ಮುಂಬೈ ಇಂಡಿಯನ್ಸ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡಗಳಲ್ಲಿ ಅಗ್ರಸ್ಥಾನದಲ್ಲಿದೆ, ಏಕೆಂದರೆ ಈ ತಂಡದಲ್ಲಿ ಮ್ಯಾಚ್ ವಿನ್ನರ್‌ಗಳ ದಂಡೆ ಇದೆ. ಆದರೆ ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ತೀರಾ ಕಳಪೆ ಪ್ರದರ್ಶನ ತೋರಿದ ಮುಂಬೈ ಇಂಡಿಯನ್ಸ್ (Mumbai Indians) ಇದೀಗ ಐಪಿಎಲ್ 2023 (IPl 2023) ಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿದೆ. ಇದರ ಮೊದಲ ಹೆಜ್ಜೆಯಾಗಿ 13 ಆಟಗಾರರನ್ನು ತನ್ನ ತಂಡದಿಂದ ಬಿಡುಗಡೆ ಮಾಡಿದೆ. ಈ ಸಾಲಿನಲ್ಲಿ ವೆಸ್ಟ್ ಇಂಡೀಸ್ ದಿಗ್ಗಜ ಆಟಗಾರ ಕೀರನ್ ಪೊಲಾರ್ಡ್ (Kieron Pollard) ಕೂಡ ಇದ್ದಾರೆ. 2010ರಲ್ಲಿ ಮುಂಬೈ ತಂಡದ ಪರವೇ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ್ದ ಪೊಲಾರ್ಡ್ ಅವರನ್ನು ಇದೀಗ ಫ್ರಾಂಚೈಸಿ ಕೈಬಿಟ್ಟಿದೆ.
ಹಾಗೆಯೇ ಉಳಿಸಿಕೊಂಡಿರುವ ಮತ್ತು ಬಿಡುಗಡೆಯಾದ ಆಟಗಾರರ ಅಂತಿಮ ಪಟ್ಟಿಯನ್ನು ಬಿಸಿಸಿಐಗೆ ಹಸ್ತಾಂತರಿಸುವ ಮೊದಲು, ಮುಂಬೈ ಇಂಡಿಯನ್ಸ್ ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿದೆ. ತಮ್ಮ ಬೌಲಿಂಗ್ ವಿಭಾಗವನ್ನು ಬಲಿಷ್ಠಗೊಳಿಸುವ ಸಲುವಾಗಿ, ಕಳೆದ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಆಸ್ಟ್ರೇಲಿಯದ ಎಡಗೈ ವೇಗದ ಬೌಲರ್ ಜೇಸನ್ ಬೆಹ್ರೆಂಡಾರ್ಫ್ ಅವರನ್ನು ಟ್ರೇಡಿಂಗ್ ಮೂಲಕ ಖರೀದಿ ಮಾಡಿದೆ.
ಎಂಐ ಉಳಿಸಿಕೊಂಡಿರುವ ಆಟಗಾರರು
ರೋಹಿತ್ ಶರ್ಮಾ, ಟಿಮ್ ಡೇವಿಡ್, ರಮಣದೀಪ್ ಸಿಂಗ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಟ್ರಿಸ್ಟಾನ್ ಸ್ಟಬ್ಸ್, ಬ್ರೂಯಿಸ್, ಆರ್ಚರ್, ಬುಮ್ರಾ, ಅರ್ಜುನ್ ತೆಂಡೂಲ್ಕರ್, ಅರ್ಷದ್ ಖಾನ್, ಕುಮಾರ್ ಕಾರ್ತಿಕೇಯ, ಹೃತಿಕ್ ಶೋಕೀನ್, ಬೆಹ್ರೆನ್‌ಡಾರ್ಫ್, ಆಕಾಶ್ ಮಧ್ವಲ್.
ಇದನ್ನೂ ಓದಿ: CSK Retained Players: ಬ್ರಾವೋ ಸೇರಿದಂತೆ 8 ಆಟಗಾರರು ಚೆನ್ನೈ ತಂಡದಿಂದ ಔಟ್..! ಉಳಿದವರೆಷ್ಟು?
