T20 World Cup 2022: ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನನ್ನ ತವರು ಮೈದಾನ…ಹೀಗೊಂದು ಹೇಳಿಕೆಯ ಮೂಲಕ ಪಾಕಿಸ್ತಾನ್ ತಂಡದ ವೇಗಿ ಹ್ಯಾರಿಸ್ ರೌಫ್ (Haris Rauf) ಟೀಮ್ ಇಂಡಿಯಾಗೆ (Team India) ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. ಅಷ್ಟಕ್ಕೂ ಹ್ಯಾರಿಸ್ ರೌಫ್ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ನನ್ನ ತವರು ಮೈದಾನ ಎನ್ನಲು ಕಾರಣವೇನು ಎಂದು ನೋಡುವುದಾದರೆ, ಅದೇ ಸ್ಟೇಡಿಯಂನಲ್ಲಿ ಭಾರತ ಹಾಗೂ ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಅಂದರೆ ಅಕ್ಟೋಬರ್ 23 ರಂದು ನಡೆಯಲಿರುವ ಐವೋಲ್ಟೇಜ್ ಪಂದ್ಯಕ್ಕೆ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ ಆತಿಥ್ಯವಹಿಸಲಿದೆ. ಆದರೆ ಈ ಪಂದ್ಯವನ್ನು ಪಾಕ್ ವೇಗಿ ಹ್ಯಾರಿಸ್ ರೌಫ್ ಕಾತುರದಿಂದ ಎದುರು ನೋಡುತ್ತಿದ್ದಾರೆ.
ಏಕೆಂದರೆ ಹ್ಯಾರಿಸ್ ರೌಫ್ ಆಸ್ಟ್ರೇಲಿಯಾದಲ್ಲಿ ಬಿಗ್ ಬ್ಯಾಷ್ ಲೀಗ್ ಆಡುವ ಆಟಗಾರ. ಒಂದಾರ್ಥದಲ್ಲಿ ಬಿಬಿಎಲ್ ಮೂಲಕವೇ ರೌಫ್ ಪಾಕಿಸ್ತಾನ್ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದರು ಎಂದರೆ ತಪ್ಪಾಗಲಾರದು. ಇಲ್ಲಿ ವಿಶೇಷತೆ ಏನೆಂದರೆ ಹ್ಯಾರಿಸ್ ರೌಫ್ ಬಿಬಿಎಲ್ನಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಮೆಲ್ಬೋರ್ನ್ ಮೈದಾನವು ನನ್ನ ತವರು ಸ್ಟೇಡಿಯಂ ಎಂದು ಪಾಕ್ ಆಟಗಾರ ಟೀಮ್ ಇಂಡಿಯಾಗೆ ಎಚ್ಚರಿ ರವಾನಿಸಿದ್ದಾರೆ.
ನಾನು ನನ್ನ ಅತ್ಯುತ್ತಮ ಪ್ರದರ್ಶನ ನೀಡಿದರೆ, ಅವರು ನನ್ನ ವಿರುದ್ಧ ಸುಲಭವಾಗಿ ಆಡಲು ಸಾಧ್ಯವಾಗುವುದಿಲ್ಲ. ಇದೀಗ ಟಿ20 ವಿಶ್ವಕಪ್ ಪಂದ್ಯವು ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿರುವುದರಿಂದ ನನಗೆ ತುಂಬಾ ಸಂತೋಷವಾಗಿದೆ.
ಏಕೆಂದರೆ ಮೆಲ್ಬೋರ್ನ್ ಸ್ಟಾರ್ಸ್ ತಂಡದ ಆಟಗಾರನಾಗಿರುವ ನನಗೆ ಎಂಸಿಜಿ ತವರು ಮೈದಾನವಾಗಿದೆ. ಈ ಮೈದಾನದಲ್ಲಿನ ಪಿಚ್ನ ಸ್ಥಿತಿಗತಿಗಳು ಹಾಗೂ ಪರಿಸ್ಥಿತಿಗಳು ಹೇಗೆ ಇರುತ್ತದೆ ಎಂಬುದರ ಕುರಿತು ನನಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಭಾರತದ ವಿರುದ್ಧದ ಪಂದ್ಯದಲ್ಲಿ ಹೇಗೆ ಬೌಲಿಂಗ್ ಮಾಡಬೇಕು ಎಂಬುದರ ಬಗ್ಗೆ ಈಗಲೇ ಪ್ಲ್ಯಾನ್ ರೂಪಿಸಿದ್ದೇನೆ ಎಂದು ಹ್ಯಾರಿಸ್ ರೌಫ್ ಹೇಳಿದ್ದಾರೆ.
ಅಚ್ಚರಿಯೆಂದರೆ ಕಳೆದ ಒಂದು ವರ್ಷದಲ್ಲಿ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ವೇಗದ ಚೆಂಡೆಸೆತ ದಾಖಲೆ ಕೂಡ ಹ್ಯಾರಿಸ್ ರೌಫ್ ಹೆಸರಿನಲ್ಲಿದೆ. 2021 ರ ಟಿ20 ವಿಶ್ವಕಪ್ ಬಳಿಕ ರೌಫ್ 140+ ವೇಗದಲ್ಲಿ ಬರೋಬ್ಬರಿ 173 ಬಾರಿ ಬೌಲಿಂಗ್ ಮಾಡಿದ್ದಾರೆ. ಹೀಗಾಗಿಯೇ ಹ್ಯಾರಿಸ್ ರೌಫ್ ಅವರ ವಾರ್ನಿಂಗ್ ಟೀಮ್ ಇಂಡಿಯಾ ಪಾಲಿಗೆ ಖಡಕ್ ಎಚ್ಚರಿಕೆ ಎಂದೇ ಹೇಳಬಹುದು.
ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.
ಮೀಸಲು ಆಟಗಾರರು: ಮೊಹಮ್ಮದ್ ಸಿರಾಜ್, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ಶಾರ್ದೂಲ್ ಠಾಕೂರ್