ ಜೋಡಿ ಒಳ್ಳೆಯ ಆರಂಭ ಕೊಟ್ಟಿದ್ದು ಭಾರತ ತಂಡದ ಇನ್ನಿಂಗ್ಸ್ ಕಟ್ಟಲು ನೆರವಾಯಿತು. ಇವರಿಬ್ಬರು ಮೊದಲ ವಿಕೆಟ್‌ಗೆ ಶತಕದ (117 ರನ್) ಜೊತೆಯಾಟ ಕಟ್ಟಿದರು. 123 ಎಸೆತಗಳನ್ನು ಎದುರಿಸಿದ ಅಗರವಾಲ್ ಒಂಬತ್ತು ಬೌಂಡರಿಗಳ ನೆರವಿನಿಂದ 60 ರನ್ ಗಳಿಸಿದರು.
ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದುಕೊಳ್ಳಲು ಮಾಡಿದ ಮಾಸ್ಟರ್ ಪ್ಲಾನ್ ಏನು ಎಂಬುದನ್ನು ಪಂದ್ಯ ಮುಗಿದ ಬಳಿಕ ಮಯಾಂಕ್ ಅಗರ್ವಾಲ್ ತಿಳಿಸಿದ್ದಾರೆ. “ನಾವು ಪಂದ್ಯ ಆರಂಭದ ಹೊತ್ತಿಗೆ ಮಾತನಾಡಿಕೊಂಡೆವು. ಸ್ಟಂಪ್ ಹತ್ತಿರದಲ್ಲಿ ಬರುವ ಎಲ್ಲ ಚೆಂಡುಗಳನ್ನ ಬಿಡುವ ಬಗ್ಗೆ ತೀರ್ಮಾನ ಮಾಡಿಕೊಂಡೆವು. 272 ರನ್ಗೆ 3 ವಿಕೆಟ್ ಎಂದರೆ ಇದರ ಕ್ರೆಡಿಟ್ ಬ್ಯಾಟಿಂಗ್ ವಿಭಾಗಕ್ಕೆ ಸಿಗಬೇಕು. ಯಾರು ಕ್ರೀಸ್ನಲ್ಲಿ ಸೆಟ್ ಆಗುತ್ತಾರೊ ಅವರು ರನ್ ಗಳಿಸುತ್ತಾ ಸಾಗಬೇಕು ಎಂಬುದು ನಮ್ಮ ಪ್ಲಾನ್ ಆಗಿತ್ತು. ರಾಹುಲ್ ಥೇಟ್ ಅದೇ ರೀತಿ ಮಾಡಿದರು” ಎಂದು ಅಗರ್ವಾಲ್ ಹೇಳಿದ್ದಾರೆ.
“ಇಂದಿನ ಪಂದ್ಯದ ಹೈಲೇಟ್ ಎಂದರೆ ಅದು ಕೆಎಲ್ ರಾಹುಲ್ ಶತಕ. ನಮ್ಮಿಬ್ಬರ ಜೊತೆಯಾಟ ಮುಖ್ಯವಾಗಿತ್ತು. ನಂತರ ಕೊಹ್ಲಿ ಜೊತೆಗೂ ಉತ್ತಮ ಜೊತೆಯಾಟ ಮೂಡಿಬಂತು. ರಹಾನೆ ಅವರೊಂದಿಗೂ ಅತ್ಯುತ್ತಮ ಆಟ ಆಡುತ್ತಿದ್ದಾರೆ. ಇದು ಎರಡನೇ ದಿನವೂ ಮುಂದುವರೆಬೇಕು” ಎಂಬುದು ಅಗರ್ವಾಲ್ ಮಾತು.
India vs South Africa: ಸೆಂಚೂರಿಯನ್ನಲ್ಲಿ ಕೆಎಲ್ ರಾಹುಲ್ ಸೆಂಚುರಿ: ಎರಡನೇ ದಿನದಾಟದ ಮೇಲೆ ಎಲ್ಲರ ಕಣ್ಣು
(Mayank Agarwal said batters applied themselves as per the team plan on India vs South Africa 1st Test)