ಬಿಡುಗಡೆ ಮಾಡಿರುವ ಆಟಗಾರರು
ಕೀರನ್ ಪೊಲಾರ್ಡ್, ರಿಲೆ ಮೆರೆಡಿತ್, ಡೇನಿಯಲ್ ಸ್ಯಾಮ್ಸ್, ಫ್ಯಾಬಿಯನ್ ಅಲೆನ್, ಟಿಮಲ್ ಮಿಲ್ಸ್, ಸಂಜಯ್ ಯಾದವ್, ಆರ್ಯನ್ ಜುಯಲ್, ಮಯಾಂಕ್ ಮಾರ್ಕಂಡೆ, ಮುರುಗನ್ ಅಶ್ವಿನ್, ರಾಹುಲ್ ಬುದ್ಧಿ, ಅನ್ಮೋಲ್ಪ್ರೀತ್ ಸಿಂಗ್, ಜಯದೇವ್ ಉನದ್ಕತ್, ಬಾಸಿಲ್ ಥಂಪಿ.
ಮಿನಿ ಹರಾಜಿನಲ್ಲಿ ಈ ಆಟಗಾರರ ಮೇಲೆ ಕಣ್ಣು
ಇದೀಗ ಮಿನಿ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಮ್ಮ ಆಲ್ ರೌಂಡ್ ಪ್ರದರ್ಶನದಿಂದ ಪಂದ್ಯ ಗೆಲ್ಲಬಲ್ಲ ಕೆಲ ಆಟಗಾರರ ಮೇಲೆ ಬಾಜಿ ಕಟ್ಟಲು ಮುಂದಾಗಿರುವುದು ರಿಟೇನ್ ಹಾಗೂ ರಿಲೀಸ್ ಆಗಿರುವ ಆಟಗಾರರ ಪಟ್ಟಿ ನೋಡಿದರೆ ಸ್ಪಷ್ಟವಾಗಿದೆ. ಐಪಿಎಲ್ 2023 ರ ಕಿರು ಹರಾಜು ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿದೆ.
ಮುಂಬೈ ಇಂಡಿಯನ್ಸ್‌ನ ಕೊನೆಯ ಸೀಸನ್ ತುಂಬಾ ಕೆಟ್ಟದಾಗಿತ್ತು. 5 ಬಾರಿಯ ಐಪಿಎಲ್ ಚಾಂಪಿಯನ್ 15ನೇ ಸೀಸನ್ನಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯಿತು. ಈ ತಂಡವು ಕಳೆದ ಸೀಸನ್ಲ್ಲಿ ಪಂದ್ಯಾವಳಿಯಲ್ಲಿ 14 ಪಂದ್ಯಗಳನ್ನು ಆಡಿತ್ತು, ಅದರಲ್ಲಿ ಕೇವಲ 4 ಪಂದ್ಯಗಳಲ್ಲಿ ಗೆದ್ದು, 10 ರಲ್ಲಿ ಸೋತಿತ್ತು.
ಹೀಗಾಗಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಐಪಿಎಲ್ 2022 ರ ನಿರಾಸೆಯನ್ನು ಐಪಿಎಲ್ 2023 ರಲ್ಲಿ ಪ್ರಶಸ್ತಿ ಗೆದ್ದ ಸಂತೋಷವನ್ನಾಗಿ ಪರಿವರ್ತಿಸಲು ಬಯಸುತ್ತದೆ. ಇದಕ್ಕಾಗಿ ಅವರು ಪ್ರಮುಖ ಆಟಗಾರರನ್ನು ಉಳಿಸಿಕೊಂಡು ಅನೇಕ ಆಟಗಾರರನ್ನು ಬಿಡುಗಡೆ ಮಾಡುವ ಮೂಲಕ ಮೊದಲ ಹೆಜ್ಜೆ ಇಟ್ಟಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:23 pm, Wed, 16 November 22